ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

11 (1)
Published on

ಮೈಸೂರು: ಕ್ರೆಡೆಲ್ ಅಧಿಕಾರಿ ಡಿ.ಕೆ. ದಿನೇಶ್‌ಕುಮಾರ್ ಅನುಮಾನಾಸ್ಪದ ಸಾವು ಪ್ರಕರಣದ ತ್ವರಿತಗತಿಯಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ರೋಟರಿ ವೆಸ್ಟ್ ನೇತೃತ್ವದಲ್ಲಿ 21 ರೋಟರಿ ಕ್ಲಬ್‌ಗಳ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ನ್ಯಾಯಾಲಯದ ಮಹಾತ್ಮ ಗಾಂಧಿ ಪುತ್ಥಳಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಘೋಷಣೆಗಳನ್ನು ಕೂಗಿದರು. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿ 15 ದಿನ ಕಳೆದರೂ ತಪ್ಪಿತಸ್ಥರ ಬಂಧನವಾಗಿಲ್ಲ. ತಕ್ಷಣ ದಿನೇಶ್‌ಕುಮಾರ್ ಸಾವಿಗೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕೆಆರ್‌ಇಡಿಎಲ್) ಯೋಜನಾ ನಿರ್ದೇಶಕರಾಗಿದ್ದ ದಿನೇಶ್‌ಕುಮಾರ್ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರು ತನಿಖೆಯನ್ನು ತ್ವರಿತಗತಿಯಲ್ಲಿ ಮಾಡುತ್ತಿಲ್ಲ. ಕೊಳೆತ ಸ್ಥಿತಿಯಲ್ಲಿ ಆಸ್ಪತ್ರೆಗೆ ಶವ ತರಲಾಗಿತ್ತು. ಸಾವನ್ನು ಎರಡು ದಿನ ಮುಚ್ಚಿಡಲಾಗಿತ್ತು. ತಪ್ಪಿತಸ್ಥರ ವಿರುದ್ಧ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ಪೊಲೀಸರ ಮೇಲೆ ನಂಬಿಕೆ ಇದೆ. ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ಅಲ್ಲಿಯವರೆಗೂ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು. ರೋಟರಿ ವೆಸ್ಟ್ ಅಧ್ಯಕ್ಷ ಡಾ.ಎಂ.ಡಿ. ರಾಘವೇಂದ್ರ ಪ್ರಸಾದ್, ರೋಟರಿ ಸದಸ್ಯರಾದ ಬಿ. ಚಂದ್ರ ಜಿ.ಕೆ. ಸುಧೀಂದ್ರ, ಡಾ.ಎಚ್.ಎಸ್. ಶಿವಣ್ಣ, ಜೋಸೆಫ್ ಮ್ಯಾಥ್ಯೂ, ಹನುಮಂತ್, ರಂಗರಾವ್ ಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net