ಅನುಭಾವ ಸಾಹಿತ್ಯ ಕನ್ನಡದ ವೈಶಿಷ್ಟ್ಯಪರಂಪರೆ

24rajesh3
Published on

ಚಾಮರಾಜನಗರ: ನಾಡಿನಲ್ಲಿ ವಚನಕಾರರಿಂದ ಪ್ರಾರಂಭವಾದ ಅನುಭಾವ ಸಾಹಿತ್ಯ ದಾಸರು, ಸಂತರು ಹಾಗೂ ಜಾನಪದ ಅನುಭಾವದಿಂದ ಕರ್ನಾಟಕದ ವೈಶಿಷ್ಟ್ಯ ಪರಂಪರೆಯಾಗಿದೆ ಎಂದು ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠ ಪ್ರಕಟಣಾ ಮತ್ತು ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಬಣ್ಣಿಸಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜೆಎಸ್‌ಎಸ್ ಮಹಾವಿದ್ಯಾಪೀಠ, ತತ್ವಪದಕಾರರ ಅಧ್ಯಯನ ಕೇಂದ್ರ, ಜೆಎಸ್‌ಎಸ್ ಮಹಿಳಾ ಕಾಲೇಜು ಕನ್ನಡ ವಿಭಾಗ ಹಾಗೂ ರಂಗವಾಹಿನಿ ಸಂಸ್ಥೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಅನುಭಾವ ಪರಂಪರೆ-ತಾತ್ವಿಕ ಜಿಜ್ಞಾಸೆ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡದ ವಿಶೇಷತೆ ಮತ್ತು ಸಾಮಾನ್ಯನ ಬದುಕಿನ ತಾತ್ಪರ್ಯವನ್ನು ಸೂಕ್ಷ್ಮವಾಗಿ ಅನುಭಾವ ಪರಂಪರೆ ಕಟ್ಟಿಕೊಟ್ಟಿದೆ. 12 ನೇ ಶತಮಾನದಿಂದ ಈವರೆಗಿನ ವಿಶಿಷ್ಟ ಪರಂಪರೆಯಾಗಿ ಅನುಭಾವ ಸಾಹಿತ್ಯ ಕಂಡುಬರುತ್ತದೆ. ಬಹುಮುಖ್ಯವಾಗಿ ಅನುಭಾವ ಸಾಹಿತ್ಯ ದೇವರು ಮತ್ತು ಮನುಷ್ಯರ ನಡುವೆ ಸೇತುವೆಯಾಗಿತ್ತು ಎಂದು ಹೇಳಿದರು.

ನಮ್ಮೊಳಗಿನ ಅಂತಃಕರಣವನ್ನು ಗುರುತಿಸುವ ಅವಕಾಶವನ್ನು ಅನುಭಾವ ಪರಂಪರೆ ಕಲ್ಪಿಸಿತು. ಶರಣರರಿಂದ ಪ್ರಾರಂಭವಾದ ಅನುಭಾವ ಪರಂಪರೆ ಕನ್ನಡದ ವಿವೇಕಕ್ಕೆ ಹೊಸ ವ್ಯಾಖ್ಯಾನವನ್ನು ನೀಡಿತು. ಸಂಘರ್ಷದಿಂದ ಮುಕ್ತವಾಗಿ ಸೌಹಾರ್ದತೆಯ ಬದುಕನ್ನು ಮೂಡಿಸಿತು. ಈ ಪರಂಪರೆ ಪ್ರತಿಯೊಬ್ಬರ ಬದುಕಿನ ಭಾಗವಾಗಿದ್ದು, ಇಂದಿನ ಯುವಜನಾಂಗ ಅದನ್ನು ಉಳಿಸಿಕೊಂಡು ಹೋಗಬೇಕಿದೆ ಎಂದು ಸಲಹೆ ನೀಡಿದರು.

ತತ್ವಪದಕಾರರ ಅಧ್ಯಯನ ಕೇಂದ್ರದ ಮುಖ್ಯಸ್ಥ ಕಾ.ತ.ಚಿಕ್ಕಣ್ಣ ಮಾತನಾಡಿ, ಕರ್ನಾಟಕದ ಮಧ್ಯಕಾಲೀನ ಯುಗವನ್ನು ಕತ್ತಲೆಯ ಯುಗ ಎಂದು ಕರೆಯಲಾಗುತ್ತದೆ. ಆದರೆ ಈ ಕಾಲಘಟ್ಟದ ತತ್ವಪದ ಸಾಹಿತ್ಯ ಅತ್ಯಂತ ಬಹುಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅಧ್ಯಯನ ಕೇಂದ್ರದಿಂದ 50 ಸಂಪುಟಗಳ ಪ್ರಕಟಣೆ ಮಾಡಲಾಗಿದೆ. ಆದರೂ ಕೆಲವು ತತ್ವಪದಗಳು ಬಿಟ್ಟು ಹೋಗಿದ್ದು, ಅದರ ಪ್ರಕಟಣೆಯ ಸಿದ್ಧತೆಯೂ ನಡೆಯುತ್ತಿದೆ ಎಂದರು.

ವಚನಕಾರರು, ದಾಸರು, ಸಂತರು ಹಾಗೂ ಇನ್ನಿತರೆ ದಾರ್ಶನಿಕರು ಕಟ್ಟಿದ ಅನುಭಾವ ಸಾಹಿತ್ಯ ಬದುಕಿನ ಸರಳತೆ ಮತ್ತು ಸಾಮಾಜಿಕ ಕಳಕಳಿಯನ್ನು ಸಾರುತ್ತದೆ. ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಅರ್ಥಮಾಡಿಕೊಳ್ಳಲು ಅನುಭಾವ ಸಾಹಿತ್ಯ ಸಹಕಾರಿಯಾಗಿದೆ. ಯುವ ಸಮುದಾಯ ಉತ್ತಮ ಭವಿಷ್ಯಕ್ಕಾಗಿ ಅನುಭಾವ ಪರಂಪರೆಯನ್ನು ಗ್ರಹಿಸಿ, ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮಂಡ್ಯ ಜಿ.ಉಷಾರಾಣಿ, ಡಾ.ರಾಜಪ್ಪ ದಳವಾಯಿ, ಡಾ.ಕೆ.ಎನ್.ಗಿರೀಶ್, ಮಹಾದೇವ ಶಂಕನಪುರ ಅವರು ವಿಚಾರ ಮಂಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇರ್ಶಕ ನಂಜುಂಡಯ್ಯ, ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಿ.ರೂಪಶ್ರೀ, ಆರ್.ಉಮೇಶ್ ಇತರರು ಹಾಜರಿದ್ದರು.

ಅನುಭಾವ ಎಲ್ಲಾ ಧರ್ಮಗಳಲ್ಲೂ ಅಡಗಿದೆ:

ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳು ಹಾಗೂ ದಾರ್ಶನಿಕರಲ್ಲೂ ಅನುಭಾವ ಅಡಗಿದೆ ಎಂದು ಸಂಸ್ಕೃತಿ ಚಿಂತಕ ಪ್ರೊ.ಜೆ.ಎಸ್.ಜಯದೇವ್ ಹೇಳಿದರು. ನಾಡಿನಲ್ಲಿ ಅನುಭಾವ ಚಿಂತನೆಯನ್ನು ಶಿವಶರಣರು ಹುಟ್ಟುಹಾಕಿದರು. ಪ್ರತಿಯೊಬ್ಬರಲ್ಲೂ ಅನುಭಾವ ಅಡಗಿರುತ್ತದೆ, ಆದರೆ ತಮ್ಮೊಳಗಿನ ಪಶು ಪ್ರವೃತ್ತಿಗಳಿಂದ ಅನುಭಾವ ಹೀನರಾಗಿತ್ತಾರೆ. ಅನುಭಾವದ ನೆಲೆಯಿಂದ ಮನುಷ್ಯ ಸಂಬಂಧಗಳ ನೆಲೆಗೆ ಬಂದಾಗಿ ಅನುಕಂಪ ಮೂಡುತ್ತದೆ. ತರ್ಕ ಹೆಚ್ಚಾದ್ದಲ್ಲಿ ಅನುಭಾವ ಉಳಿಯುವುದಿಲ್ಲ. ಜೀವಿತದಲ್ಲಿ ಕಲಿತದ್ದೆಲ್ಲವನ್ನೂ ಮರೆಯುವುದೂ ಅನುಭಾವದ ಗುಣವಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net