

ಹುಲಸೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂಥ ಭವ್ಯ ಅನುಭವ ಮಂಟಪ ಕಲ್ಯಾಣದಲ್ಲಿ ಸಿದ್ಧಗೊಳ್ಳುತ್ತಿದ್ದು, ಶೀಘ್ರವೇ ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಅಲ್ಲಮಪ್ರಭು ದೇವರ ಶೂನ್ಯ ಪೀಠ ಅನುಭವ ಮಂಟಪ ಪರಿಸರದಲ್ಲಿ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ಜನ್ಮದಿನ ನಿಮಿತ್ತ ಸೋಮವಾರ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು, ಪಟ್ಟಣದಲ್ಲಿ ನೂತನ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.
ಬಸವ ತತ್ವ ಪ್ರಚಾರ, ಪ್ರಸಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಶ್ರೀ ಡಾ.ಶಿವಾನಂದ ಸ್ವಾಮೀಜಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ೨೩,೦೦೦ ಕಿಮೀ ಪಾದಯಾತ್ರೆ ಮಾಡಿದ್ದಾರೆ. ಇಂಥ ಮಹಾನ್ ದಾರ್ಶನಿಕರ ೭೫ನೇ ಜನ್ಮದಿನವನ್ನು ಅರ್ಥಪೂರ್ಣ ಹಾಗೂ ವೈಭವದಿಂದ ಆಚರಿಸಲಾಗುವುದು ಎಂದರು.
ಯುವಕರು ದುಶ್ಚಟಗಳಿಗೆ ಬಲಿಯಾಗಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದು, ಪಾಲಕರು ಮಕ್ಕಳ ಚಲನವಲನಗಳ ಮೇಲೆ ಸದಾ ನಿಗಾ ಇಡಬೇಕು. ದೇಶದ ಆಸ್ತಿಯಾಗಿರುವ ಯುವಕರೇ ದಾರಿ ತಪ್ಪುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ವೈರಾಗ್ಯ ನಿಧಿ ಅಕ್ಕಮಹಾದೇವಿ ಶ್ರೀ ಪ್ರಶಸ್ತಿ ಸ್ವೀಕರಿಸಿದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ನನಗೆ ನೀಡಿರುವ ಈ ಪ್ರಶಸ್ತಿ ವಿಶ್ವದ ಇಡೀ ಸ್ತ್ರೀ ಕುಲಕ್ಕೆ ಸಲ್ಲುತ್ತದೆ. ಶ್ರೀಗಳು ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದ್ದಾರೆ ಎಂದರು.
ಮಾಜಿ ಸಚಿವ ರಾಜಶೇಖರ ಪಾಟೀಲ್, ಎನ್ನೆಸ್ಸೆಸ್ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ, ಬಸವರಾಜ ಧನ್ನೂರ, ಶರಣಪ್ಪ ಮಿಠಾರೆ, ಚನ್ನಬಸಪ್ಪ ಬಳತೆ, ಮುಜಾಹಿದ್ ಪಾಷಾ ಮಾತನಾಡಿದರು.
ಜೈಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ, ಭರತನೂರು ಶ್ರೀ ಚಿಕ್ಕಗುರು ನಂಜುಂಡೇಶ್ವರ ಸ್ವಾಮೀಜಿ, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸಾಯಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಶಾಸಕರಾದ ಶರಣು ಸಲಗರ, ಡಾ.ಸಿದ್ದಲಿಂಗಪ್ಪ ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ, ತಹಸೀಲ್ದಾರ್ ಶಿವಾನಂದ ಮೇತ್ರೆ, ತಾಪಂ ಇಒ ವೈಜಣ್ಣ ಫುಲೆ, ಪಿಡಿಒ ರಮೇಶ ಮಿಲಿಂದಕರ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಲತಾ ಹಾರಕೂಡೆ, ಸುಧೀರ ಕಾಡಾದಿ, ಶಿವಶಂಕರ ಟೋಕರೆ, ದೀಪಕ ಠಮಕೆ ಇತರರಿದ್ದರು. ರಾಜಕುಮಾರ ಹೊನ್ನಾಡೆ ಸ್ವಾಗತಿಸಿ ನಿರೂಪಣೆ ಮಾಡಿದರು.
ಬಸವ ಟಿವಿ ಮುಖ್ಯಸ್ಥ ಈ. ಕೃಷ್ಣಪ್ಪ ಅವರಿಗೆ ಜಗದ್ಗುರು ಅಲ್ಲಮಪ್ರಭು ದೇವರ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜ ಸೇವಕ ಗುರುನಾಥ ವಡ್ಡೆ, ಡಾ.ಜಿ.ಎಸ್. ಭುರಾಳೆ, ಡಾ.ಪೃಥ್ವಿರಾಜ ಬಿರಾದಾರ, ಶಿವರಾಜ ಬಾಲಕಿಲೆ, ಭದ್ರಪ್ಪ ನಿಣ್ಣೆ ಸೇರಿ ವಿವಿಧ ಕ್ಷೇತ್ರದ ೭೩ ಸಾಧಕರನ್ನು ಸನ್ಮಾನಿಸಲಾಯಿತು.