ಅನೈತಿಕ ತಾಣವಾದ ಕಾವಲುಗಾರರ ಕೋಣೆ

01
Published on

ಕೊಡೇಕಲ್ : ಇಲ್ಲಿನ ರಾಯನಪಾಳೆ ಮುಖ್ಯ ಕಾಲುವೆಯ ಬಳಿ ನಿರ್ಮಿಸಿದ ಕಾವಲುಗಾರರ ಕೋಣೆಗಳು ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿವೆ.

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ(ಕೆಬಿಜೆಎನ್‌ಎಲ್)ದಿಂದ ೨೦೧೯-೨೦ರಲ್ಲಿ ನಿರ್ಮಿಸಲಾಗಿದ್ದ ಕಾವಲುಗಾರರ ಕೋಣೆಗಳು ಇಂದು ಪುಂಡ-ಪೋಕರಿಗಳು ಬಂದು ಕಂಠಪೂರ್ತಿ ಕುಡಿದು ಪುಂಡಾಟಿಕೆಯ ಕೋಣೆಗಳಾಗಿವೆ.

ಕೃಷ್ಣಾ ಭಾಗ್ಯ ಜಲ ನಿಗಮ ಗೇಟ್‌ಗಳ ನಿರ್ವಹಣೆ ಮಾಡುವ ಸಿಬ್ಬಂದಿಗೆ ೮೦ ಲಕ್ಷ ರೂ. ವೆಚ್ಚದಲ್ಲಿ ೯ ಕಾವಲುಗಾರ ಕೋಣೆಗಳನ್ನು ನಿರ್ಮಿಸಿದೆ. ಆದರೆ ಸ್ಕಾಡಾ ತಂತ್ರಜ್ಞಾನದ ಮೂಲಕ ಆಟೋಮೆಟಿಕ್ ಗೇಟ್ ಅಳವಡಿಸಿದ ಕಾರಣ ಮ್ಯಾನ್ವೇಲ್ ಪದ್ಧತಿ ಕೈಬಿಟ್ಟಿದ್ದರಿಂದ ಕಾವಲುಗಾರ ಕೋಣೆಗಳು ಬಳಕೆಯಾಗದೆ ಅವುಗಳಿಗೆ ಬೀಗ ಹಾಕಲಾಗಿತ್ತು.

ಕೋಣೆಗಳು ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದರೂ ಉದ್ಘಾಟನಾ ಭಾಗ್ಯ ಕೂಡ ಕಾಣಲಿಲ್ಲ. ಅಲ್ಲದೆ ಒಂದು ದಿನವೂ ಕೂಡ ಬಳಕೆಯಾಗದೆ ಹೋಗಿದ್ದು ವಿಪರ್ಯಾಸವಾಗಿದೆ.

ನಿಗಮದವರು ಹಾಕಿದ್ದ ಬೀಗವನ್ನು ಪುಂಡರು ಮುರಿದು ಮದ್ಯಪಾನ ಮಾಡಿ ಅಡುಗೆ ಕೋಣೆಯೊಳಗೆ ಬಾಡೂಟ ಸಿದ್ಧಪಡಿಸಿ ಹಾಯಾಗಿ ವಿಶ್ರಾಂತಿ ಪಡೆಯುತ್ತಾರೆ. ಇದರಿಂದಾಗಿ ನಿತ್ಯ ಈ ರಸ್ತೆ ಮಾರ್ಗವಾಗಿ ಜಮೀನುಗಳಿಗೆ ಹೋಗುವ ರೈತರಿಗೆ ಭಯದ ನೆರಳಿನಲ್ಲಿ ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ನಿಗಮದ ಅಧಿಕಾರಿಗಳು ನಿತ್ಯ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದರೂ ಅದಕ್ಕೂ ನಮಗೂ ಯಾವುದೇ ಸಂಬAಧವಿಲ್ಲ ಎನ್ನುವಂತೆ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net