ಅನುಮತಿ ಇಲ್ಲದೆ ಕಾವೇರಿ ನದಿಯಲ್ಲಿ ಜಲಕ್ರೀಡೆ

ಶ್ರೀರಂಗಪಟ್ಟಣ ತಾಲೂಕು ಮಂಡ್ಯದಕೊಪ್ಪಲು ಬೋರೆದೇವರ ಗುಡಿ ಹಿಂಭಾಗದ ಕಾವೇರಿ ನದಿಯಲ್ಲಿ ಸಾಹಸ ಕ್ರೀಡೆಗಳಲ್ಲಿ ತೊಡಗಿದ್ದ ಮೈಸೂರಿನ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು.
SRP_15-02jpj
Published on

ಶ್ರೀರಂಗಪಟ್ಟಣ: ತಾಲೂಕಿನ ಮಂಡ್ಯದಕೊಪ್ಪಲು ಗ್ರಾಮ ಸಮೀಪದ ಬೋರೇದೇವರ ದೇವಾಲಯ ಹಿಂಭಾಗದ ಕಾವೇರಿ ನದಿಯಲ್ಲಿ ನಿಯಮ ಉಲ್ಲಂಘಿಸಿ ಮೈಸೂರಿನ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಜಲಕ್ರೀಡೆಗಳಲ್ಲಿ ಪಾಲ್ಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ಮೈಸೂರಿನ ಅಲ್ಮನಾಕ್ ಅಡ್ವೆಂಚರ್ ಸಾಹಸ ಕ್ರೀಡಾ ಸಂಸ್ಥೆಯು ಇಂಜಿನಿಯರಿಂಗ್ ಕಾಲೇಜೊಂದರ 60ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕರೆತಂದು ಕಾವೇರಿ ನದಿಯಲ್ಲಿ ರಿವರ್ ರ‌್ಯಾಫ್ಟಿಂಗ್, ಕಯಾಕಿಂಗ್ ಸೇರಿದಂತೆ ಹಲವು ಜಲಕ್ರೀಡೆಗಳನ್ನು ಶುಕ್ರವಾರ ಆಯೋಜಿಸಿತ್ತು. ಸಂಸ್ಥೆಯು ಕಾವೇರಿ ನೀರಾವರಿ ನಿಗಮ ಸೇರಿದಂತೆ ಯಾವುದೇ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ.

ಬೋರೇದೇವರ ಗುಡಿ ಹಿಂಭಾಗದ ಕಾವೇರಿ ನದಿ ಸ್ಥಳ ಅಪಾಯಕಾರಿಯಾಗಿದ್ದು, ಜಲಕ್ರೀಡೆಗಳನ್ನು ಆಯೋಜಿಸಲು ಇಲ್ಲಿ ಅನುಮತಿ ಇಲ್ಲ. ವಿಷಯ ತಿಳಿದು ಸ್ಥಳಕ್ಕೆ ಬನ್ನೂರು ವ್ಯಾಪ್ತಿಯ ಕಾವೇರಿ ನೀರಾವರಿ ನಿಗಮದ ಎಇಇ ಹಾಗೂ ಎಇ ಆಗಮಿಸಿ ಕ್ರೀಡೆಗಳನ್ನು ಸ್ಥಗಿತಗೊಳಿಸುವಂತೆ ಸಂಬಂಧಿಸಿದ ಸಂಸ್ಥೆಗೆ ಸೂಚನೆ ನೀಡಿದರು. ಈ ವೇಳೆ ಸಂಸ್ಥೆಯ ಕೆಲವರು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ಅಲ್ಲದೆ, ಪ್ರಸ್ತುತ ಕಾವೇರಿ ನದಿಯಲ್ಲಿ ಹೆಚ್ಚು ನೀರು ಹರಿಯುತ್ತಿದೆ. ಯಾವುದೇ ಇಲಾಖೆಯ ಅನುಮತಿ ಪಡೆಯದೆ ವಿದ್ಯಾರ್ಥಿಗಳನ್ನು ನೀರಿಗೆ ಇಳಿಸಿದ್ದೀರಿ. ಮೊದಲು ಜಲಕ್ರೀಡೆ ಸ್ಥಗಿತಗೊಳಿಸಿ ಎಂದು ಅಧಿಕಾರಿಗಳು ತಿಳಿಸಿದರೂ ಸಂಸ್ಥೆಯವರು ರಾಜಕೀಯ ಒತ್ತಡ ತಂದು ಗಲಾಟೆ ನಡೆಸಿದರು.

ಈ ಸಂಬಂಧ ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ವಾಸುದೇವ್ ಅರಕೆರೆ ಪೊಲೀಸ್ ಠಾಣೆಗೆ ದೂರು ನೀಡಿದರು. ನಂತರ ಪೊಲೀಸರು ಸಂಸ್ಥೆಯ ಸಿಬ್ಬಂದಿಯನ್ನು ಠಾಣೆಗೆ ಕೆರೆಸಿ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಕಳುಹಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ಡಾ.ಕುಮಾರ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ಕಾವೇರಿ ನದಿಯಲ್ಲಿ ಜಲಕ್ರೀಡೆಗಳನ್ನು ಆಯೋಜಿಸಿದ್ದ ಖಾಸಗಿ ಸಂಸ್ಥೆ ಮೇಲೆ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದೇನೆ. ವಾಸ್ತವ ಪರಿಶೀಲಿಸಿ ವರದಿ ನೀಡುವಂತೆಯೂ ತಿಳಿಸಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net