ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ

Crime Logo
Published on

ಧಾರವಾಡ: ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ, ಅದಕ್ಕೆ ಅಡ್ಡಿಯಾದ ಆಕೆಯ ಪತಿಯನ್ನು ಕೊಲೆಗೈದ ಘಟನೆ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಪೀರಸಾಬ್ ನದಾಫ್ (36) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಸೋಮಯ್ಯ ಪೂಜಾರ ಕೊಲೆ ಆರೋಪಿ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪೀರಸಾಬ್ ನದಾಫ್

ಆ. 27ರಂದು ಕಾಣೆಯಾಗಿದ್ದ. ತನ್ನ ಪತಿ ಕಾಣೆಯಾದ ಕುರಿತು ಮಹಿಳೆ, ಸೆ. 2ರಂದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ತನಿಖೆ ಕೈಗೊಂಡ ಪೊಲೀಸರು, ಸೋಮಯ್ಯನನ್ನು ತೀವ್ರ ವಿಚಾರಣೆಗೊಳಪಡಿಸಿದ್ದರು. ಪೀರಸಾಬನ ಪತ್ನಿಯೊಂದಿಗೆ ಸೋಮಯ್ಯ ಅನೈತಿಕ ಸಂಬಂಧ ಹೊಂದಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪೀರಸಾಬನನ್ನು ಕೊಚ್ಚಿ ಕೊಲೆಗೈದು ಶವವನ್ನು ಎಂ.ಕೆ. ಹುಬ್ಬಳ್ಳಿ ಬಳಿಯ ಹೊಳೆಯಲ್ಲಿ ಎಸೆದು ಬಂದಿರುವುದಾಗಿ ಆರೋಪಿ ಬಾಯಿ ಬಿಟ್ಟಿದ್ದಾನೆ. ಪೀರಸಾಬನ ಮೃತದೇಹಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಗುಟ್ಕಾ ತಿನ್ನಬೇಡ ಎಂದಿದ್ದಕ್ಕೆ ಬಾಲಕ ನಾಪತ್ತೆ

ಹುಬ್ಬಳ್ಳಿ: ಗುಟ್ಕಾ ತಿನ್ನಬೇಡ ಎಂದು ಮನೆಯವರು ಬುದ್ಧಿ ಮಾತು ಹೇಳಿದ್ದಕ್ಕೆ ಬೇಸರಗೊಂಡು ಯುವಕನೊಬ್ಬ ಮನೆ ಬಿಟ್ಟು ಹೋಗಿರುವ ಘಟನೆ ತಾಲೂಕಿನ ತಾರಿಹಾಳ ವಾಜಪೇಯಿ ನಗರದಲ್ಲಿ ನಡೆದಿದೆ.

ಗ್ರಾಮದ ಪರಶುರಾಮ ಪೀರಪ್ಪ ಲಮಾಣಿ (16) ನಾಪತ್ತೆಯಾದ ಯುವಕ. ಇತ್ತೀಚೆಗೆ ಗುಟ್ಕಾ ತಿನ್ನುವ ಚಟ ಅಂಟಿಸಿಕೊಂಡಿದ್ದ. ವಿಷಯ ತಿಳಿದ ಕುಟುಂಬದವರು ಗುಟ್ಕಾ ತಿನ್ನಬೇಡ. ಆರೋಗ್ಯಕ್ಕೆ ಹಾನಿಕಾರಕ ಎಂದು ಬುದ್ಧಿಮಾತು ಹೇಳಿದ್ದರು.

ಅಷ್ಟಕ್ಕೆ ಬೇಸರಗೊಂಡು ಆ. 29ರಂದು ಮನೆಯಿಂದ ಯಾರಿಗೂ ಹೇಳದೇ ಹೋದವನು ಈವರೆಗೆ ವಾಪಸ್ ಬಂದಿಲ್ಲ ಎಂದು ಕುಟುಂಬದವರು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವೃದ್ಧ ಆತ್ಮಹತ್ಯೆ

ಧಾರವಾಡ: ವೃದ್ಧನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕರ್ನಾಟಕ ವಿಶ್ವ ವಿದ್ಯಾಲಯದ ಕ್ಯಾಂಟೀನ್ ಹಿಂಭಾಗದಲ್ಲಿ ಶುಕ್ರವಾರ ನಡೆದಿದೆ. ಅಂದಾಜು 65 ವರ್ಷದ ವೃದ್ಧ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಹೆಸರು, ವಿಳಾಸ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net