

ಸುಗ್ಗರಾಜು ಜಿ.ಕೆ. ನೆಲಮಂಗಲ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು, ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸಿವೆ. ತನ್ಮೂಲಕ ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಜನಜಾಗೃತಿ ಮೂಡಿಸುತ್ತಿವೆ. ಇಂಥ ಸನ್ನಿವೇಶದಲ್ಲಿ ರಾಜ್ಯ ರಾಜಧಾನಿಯ ಹೆಬ್ಬಾಗಿಲು ನೆಲಮಂಗಲದಲ್ಲಿ ಸಮರ್ಪಕ ಸಾರ್ವಜನಿಕ ಶೌಚಗೃಹಗಳ ವ್ಯವಸ್ಥೆ ಕಲ್ಪಿಸುವಲ್ಲಿ ತಾಲೂಕು ಆಡಳಿತ, ನಗರಸಭೆ ವಿಲವಾಗಿದೆ.
ತಾಲೂಕು ಕೇಂದ್ರದಲ್ಲಿ ಸಾರ್ವಜನಿಕ ಆಸ್ಪತ್ರೆ ಅಲ್ಲದೆ 25ಕ್ಕೂ ಹೆಚ್ಚು ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳಿವೆ. ಕೆಲಸ ಕಾರ್ಯಗಳಿಗಾಗಿ ನಿತ್ಯವೂ ಸಾವಿರಾರು ಜನ ನಗರಕ್ಕೆ ಭೇಟಿ ನೀಡುವುದು ಸಹಜ. ಬೆಂಗಳೂರು ನಗರದತ್ತ ಸಂಚರಿಸುವ ಲಕ್ಷಾಂತರ ಜನರು ತಾಲೂಕು ಕೇಂದ್ರವನ್ನು ಹಾದು ಹೋಗಬೇಕಿದೆ. ಈ ವೇಳೆ ದೈಹಿಕ ಬಾಧೆ ತೀರಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿವೆ. ಮಹಿಳೆಯರ ಪಾಡಂತೂ ಹೇಳತೀರದು.
ಶೌಚಗೃಹಗಳ ಕೊರತೆ: ತಾಲೂಕು ಕಚೇರಿಗೆ ಬಂದು ಹೋಗುವವರ ಸಂಖ್ಯೆ ಅಧಿಕವಾಗುತ್ತಿದ್ದರೂ ಕಚೇರಿ ಬಳಿ ಹಾಗೂ ನಗರದ ವಿವಿಧೆಡೆ ಸಾರ್ವಜನಿಕ ಶೌಚಗೃಹ ನಿರ್ಮಿಸಿಲ್ಲ. ಇದ್ದರೂ ಅವು ಅಧಿಕಾರಿ, ಸಿಬ್ಬಂದಿಗೆ ಸೀಮಿತವಾಗಿದೆ. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಗೋಜಿಗೆ ಹೋಗದಿರುವ ನಗರಸಭೆ ಹಾಗೂ ತಾಲೂಕು ಆಡಳಿತಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ನಿರ್ವಹಣೆಯೂ ಇಲ್ಲ, ಉದ್ಘಾಟನೆಯೂ ಆಗಿಲ್ಲ: ನಗರದ ಸಾರ್ವಜನಿಕ ಬಸ್ ನಿಲ್ದಾಣದ ಬಳಿ 2 ಶೌಚಗೃಹ ಹಾಗೂ ಪ್ರವಾಸಿ ಮಂದಿರ ಮುಖ್ಯರಸ್ತೆಯಲ್ಲಿನ ಶೌಚಗೃಹ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ. ಬಸವನಹಳ್ಳಿ ಬಸ್ ನಿಲ್ದಾಣದ ಬಳಿಯ ಶೌಚಗೃಹ, 3 ವರ್ಷಗಳ ಹಿಂದೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಂಭಾಗ ನಿರ್ಮಿಸಿದ್ದ ಶೌಚಗೃಹ, 6 ತಿಂಗಳ ಹಿಂದೆ ಪಂಪ್‌ಹೌಸ್ ಬಳಿ ನಿರ್ಮಿಸಿರುವ ಶೌಚಗೃಹಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿಲ್ಲ. ಇದರಿಂದ ಜನರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದು, ದುರ್ವಾಸನೆ ಹಬ್ಬಿದೆ.
ಇ-ಶೌಚಗೃಹಕ್ಕಿಲ್ಲ ಸ್ಥಳಾವಕಾಶ: ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಇ-ಶೌಚಗೃಹಗಳಿಗೆ ಸೂಕ್ತ ಸ್ಥಳ ಕಲ್ಪಿಸಿಕೊಡುವಲ್ಲಿ ನಗರಸಭೆ ಅಧಿಕಾರಿಗಳು ವಿಲವಾಗಿದ್ದಾರೆ. ಕಳೆದೆರಡು ವರ್ಷಗಳಿಂದ ನಗರದ ವೀವರ್ಸ್ ಕಾಲನಿ ರಸ್ತೆ ಪಕ್ಕದಲ್ಲಿ ಇರಿಸಿರುವ ಇ-ಶೌಚಗೃಹ ನಿರ್ದಿಷ್ಟ ಉದ್ದೇಶಕ್ಕೆ ಬಳಕೆಯಾಗದೆ ಪ್ರಚಾರಕ್ಕೆ ಸೀಮಿತವಾಗಿದೆ. ಮತ್ತೊಂದೆಡೆ ಕೆಲ ಚುನಾಯಿತ ಪ್ರತಿನಿಧಿಗಳೇ ಸ್ವಹಿತಾಸಕ್ತಿಗಾಗಿ ಅಡ್ಡಗಾಲು ಹಾಕುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಶೌಚಗೃಹಗಳು ಅಗತ್ಯವಿರುವ ಸ್ಥಳಗಳು: ಸದ್ಯಕ್ಕೆ ತಾಲೂಕು ಕಚೇರಿ, ನಗರಸಭೆ, ಸಾರ್ವಜನಿಕ ಬಸ್ ನಿಲ್ದಾಣ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸೊಂಡೇಕೊಪ್ಪ ವೃತ್ತ ಹಾಗೂ ಕುಣಿಗಲ್ ವೃತ್ತದ ಬಸ್ ನಿಲ್ದಾಣ, ಅಗ್ನಿಶಾಮಕ ಕಚೇರಿ ಸಮೀಪದಲ್ಲಿ ಶೌಚಗೃಹ ನಿರ್ಮಿಸಬೇಕಾದ ಅನಿವಾರ್ಯತೆ ಹೆಚ್ಚಾಗಿದೆ. ಜತೆಗೆ ನಿರ್ಮಿಸಿರುವ ಶೌಚಗೃಹಗಳನ್ನು ಬಳಕೆಗೆ ಮುಕ್ತಗೊಳಿಸಿ, ಸಮರ್ಪಕವಾಗಿ ನಿರ್ವಹಿಸಬೇಕಿದೆ.
ಬೆಂಗಳೂರು ನಗರಕ್ಕೆ ಹೊಂದಿಕೊಂಡಂತಿರುವ ನಗರದಲ್ಲಿ ಶೌಚಗೃಹಗಳ ಸಮಸ್ಯೆ ಇದ್ದು, ಗ್ರಾಮೀಣ ಪ್ರದೇಶದ ಸ್ಥಿತಿ ಊಹಿಸಿಕೊಳ್ಳಲು ಸಾಧ್ಯವಿಲ್ಲ. ನಗರಸಭೆ ಹಾಗೂ ತಾಲೂಕು ಕಚೇರಿಗೆ ಬರುವ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಗೃಹ ನಿರ್ಮಿಸಿಕೊಟ್ಟು ಅನುಕೂಲ ಮಾಡಿಕೊಡಬೇಕು. ರಾಜಮ್ಮ, ನೆಲಮಂಗಲ ಕ್ಷೇತ್ರದ ಶಾಸಕರು ಹಾಗೂ ವಿವಿಧ ಹಂತದ ಜನಪ್ರತಿನಿಧಿಗಳು ಪ್ರತಿವರ್ಷ ವರ್ಗಾವಣೆಯಾಗಿ ಬರುವ ತಾಲೂಕು ಆಡಳಿತದ ಮುಖ್ಯಸ್ಥರು ಈ ಬಗ್ಗೆ ಗಮನಹರಿಸುತ್ತಿಲ್ಲ. ಇದರಿಂದಾಗಿ ಸಾರ್ವಜನಿಕ ಶೌಚಗೃಹದ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಮುನಿರಾಜು, ಕೆಂಪಲಿಂಗನಹಳ್ಳಿ ನಗರದಲ್ಲಿ ಅವಶ್ಯವಿರುವೆಡೆ ಶೌಚಗೃಹಗಳನ್ನು ನಿರ್ಮಿಸುವುದು ಮುಖ್ಯವಲ್ಲ. ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ನೈರ್ಮಲ್ಯಯುತ ನಗರ ನಿರ್ಮಾಣ ಮಾಡಿಕೊಡಬೇಕು. ಪುನೀತ್, ನೆಲಮಂಗಲ ಶೌಚಗೃಹಗಳಿಲ್ಲದೆ ಅನೈರ್ಮಲ್ಯಕ್ಕೆ ಎಡೆಯಾಗುತ್ತಿರುವ ಸ್ಥಳಗಳ ಸ್ವಚ್ಛತೆ ಜತೆಗೆ ಸ್ಥಳ ಪರಿಶೀಲಿಸಿ ಅಗತ್ಯವಿರುವೆಡೆ ಸಾರ್ವಜನಿಕ ಶೌಚಗೃಹ ನಿರ್ಮಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಜಶೇಖರ್, ಪೌರಾಯುಕ್ತ