ಅನುಸುಧಾ ಭದ್ರಾವತಿ ನಗರಸಭೆ ನೂತನ ಅಧ್ಯಕ್ಷೆ: ಜೆಡಿಎಸ್‌ನ ವಿಜಯಾ, ಬಿಜೆಪಿಯ ಅನುಪಮಾ ಚನ್ನೇಶ್‌ಗೆ ಸೋಲು

BDVT WEBB
Published on

ಭದ್ರಾವತಿ: ನಿರೀಕ್ಷೆಯಂತೆ ಭದ್ರಾವತಿ ನಗರಸಭೆ ಅಧ್ಯಕ್ಷರಾಗಿ ವಾರ್ಡ್ ನಂ.13ರ ಕಾಂಗ್ರೆಸ್ ಸದಸ್ಯೆ ಅನುಸುಧಾ ಮೋಹನ್ ಆಯ್ಕೆಯಾದರು.

ಗೀತಾ ರಾಜ್‌ಕುಮಾರ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಕಾಂಗ್ರೆಸ್‌ನಿಂದ ಅನುಸುಧಾ ಮೋಹನ್ ಪಳನಿ, ಜೆಡಿಎಸ್‌ನಿಂದ ವಿಜಯಾ, ಬಿಜೆಪಿಯಿಂದ ಅನುಪಮಾ ಚನ್ನೇಶ ಸ್ಪರ್ಧೆ ಮಾಡಿದ್ದರು.

35 ನಗರಸಭಾ ಸದಸ್ಯರು, 1 ವಿಧಾನಸಭಾ ಸದಸ್ಯರು ಮತ್ತು 1 ಲೋಕಸಭಾ ಸದಸ್ಯರು ಒಟ್ಟು 37 ಮತಗಳಿದ್ದು, ಈ ಪೈಕಿ ಲೋಕಸಭಾ ಸದಸ್ಯರು ಮತ ಚಲಾಯಿಸಿಲ್ಲ. ಉಳಿದ 36 ಮತಗಳ ಪೈಕಿ ಅನುಸುಧಾ ಮೋಹನ್ ಪಳನಿ 20, ವಿಜಯಾಗೆ 12 ಹಾಗೂ ಅನುಪಮಾ ಚನ್ನೇಶ್ 4 ಮತಗಳನ್ನು ಪಡೆದುಕೊಂಡರು. ಒಟ್ಟು 8 ಮತಗಳ ಅಂತರದಿಂದ ಅನುಸುಧಾ ಆಯ್ಕೆಯಾದರು.

ತಮಿಳು ಭಾಷಿಗರ ಒಳಪಂಗಡವಾಗಿರುವ ವನ್ನಿಯರ್ ಗೌಂಡರ್ ಮತ್ತು ಆಗಮುಡಿ ಮೊದಲಿಯಾರ್ ಸಮಾಜದ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದದ್ದು ವಿಶೇಷವಾಗಿತ್ತು. ಅನುಸುಧಾ ವನ್ನಿಯರ್ ಗೌಂಡರ್ ಸಮುದಾಯಕ್ಕೆ ಸೇರಿದ್ದು ಇವರ ಪ್ರತಿಸ್ಪರ್ಧಿ ವಿಜಯಾ ಆಗಮುಡಿ ಮೊದಲಿಯಾರ್ ಸಮುದಾಯಕ್ಕೆ ಸೇರಿದ್ದಾರೆ.

ಪ್ರಸ್ತುತ ನಗರಸಭೆಯಲ್ಲಿ ಕಾಂಗ್ರೆಸ್-18, ಜೆಡಿಎಸ್-12, ಬಿಜೆಪಿ-4 ಮತ್ತು ಪಕ್ಷೇತರ-01 ಸ್ಥಾನ ಹೊಂದಿದೆ. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಎಸ್.ಬಿ ದೊಡ್ಡೇಗೌಡರ್ ಕಾರ್ಯ ನಿರ್ವಹಿಸಿದರು. ಪೌರಾಯುಕ್ತ ಮನುಕುಮಾರ್ ಉಪಸ್ಥಿತರಿದ್ದರು.

ಕಾಂಗ್ರೆಸ್ಸಿಗರ ಸಂಭ್ರಮಾಚರಣೆ: ಅನುಸುಧಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ನಗರಸಭೆ ಮುಂಭಾಗ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ನಂತರ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿ ಮಹಾತ್ಮಗಾಂಧಿ ವೃತ್ತದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನೂತನ ಅಧ್ಯಕ್ಷರನ್ನು ಶಾಸಕ ಬಿ.ಕೆ ಸಂಗಮೇಶ್ವರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ರಾಜು ಜಂಬೂ ಮಹರ್ಷಿ ವನ್ನಿಯರ್ ಗೌಂಡರ್ ಸಮಾಜದ ಅ್ಯಧ್ಯಕ್ಷ ನಂದಕುಮಾರ್, ತಾಲೂಕು ಅಧ್ಯಕ್ಷ ಮಣಿ ಎಎನ್‌ಎಸ್, ತಮಿಳು ಸಮಾಜದ ತಾಲೂಕು ಅಧ್ಯಕ್ಷ ರವಿ, ಆಗಮುಡಿ ಮೊದಲಿಯಾರ್ ಸಮಾಜದ ಅಧ್ಯಕ್ಷ ಕಣ್ಣಪ್ಪ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ಯುವ ಘಟಕದ ಅಧ್ಯಕ್ಷರಾದ ಅಫ್ತಾಬ್ ಅಹಮದ್, ವಿನೋದ್ ಸೇರಿದಂತೆ ಪಕ್ಷದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net