

ಭಾಲ್ಕಿ: ನವೆಂಬರ್ 25, 26ರಂದು ಬಸವಕಲ್ಯಾಣದಲ್ಲಿ ನಡೆಯುವ 44ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವಕ್ಕೆ ಆಗಮಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭಾಲ್ಕಿ ಹಿರೇಮಠ ಸಂಸ್ಥಾನದಿಂದ ಆಹ್ವಾನ ನೀಡಲಾಯಿತು.
ಬೆಂಗಳೂರಿನಲ್ಲಿ ಶನಿವಾರ ಖರ್ಗೆ ಅವರನ್ನು ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಆಹ್ವಾನಿಸಿ ನಾಲ್ಕೂವರೆ ದಶಕದಿಂದ ಕಲ್ಯಾಣದಲ್ಲಿ ಅನುಭವ ಮಂಟಪ ಉತ್ಸವವನ್ನು ಅದ್ದೂರಿ ಜತೆಗೆ ಅರ್ಥಪೂರ್ಣವಾಗಿ ಆಯೋಜಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಬಹುದೊಡ್ಡ ಕಾರ್ಯಕ್ರಮ ಇದಾಗಿದೆ. ಹೀಗಾಗಿ ತಾವು ಆಗಮಿಸಬೇಕು ಎಂದು ಕೋರಿದರು.
ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳು ಸಾರ್ವಕಾಲಿಕ ಪ್ರಸ್ತುತವಾಗಿದ್ದು, ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಜಗತ್ತಿಗೆ ಮಾದರಿಯಾಗಿದೆ. ಪ್ರಜಾಪ್ರಭುತ್ವದ ಜನನಿ ಎಂಬ ಹೆಗ್ಗಳಿಕೆ ಪಡೆಯುತ್ತಿರುವುದು ನಮಗೆ ಅತ್ಯಂತ ಅಭಿಮಾನದ ಸಂಗತಿ. ಅಂಥ ಉತ್ಸವದಲ್ಲಿ ಭಾಗಿಯಾಗಲು ಪ್ರಯತ್ನಿಸುವುದಾಗಿ ಪೂಜ್ಯರಿಗೆ ಖರ್ಗೆ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಲಕ್ಷ್ಮಣ ಗುಪ್ತಾ, ಮಲ್ಲಿಕಾರ್ಜುನ ಮಹೇಂದ್ರಕರ್, ಸೂರ್ಯಕಾಂತ ಅರಳಿ ಇತರರಿದ್ದರು.