ಅನುವಾದಿತ ಪುಸ್ತಕಗಳ ಡಿಜಿಟಲೀಕರಣ ಅಗತ್ಯವಿದೆ

Prashasti
Published on

ಚಿತ್ರದುರ್ಗ: ಸರ್ಕಾರ ಸಾಹಿತ್ಯ, ಸಂಸ್ಕೃತಿಯ ಪ್ರಸಾರಕ್ಕೂ ಹೆಚ್ಚು ಅನುದಾನ ನೀಡಬೇಕು ಎಂದು ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಆಗ್ರಹಿಸಿದರು.

ತರಾಸು ರಂಗಮಂದಿರದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಶನಿವಾರ ಹಮ್ಮಿಕೊಂಡಿದ್ದ ಗೌರವ ಪ್ರಶಸ್ತಿ ಪ್ರದಾನ, ಅನುವಾದ ಪುಸ್ತಕ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡದ ನೂರಾರು ಶ್ರೇಷ್ಠ ಕೃತಿಗಳು ಬೇರೆ ಭಾಷೆಗಳಿಗೆ ಅನುವಾದವಾಗಿಲ್ಲ. ಅದಕ್ಕಾಗಿ ಸರ್ಕಾರ ಅನುವಾದ ಕ್ಷೇತ್ರಕ್ಕೂ ಹೆಚ್ಚಿನ ನೆರವು ನೀಡಬೇಕಾದ ಅಗತ್ಯವಿದೆ ಎಂದರು.

ಅನುವಾದಿತ ಕೃತಿಗಳ ಮಾರಾಟ ಸೀಮಿತವಾಗಿರುವ ಕಾರಣ ಓದು ವಿಸ್ತಾರಗೊಂಡಿಲ್ಲ. ಅದಕ್ಕಾಗಿ ಆಧುನಿಕ ಯುಗದಲ್ಲಿ ಅನುವಾದಿತ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸಿ ಮಾರುಕಟ್ಟೆ ವಿಸ್ತರಿಸಬೇಕಿದೆ ಎಂದು ಸಲಹೆ ನೀಡಿದರು.

ಹೊರ ಜಗತ್ತಿನ ಸಾಹಿತ್ಯದ ಬೆಳಕು ಕನ್ನಡಕ್ಕೂ ಹರಿಯಬೇಕು. ಅದೇ ರೀತಿ ಕನ್ನಡ ಸಾಹಿತ್ಯವನ್ನೂ ವಿಶ್ವ ವ್ಯಾಪಿಯಾಗಿಸಬೇಕು. ತಾಂತ್ರಿಕ ಯುಗದಲ್ಲಿ ಅನುವಾದ ಸಾಹಿತ್ಯಕ್ಕೆ ಡಿಜಿಟಲ್ ರೂಪ ನೀಡದಿದ್ದರೆ, ಮಾರುಕಟ್ಟೆ ವಿಸ್ತರಣೆ ಅಸಾಧ್ಯ. ಕನ್ನಡದಿಂದ ಅನ್ಯ ಭಾಷೆಗಳಿಗೆ ಅನುವಾದಗೊಂಡ ಸಾಹಿತ್ಯ ಕೃತಿಗಳು ಗೋದಾಮಿನಲ್ಲಿ ಕೊಳೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಗೌರವ ಪ್ರಶಸ್ತಿ ಪುರಸ್ಕೃತ ಎಚ್.ಎಸ್. ರಾಘವೇಂದ್ರರಾವ್ ಮಾತನಾಡಿ, ಅನುವಾದ ಸಾಹಿತ್ಯ ಎಂದರೆ ಕೇವಲ ಪದಶಃ ತರ್ಜುಮೆಯಲ್ಲ. ಅದು ಕನ್ನಡ ಭಾಷೆ ಕಟ್ಟುವ ಕೆಲಸವಾಗಿದೆ. ಹೊಸ ದರ್ಶನ ಒದಗಿಸಿ, ಹೊರಗಿನ ಸಂಸ್ಕೃತಿ ಅಪ್ಪಿಕೊಳ್ಳುವ ಸಂದೇಶ ನೀಡುತ್ತದೆ. ಸರ್ವವನ್ನೂ ಒಳಗೊಳ್ಳುವ ದಾರಿಯೇ ಅನುವಾದವಾಗಿದೆ ಎಂದರು.

ಜಾಗತೀಕರಣವೆಂಬ ವಿಕೃತ ಪರಿಕಲ್ಪನೆ ವಿನಾಶದ ಹಿನ್ನೆಲೆ ಹೊಂದಿದೆ. ಆದ್ದರಿಂದ ಕುವೆಂಪು ಅವರ ವಿಶ್ವಮಾನ ಸಂದೇಶ ಈ ಪ್ರಾಧಿಕಾರಕ್ಕೂ ಆಧಾರವಾಗಿದೆ. ಆ ನಿಟ್ಟಿನಲ್ಲಿ ಸಾಗಬೇಕಿದೆ ಎಂದು ಸಲಹೆ ನೀಡಿದರು.

ಗೌರವ ಪ್ರಶಸ್ತಿ ಪುರಸ್ಕೃತ ಡಾ.ಆರ್.ಕೆ. ಕುಲಕರ್ಣಿ ಮಾತನಾಡಿ, ಅನುವಾದಕ್ಕೂ ಸೃಜನ ಸಾಹಿತ್ಯದಷ್ಟೇ ಮಹತ್ವವಿದೆ. ಕನ್ನಡದ ವೈಭವವನ್ನು ಈ ಪ್ರಾಧಿಕಾರ ಎತ್ತಿಹಿಡಿಯುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಗೌರವ ಪ್ರಶಸ್ತಿ ಪುರಸ್ಕೃತೆ ಡಾ.ದು.ಸರಸ್ವತಿ ಮಾತನಾಡಿ, ಅನುವಾದ ಕಲಿಕೆಯ ಪ್ರಕ್ರಿಯೆಯಾಗಿದ್ದು, ಸುಲಭದ ಮಾತಲ್ಲ. ಭಾರತವೆಂದರೆ ಬಹುತ್ವ, ಸಮಾನತೆ, ಸಹಬಾಳ್ವೆಗೆ ಹೆಸರುವಾಸಿ. ಆದ್ದರಿಂದ ಅನೇಕ ಕೃತಿಗಳನ್ನು ಪ್ರಾಧಿಕಾರ ಹೊರತರಲಿ ಎಂದರು.

ಗದಗಿನ ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಮೂಲ ಕೃತಿಯಷ್ಟೇ ಅನುವಾದದ ಕೃತಿ ಓದಿದಾಗಲು ಆನಂದ ಸಿಗಬೇಕು. ಅನುವಾದಿಸುವುದು ವಿಶಿಷ್ಟ ಕಲೆ. ಪರಸ್ಪರ ಭಾಷೆಗಳ ವಿನಿಮಯ ಅರ್ಥಪೂರ್ಣವಾದುದು ಎಂದು ಹೇಳಿದರು.

ಅನುಸಂಧಾನದ ಕಾಲವಿದು: ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್‌ ಮಾತನಾಡಿ, ಸಂಸ್ಕೃತಿಗಳ ನಡುವೆ ಹಿಂದೆಲ್ಲ ಸಂಘರ್ಷಗಳು ನಡೆದಿವೆ. ಆದರೀಗ ಮುಖಾಮುಖಿ, ಅನುಸಂಧಾನದ ಕಾಲದಲ್ಲಿದ್ದೇವೆ. ಬಹುಸಂಸ್ಕೃತಿ ಎಂಬುದು ಕಾಲ, ದೇಶಗಳನ್ನು ಮೀರಿದ ವಾಸ್ತವ ಸಂಗತಿಯಾಗಿದೆ ಎಂದು ತಿಳಿಸಿದರು.

ಕಲೆ, ಸಂಗೀತ, ಸಾಹಿತ್ಯದಿಂದಾಗಿ ಸಂಸ್ಕೃತಿಗಳ ನಡುವೆ ಉತ್ತಮ ಬಾಂಧವ್ಯ ಮೂಡುತ್ತಿದೆ. ಹೊರ ಜಗತ್ತಿನ ಜೊತೆಗೆ ಬೆರೆಯಲು ಇವು ಹೆಬ್ಬಾಗಿಲುಗಳು ಎಂದರೂ ತಪ್ಪಾಗಲಾರದು ಎಂದರು.

ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪಕಟ್ಟಿ, ರಿಜಿಸ್ಟ್ರಾರ್ ಈಶ್ವರ್ ಕು. ಮಿರ್ಜಿ, ಡಾ. ನಟರಾಜ್ ಹುಳಿಯಾರ್, ಡಾ. ರಾಜೇಂದ್ರಚೆನ್ನಿ, ಬೋಡೆ ರಿಯಾಜ್ ಅಹಮದ್, ಡಾ. ಬಸು ಬೇವಿನ ಗಿಡದ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಡಾ.ಜೆ. ಕರಿಯಪ್ಪ ಮಾಳಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net