

ಸ.ದಾ. ಜೋಶಿ ಬೀದರ್
ಬಸವಭೂಮಿ ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ನೂತನ ಅನುಭವ ಮಂಟಪ ಕಾಮಗಾರಿಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. 600 ಕೋಟಿ ರೂ. ವೆಚ್ಚದ ಈ ಯೋಜನೆಗೆ 6ರಂದು ಚಾಲನೆ ಸಿಗುತ್ತಿದೆ. ಮೂರು ವರ್ಷಗಳಿಂದ ನಡೆಯುತ್ತಿದ್ದ ಪ್ರಯತ್ನ, ಒತ್ತಡದ ಬಳಿಕ ಸರ್ಕಾರ ಕಾಮಗಾರಿ ಆರಂಭಿಸಲು ಮುಂದಾಗಿರುವುದು ಬಸವಭಕ್ತರ ಸಂಭ್ರಮಕ್ಕೆ ಕಾರಣವಾಗಿದೆ.
ಶಾಸಕ ಬಿ. ನಾರಾಯಣರಾವ್ ನಿಧನದಿಂದ ತೆರವಾಗಿರುವ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಕ್ಕೆ ಶೀಘ್ರದಲ್ಲೇ ಉಪ ಚುನಾವಣೆ ನಡೆಯಲಿದೆ. ಚುನಾವಣೆ ಘೋಷಣೆಗೆ ಮುನ್ನ ಅನುಭವ ಮಂಟಪ ಕಾಮಗಾರಿಗೆ ಚಾಲನೆ ನೀಡುವ ಬಗ್ಗೆ ಆಡಳಿತರೂಢ ಬಿಜೆಪಿ ಪಾಳಯದಲ್ಲಿ ಗಂಭೀರ ಚರ್ಚೆ ನಡೆದಿದ್ದವು. ಈ ಬಗ್ಗೆ ವಿಜಯವಾಣಿ ವಿಶೇಷ ವರದಿ ಸಹ ಪ್ರಕಟಿಸಿತ್ತು. ನಿರೀಕ್ಷಿಸಿದಂತೆ 6ರಂದು ಮಧ್ಯಾಹ್ನ 12ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದು, ಭರದ ಸಿದ್ಧತೆ ನಡೆದಿದೆ.
ಅನುಭವ ಮಂಟಪಕ್ಕೆ ಕಳೆದ ಬಜೆಟ್ ನಲ್ಲಿ ಸಿಎಂ ಯಡಿಯೂರಪ್ಪ 600 ಕೋಟಿ ಅನುದಾನ ಘೋಷಿಸಿದ್ದು, ಮೊದಲ ಕಂತಿನಲ್ಲಿ 100 ರೂ. ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ಬಿಕೆಡಿಬಿ) ಮುಖಾಂತರ ಈ ಕೆಲಸ ಕೈಗೊಳ್ಳಲಾಗುತ್ತಿದೆ. ವಿಶ್ವದ ಮೊದಲ ಪಾರ್ಲಿಮೆಂಟ್ ಎಂಬ ಖ್ಯಾತಿಯ ಅನುಭವ ಮಂಟಪದ ಭವ್ಯ ಕಟ್ಟಡದ ನೀಲಿನಕ್ಷೆ ಈಗಾಗಲೇ ಸಿದ್ಧವಾಗಿದೆ. ಮೂರು ವರ್ಷದಿಂದ ಆಗದ ಕೆಲಸಕ್ಕೆ ಉಪ ಚುನಾವಣೆ ಹೊಸ್ತಿಲಲ್ಲಿ ಚಾಲನೆ ಕೊಡುವ ಮೂಲಕ ಬಿಜೆಪಿ ನಾಯಕರು ಜಾಣ ನಡೆ ಇಟ್ಟಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಸಮೀಪಿಸುತ್ತಿದೆ. ಆದರೀಗ ಚುನಾವಣೆ ವೇಳೆ ಅಡಿಗಲ್ಲು ನೆರವೇರಿಸುತ್ತಿರುವುದರ ಹಿಂದೆ ನನೆಗುದಿಗೆ ಬಿದ್ದ ಕಾಮಗಾರಿಗೆ ಚಾಲನೆ ನೀಡಿದ ಶ್ರೇಯ ಪಡೆಯುವ ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತರ ಮತಗಳು ಸಂಪೂರ್ಣ ತಮ್ಮತ್ತ ಸೆಳೆಯುವ ಉದ್ದೇಶ ಹೊಂದಲಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಹಿರಿಯ ವಿದ್ವಾಂಸ ಗೊ.ರು. ಚನ್ನಬಸಪ್ಪ ನೇತೃತ್ವದ ತಜ್ಞರ ಸಮಿತಿ ಅನುಭವ ಮಂಟಪ ನಿರ್ಮಾಣ ಸಂಬಂಧ ಸರ್ಕಾರಕ್ಕೆ ಶಿಫಾರಸು ಮಾಡಿ 650 ಕೋಟಿ ರೂ. ಕಲ್ಪಿಸಲು ಕೋರಿತ್ತು. ಸಿದ್ದರಾಮಯ್ಯ ಸಿಎಂ ಇದ್ದಾಗ ತಮ್ಮ ಕೊನೇ ಬಜೆಟ್ ಮೇಲಿನ ಉತ್ತರದಲ್ಲಿ (2017) ನೂತನ ಅನುಭವ ಮಂಟಪ ವಿಷಯ ಸೇರಿಸಿ 100 ಕೋಟಿ ಅನುದಾನ ಕೊಡುವುದಾಗಿ ಹೇಳಿದ್ದರು. ಆದರೆ ಕೇವಲ ಘೋಷಣೆಗೆ ಸೀಮಿತವಾಯಿತು. ನಂತರ ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಇದ್ದಾಗ ಬಜೆಟ್ ನಲ್ಲಿ ಈ ವಿಷಯವೇ ಬರಲಿಲ್ಲ. ಇದು ಮಠಾಧೀಶರ, ಬಸವಭಕ್ತರ ಆಕ್ರೋಶಕ್ಕೆ ಗುರಿಯಾಗಿತ್ತು. ನಂತರ ಯಡಿಯೂರಪ್ಪ ಸರ್ಕಾರ ಬಂದ ಬಳಿಕ 600 ಕೋಟಿ ಅನುದಾನ ಘೋಷಿಸಿ ಮೊದಲ ಹಂತದಲ್ಲಿ 100 ಕೋಟಿ ರೂ. ಮಂಜೂರಿ ಮಾಡಲಾಗಿದೆ. ಅನಗತ್ಯ ವಿವಾದ, ಗೊಂದಲ ಸೃಷ್ಟಿಗೆ ಅವಕಾಶ ನೀಡದ್ದರಿಂದ ತಜ್ಞರ ತಂಡದ ಸಲಹೆ, ನಿರ್ಣಯದ ಪ್ರಕಾರ ಸಿದ್ಧಪಡಿಸಿರುವ ನೀಲಿನಕ್ಷೆಯಂತೆ ಕಟ್ಟಡ ಕೆಲಸ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಗೊತ್ತಾಗಿದೆ.
33 ಎಕರೆ ಜಮೀನು ಲಭ್ಯ
ತ್ರಿಪುರಾಂತ ಕೆರೆ ದಂಡೆಯ ನಿಸರ್ಗ ರಮಣೀಯ ಪರಿಸರದಲ್ಲಿ ಭಾಲ್ಕಿ ಹಿರೇಮಠದ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರು ಕಟ್ಟಿರುವ ಹಾಲಿ ಆಧುನಿಕ ಅನುಭವ ಮಂಟಪ ಸುತ್ತಮುತ್ತಲಿನ ಸ್ಥಳ ಬಳಸಿಕೊಂಡು ರಾಜ್ಯ ಸರ್ಕಾರ ನೂತನ ಅನುಭವ ಮಂಟಪ ನಿರ್ಮಿಸಲು ನಿರ್ಧರಿಸಿದೆ. ಸದ್ಯ 33 ಎಕರೆ ಜಮೀನು ಲಭ್ಯವಿದ್ದು, ಇದನ್ನು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಲಾಗುತ್ತಿದೆ. ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ವಿಶೇಷ ಕಾಳಜಿ, ಪ್ರಯತ್ನದ ಫಲವಾಗಿ ಸರ್ಕಾರಕ್ಕೆ ಅಗತ್ಯ ಜಮೀನಿನ ಲಭ್ಯತೆಯಾಗಿ ಕನಸು ಸಾಕಾರಗೊಳ್ಳುವತ್ತ ಸಾಗಿದೆ. ಸರ್ಕಾರ ಸುಮಾರು 100 ಎಕರೆ ಜಾಗ ಪಡೆದು ಈ ಪರಿಸರ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ತಾಣವಾಗಿ ಮಾಡಲು ಚಿಂತನೆ ನಡೆಸಿದೆ. ಬರುವ ದಿನಗಳಲ್ಲಿ ಇನ್ನಷ್ಟು ಸ್ಥಳ ಸರ್ಕಾರಕ್ಕೆ ಸಿಗುವ ಸಾಧ್ಯತೆಗಳಿವೆ. ಮುಂಚೆಯಿಂದಲೇ 25 ಎಕರೆ ಜಾಗ ಅನುಭವ ಮಂಟಪದ ಹೆಸರಿನಲ್ಲಿತ್ತು. ಅನುಭವ ಮಂಟಪ ಟ್ರಸ್ಟ್ ಹೆಸರಿಗಿದ್ದ 8 ಎಕರೆ ಜಾಗದ ಕಾಗದ ಪತ್ರಗಳನ್ನು ಇತ್ತೀಚೆಗೆ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಂಡಳಿ ವಿಶೇಷಾಧಿಕಾರಿ ಡಾ.ಎಚ್.ಆರ್. ಮಹಾದೇವ ಅವರಿಗೆ ಹಸ್ತಾಂತರಿಸಿದ್ದಾರೆ.
ನೂತನ ಅನುಭವ ಮಂಟಪ ನಿರ್ಮಾಣಕ್ಕೆ 6ರಂದು ಸಿಎಂ ಯಡಿಯೂರಪ್ಪ ಭೂಮಿ ಪೂಜೆ ನೆರವೇರಿಸುತ್ತಿರುವುದು ಖುಷಿ ತಂದಿದೆ. ಈಗಾಗಲೇ ಕೆಲಸ ಆರಂಭಕ್ಕೆ ಸಾಕಷ್ಟು ವಿಳಂಬವಾಗಿದೆ. ಕಾಮಗಾರಿಗೆ ಚಾಲನೆ ನೀಡಿ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಗತ್ಯ ಅನುದಾನ ಒದಗಿಸಬೇಕು. ಬಸವಕಲ್ಯಾಣ, ಶರಣರ ಚಿಂತನೆ, ವಚನ ಸಾಹಿತ್ಯ ಮತ್ತೆ ವಿಶ್ವಕ್ಕೆ ಬೆಳಕಾಗಬೇಕು. ಕಲ್ಯಾಣ ಗತವೈಭವ ಮೆರೆಯಬೇಕು. ಇದಕ್ಕೆ ಅನುಭವ ಮಂಟಪವೇ ಕೇಂದ್ರ ಸ್ಥಳವಾಗಿಸುವ ಕೆಲಸ ನಡೆಯಬೇಕು.| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರುಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ
ಯಡಿಯೂರಪ್ಪ ಅವರದ್ದು ನುಡಿದಂತೆ ನಡೆಯುವ ಸರ್ಕಾರ. ಭವ್ಯ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸುವ ಬಗ್ಗೆ ಸಿಎಂ ಸ್ಪಷ್ಟಪಡಿಸಿ ಆರಂಭಿಕವಾಗಿ 100 ಕೋಟಿ ರೂ. ಒದಗಿಸುವ ಘೋಷಣೆ ಮಾಡಿದ್ದಾರೆ. 6ರಂದು ಭೂಮಿಪೂಜೆ ನೆರವೇರಿಸುತ್ತಿರುವುದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಬಸವಕಲ್ಯಾಣ ಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಐತಿಹಾಸಿಕ ಪ್ರವಾಸಿ ಹಾಗೂ ಆಧ್ಯಾತ್ಮಿಕ ತಾಣವಾಗುವಲ್ಲಿ ಸಂದೇಹವೇ ಇಲ್ಲ.| ಪ್ರಭು ಚವ್ಹಾಣ್ ಜಿಲ್ಲಾ ಉಸ್ತುವಾರಿ ಸಚಿವ