

ಬಸವಕಲ್ಯಾಣ: ಹನ್ನೆರಡನೇ ಶತಮಾನದ ವಚನಕಾರರು ಬೌದ್ಧಿಕ, ವೈಚಾರಿಕ ಮತ್ತು ಅನುಭಾವಿಕ ನೆಲೆಗಳಲ್ಲಿ ಕಲ್ಯಾಣದ ಪರಿಕಲ್ಪನೆಯನ್ನು ಕಟ್ಟಿಕೊಟ್ಟಿದ್ದಾರೆ ಎಂದು ರಾಯಚೂರಿನ ಕಥೆಗಾರ ಮಹಾಂತೇಶ ನವಲಕಲ್ ಹೇಳಿದರು.
ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಅದರಲ್ಲೂ ವಚನಕಾರರಲ್ಲಿ ಸಾಂಸ್ಕೃತಿಕ ವ್ಯಾಖ್ಯಾನ ಪಡೆದ ಊರು ಕಲ್ಯಾಣ. ಇಲ್ಲಿನ ಮಹಾಮನೆ, ಅನುಭವ ಮಂಟಪ, ತ್ರಿಪುರಾಂತ ಈ ಎಲ್ಲ ಶಬ್ದಗಳು ಬೆರುಗು ಹಾಗೂ ಸಂವೇದನೆ ಹುಟ್ಟಿಸುತ್ತವೆ ಎಂದರು.
ಅರಸರಾಗಿದ್ದವರು ಕಾಯಕ ಜೀವಿ, ಶರಣ, ಶಿವಶರಣರಾಗಿ ಕಲ್ಯಾಣದ ಬೀದಿಯಲ್ಲಿ ಸ್ವಾತಂತ್ರ್ಯದ ತಾತ್ವಿಕತೆ ಕಟ್ಟಿಕೊಟ್ಟಿದ್ದಾರೆ. ಲಿಂಗ ತಾರತಮ್ಯ ಹಾಗೂ ಜಾತೀಯತೆ ವಿರುದ್ಧ ದೊಡ್ಡ ಧ್ವನಿಯಾದ ಬಸವಣ್ಣನವರು ದುಡಿಯುವ ವರ್ಗದ ಸಮಾಜ ನಿರ್ಮಿಸಿದ್ದರು. ಕಾರ್ಲ್ ಮಾರ್ಕ್ಸ್ ಪರಿಕಲ್ಪನೆ ೧೨ನೇ ಶತಮಾನದಲ್ಲೇ ಬಸವಣ್ಣ ಅನುಷ್ಠಾನಕ್ಕೆ ತಂದಿದ್ದರು ಎಂದು ತಿಳಿಸಿದರು.
ಬೀದರ್ ವಿಶ್ವವಿದ್ಯಾಲಯದ ಬಿಎಸ್ಸಿ ೪ನೇ ಸೆಮಿಸ್ಟರ್ ಪಠ್ಯಕ್ಕಿರುವ ತಮ್ಮ(ಮಹಾಂತೇಶ ನವಲಕಲ್) ಬುದ್ಧ ಗಂಟೆಯ ಸದ್ದು ಕಥೆ ಕುರಿತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಉದಾರವಾದಿ ಮಾರುಕಟ್ಟೆ ಅನುಸರಿಸುವ ನೀತಿಯಿಂದ ಎಲ್ಲಕ್ಕಿಂತ ಹೆಚ್ಚಾಗಿ ಅಪಾಯ ಎದುರಾದದ್ದು ರೈತರಿಗೆ. ಉಳುಮೆ ಬೀಜ, ಕೀಟನಾಶಕ, ರಸಗೊಬ್ಬರ ಮಾರುಕಟ್ಟೆ ತಂತ್ರಗಾರಿಕೆ, ಕಂಪನಿ ಲಾಭಕೋರತನದಿಂದ ರೈತರನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಭಾರತೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕದಲ್ಲಿ ನೆಲ, ನೀರು, ಕಾಡಿಗೆ ವಿಶಿಷ್ಟ ಸ್ಥಾನವಿದೆ. ಭೂಮಿ ಅನ್ನ ಕೊಡುವ ಜತೆಗೆ ಎಲ್ಲ ಜೀವಿಗಳು ವಾಸಿಸುವ ತಾಣವಾಗಿದೆ. ಆದರೆ ಆಧುನಿಕ ಕಾಲಘಟ್ಟ, ಜಾಗತೀಕರಣ ಸಂದರ್ಭದಲ್ಲಿ ನೆಲವನ್ನು ಸರಕಾಗಿ ಪರಿಗಣಿಸಲಾಗಿದೆ. ಉಳುಮೆ ಮಾಡುವವರು ನಶಿಸಿ ಹೋದರೆ ಸಹಜವೇ ಬಂಡವಾಳಶಾಹಿಗಳ ವಶಕ್ಕೆ ಭೂಮಿ ಹೋಗುವುದರ ಹಿಂದೆ ಪ್ರಭುತ್ವಗಳ ತಂತ್ರಗಾರಿಕೆ ಅಡಗಿರುತ್ತದೆ ಎಂದು ಹೇಳಿದರು.
ಐಕ್ಯುಎಸಿ ಸಂಯೋಜಕ ಪವನ ಪಾಟೀಲ್, ಗಂಗಾಧರ ಸಾಲಿಮಠ, ರೋಷನ್ ಯದಲಾಪುರ, ನೀಲಮ್ಮ ಮೇತ್ರೆ, ನಾಗರಾಜ ನಾಸೆ, ಕೃಷ್ಣ ಗೌಳಿ, ಸಾಯಿರಾಜ ಪಾಟೀಲ್, ಎಂಡಿ ಜಬಿ, ಇಮ್ತಿಯಾಜ್ ಇತರರಿದ್ದರು. ಸ್ನೇಹಾ ರಾಜಪೂತ ಸ್ವಾಗತಿಸಿದರು. ಮಹೇಶ್ವರಿ ಬಿರಾದಾರ ವಂದಿಸಿದರು. ಪೃಥ್ವಿ ಪಾಟೀಲ್ ನಿರೂಪಣೆ ಮಾಡಿದರು.