

ಭಾಲ್ಕಿ: ಬಸವಣ್ಣನನವರು ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆ ತಂದು ಅನುಭವ ಮಂಟಪ ಸ್ಥಾಪಿಸಿದರು ಎಂದು ಕೌಠಾ(ಬಿ) ಬಸವಯೋಗಾಶ್ರಮದ ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದಿಂದ ವಚನ ಜಾತ್ರೆ ಮತ್ತು ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರ ೨೬ನೇ ಸ್ಮರಣೋತ್ಸವ ನಿಮಿತ್ತ ಭಾನುವಾರ ರಾತ್ರಿ ಏರ್ಪಡಿಸಿದ್ದ ಅನುಭವ ಮಂಟಪ ಮಾಡಿ ಅನುಭಾವ ಮೂರ್ತಿಯಾದ ಬಸವಯ್ಯನು ಗೋಷ್ಠಿಯಲ್ಲಿ ಅನುಭಾವ ನೀಡಿದ ಅವರು, ಎಲ್ಲ ವರ್ಗದ ಶರಣರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಅನುಭವ ಮಂಟಪದಲ್ಲಿ ಚರ್ಚಿಸುತ್ತಿದ್ದರು. ಅಂಥ ಅನುಭವ ಮಂಟಪ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಅದನ್ನು ಕೆಲವರು ಕೆದಕುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಬಸವಾದಿ ಶರಣರು ತಮ್ಮ ಅನೇಕ ವಚನಗಳಲ್ಲಿ ಅನುಭವ ಮಂಟಪ ಬಗ್ಗೆ ಉಲ್ಲೇಖಿಸಿದ್ದಾರೆ ಎಂದರು.
ಕಮಲನಗರ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಮಾಣಿಕರಾವ ಪಾಟೀಲ್ ಗೋಷ್ಠಿ ಉದ್ಘಾಟಿಸಿದರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಅಧ್ಯಕಷತೆ ವಹಿಸಿದ್ದರು.
ಪ್ರವಚನ ಸೇವಾ ಸಮಿತಿ ಅಧ್ಯಕ್ಷೆ ಶಶಿಕಲಾ ಅಶೋಕ ವಾಲೆ ಬಸವ ಗುರುಪೂಜೆ ಮಾಡಿದರು. ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಗನ್ನಾಥ ಹೆಬ್ಬಾಳೆ, ಕಲಬುರಗಿಯ ಎಸ್.ದಿವಾಕರ್ ಮಾತನಾಡಿದರು. ಪ್ರಗತಿ ಸಂಗಯ್ಯ ಸ್ವಾಮಿ ವಚನ ಸಂಗೀತ ನಡೆಸಿಕೊಟ್ಟರು. ಆರತಿ ಪಾತ್ರೆ ನಿರೂಪಣೆ ಮಾಡಿದರು. ಪಾರ್ವತಿ ಧುಮ್ಮನಸೂರೆ ವಂದಿಸಿದರು. ನಾಗರಾಜ ವೈಜಿನಾಥ ಸಿರ್ಸೆ ಮತ್ತು ಸರಸ್ವತಿ ಸಿರ್ಸೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.