

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೆ ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದರೆ, ಇದಕ್ಕೆ ರೈತರ ಶ್ರಮವೇ ಕಾರಣ. ಅದಕ್ಕಾಗಿ ನಾವೆಲ್ಲರೂ ಅನ್ನ ತಿನ್ನುವ ಮೊದಲು ರೈತರನ್ನು ಸ್ಮರಿಸಬೇಕು ಎಂದು ಸ್ಲಮ್ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಹುಬ್ಬಳ್ಳಿ ತಾಲೂಕು ರೈತ ಸಂಘ ಸೋಮವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಹಾಗೂ ನೇಗಿಲಯೋಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು. ನಮಗೆಲ್ಲರಿಗೂ ಡಾಕ್ಟರ್, ಲಾಯರ್, ಇಂಜಿನಿಯರ್ಗಳು ಮಾತ್ರ ಮುಖ್ಯ ಎನಿಸುತ್ತಾರೆ. ಆದರೆ, ಮೂರು ಹೊತ್ತು ಅನ್ನಕ್ಕೆ ಕಾರಣವಾಗಿರುವ ರೈತನ ನೆನಪು ಮಾತ್ರ ಬರುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಯಾರೇ ಅಧಿಕಾರಕ್ಕೆ ಬಂದರೂ ರೈತ ರಾಗಿ ಬೀಸುವುದು ತಪ್ಪಿಯೇ ಇಲ್ಲ. ಸಮಾಜ ಹಾಗೂ ಆಳುವ ಸರ್ಕಾರಗಳು ರೈತರ ಋಣವನ್ನು ತೀರಿಸುವುದಕ್ಕೆ ಕಟಿಬದ್ಧವಾಗಬೇಕು. ನಾಡಿನಲ್ಲಿ ಇನ್ನೂ ಧರ್ಮ, ನೀತಿ, ನ್ಯಾಯ, ಪರೋಪಕಾರ ಇಂಥ ಸದ್ಗುಣಗಳು ಉಳಿದಿರುವುದು ಕೃಷಿಕ ವರ್ಗದವರಿಂದಲೇ ಎಂದು ಹೇಳಿದರು.
ರಾಯನಾಳ ವಿರಕ್ತಮಠದ ಶ್ರೀ ಅಭಿನವ ರೆವಣಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ.ಅಬ್ದುಲಖಾದರ್ ನಡಕಟ್ಟಿನ ಅವರನ್ನು ಸನ್ಮಾನಿಸಲಾಯಿತು.