ಅನುಭವ ಮಂಟಪ ಕೆಲಸ ಶೇ.೬೩ ಪೂರ್ಣ

9BSK1
ಬಸವಕಲ್ಯಾಣ ಹೊರವಲಯದಲ್ಲಿ ನಡೆದಿರುವ ಅನುಭವ ಮಂಟಪ ಕಾಮಗಾರಿ ಸ್ಥಳಕ್ಕೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಠಾರಿಯಾ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಡಿಸಿ ಶಿಲ್ಪಾ ಶರ್ಮಾ, ಎಸಿ ಮುಕುಲ್ ಜೈನ್, ಬಿಕೆಡಿಬಿ ಆಯುಕ್ತ ಜಗನ್ನಾಥರೆಡ್ಡಿ, ಜಗ್ನನಾಥ ಹಲಿಂಗೆ, ದತ್ತಾತ್ರೇಯ ಗಾದಾ ಇತರರಿದ್ದರು.
Published on

ಬಸವಕಲ್ಯಾಣ: ನಗರ ಹೊರವಲಯದಲ್ಲಿ ನಡೆದಿರುವ ನೂತನ ಅನುಭವ ಮಂಟಪ ನಿರ್ಮಾಣ ಕಾಮಗಾರಿ ಶೇ.೬೩ ಮುಗಿದಿದ್ದು, ಶೀಘ್ರದಲ್ಲಿ ಉಳಿದ ಕೆಲಸ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದಾಗಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಠಾರಿಯಾ ಹೇಳಿದರು.

ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಅನುಭವ ಮಂಟಪ ಯೋಜನೆ ಹಾಗೂ ಪ್ರಸ್ತುತ ಕೆಲಸದ ಗುಣಮಟ್ಟ, ಪ್ರಗತಿ ಸೇರಿ ವಿವಿಧ ವಿಷಯಗಳ ಬಗ್ಗೆ ಸ್ಥಳದಲ್ಲಿದ್ದ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು. ಬಳಿಕ ಬಿಕೆಡಿಬಿ ಕಚೇರಿಯಲ್ಲಿ ಅನುಭವ ಮಂಟಪ ಯೋಜನೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದರು.

ಶರಣರ ತತ್ವ ಚಿಂತನೆಗಳನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಅನುದಾನದ ಕೊರತೆ ಇಲ್ಲ. ಕೆಲದಿನ ಹಿಂದೆ ಯೋಜನೆ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ಗುಣಮಟ್ಟದೊಂದಿಗೆ ಕೆಲಸ ಮುಗಿಸಲು ಕಾಳಜಿ ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಸಹಾಯಕ ಆಯುಕ್ತ ಮುಕುಲ್ ಜೈನ್, ಬಿಕೆಡಿಬಿ ಆಯುಕ್ತ ಜಗನ್ನಾಥರೆಡ್ಡಿ, ತಾಂತ್ರಿಕ ಸಲಹಾ ಸಮಿತಿ ಚೇರ್ಮನ್ ಜಗ್ನನಾಥ ಹಲಿಂಗೆ, ತಹಸೀಲ್ದಾರ್ ದತ್ತಾತ್ರೇಯ ಗಾದಾ ಇತರರಿದ್ದರು.

ಬಳಿಕ ತಹಸಿಲ್, ಸಹಾಯಕ ಆಯುಕ್ತರ ಕಚೇರಿ ಸೇರಿ ವಿವಿಧೆಡೆ ಭೇಟಿ ನೀಡಿ ಸಿಬ್ಬಂದಿ ಜತೆ ಸಂವಾದ ನಡೆಸಿ ಕಾರ್ಯಚಟುವಟಿಕೆ ಪರಿಶೀಲಿಸಿದರು. ಮಂಠಾಳ ಗ್ರಾಮದ ನಾಡ ಕಚೇರಿ, ಗ್ರಾಮ ಆಡಳಿತ ಅಧಿಕಾರಿ ಕಚೇರಿ, ಚಂಡಕಾಪುರ ಗ್ರಾಮ ಪಂಚಾಯಿತಿಗೂ ಭೇಟಿ ನೀಡಿ ಸ್ಥಳೀಯರಿಂದ ಇಲಾಖೆ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಅಮೃತ ಕುಂಡದಲ್ಲಿ ದರ್ಶನ: ಚಂಡಕಾಪುರ ಗ್ರಾಮದ ಅಮೃತಕುಂಡದಲ್ಲಿನ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ಬಸವಕಲ್ಯಾಣ ಹೊರವಲಯದ ಬಸವ ಮಹಾಮನೆ ಪರಿಸರದಲ್ಲಿರುವ ವಿಶ್ವ ಗುರು ಬಸವಣ್ಣನವರ ೧೦೮ ಅಡಿ ಪುತ್ಥಳಿ ಸ್ಥಳಕ್ಕೆ ಭೇಟಿ ನೀಡಿ ರಾಜೇಂದ್ರಕುಮಾರ ಕಠಾರಿಯಾಗಿ ದರ್ಶನ ಪಡೆದರು. ಬಸವ ಮಹಾಮನೆ ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ನೇತೃತ್ವದಲ್ಲಿ ಕಠಾರಿಯಾ ಅವರನ್ನು ಸನ್ಮಾನಿಸಿ ಆಶೀರ್ವದಿಸಲಾಯಿತು. ಮುಖಂಡ ಶಿವರಾಜ ನರಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net