

ಕಲಬುರಗಿ: ರಾಜ್ಯ ಅನುದಾನಿತ ಶಾಲೆ, ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಬೃಹತ್ ಸಮಾವೇಶ ಶಿವಮೊಗ್ಗದಲ್ಲಿ ನ.೫ರಂದು ಹಮ್ಮಿಕೊಳ್ಳಲಾಗಿದೆ ಎಂದು ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೃಷ್ಣ ಮಾಗಣಗೇರಿ ತಿಳಿಸಿದರು.
ಹಳೇ ಪಿಂಚಣಿ ಯೋಜನೆ ಪುನರಾರಂಭಿಸಬೇಕು, ಹೊಸ ಪಿಂಚಣಿ ಯೋಜನೆ ಸ್ಥಗಿತಗೊಳಿಸಬೇಕು ಎಂಬ ಆಗ್ರಹದೊಂದಿಗೆ ಸಮಾವೇಶ ಹಮ್ಮಿಕೊಂಡಿದ್ದು, ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ರಾಜ್ಯದ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಸುಮಾರು ೬೦ ಸಾವಿರ ಪಿಂಚಣಿ ವಂಚಿತರಿದ್ದಾರೆ. ೨೦೦೬ಕ್ಕಿಂತ ಪೂರ್ವದಲ್ಲಿ ನೇಮಕಾತಿ ಹೊಂದಿದ ಅನುದಾನಿತ ಶಾಲೆ, ಕಾಲೇಜುಗಳ ನೌಕರರಿಗೆ ಪಿಂಚಣಿ ಇಲ್ಲ. ನಂತರದವರಿಗೂ ನೀಡುತ್ತಿಲ್ಲ. ಕೂಡಲೇ ಪಿಂಚಣಿ ಆರಂಭಿಸಬೇಕು ಎಂದು ಆಗ್ರಹಿಸಲಾಗುವುದು ಎಂದು ತಿಳಿಸಿದರು.ಪ್ರಮುಖರಾದ ಇಸಾಮುದ್ದೀನ್ ಖಾಜಿ, ಸೂರ್ಯಕಾಂತ ಪಿ.ಜಿ., ಚನ್ನಬಸಪ್ಪ ಕೊಲ್ಲೂರ, ಮಲ್ಲಿಕಾರ್ಜುನ ಡೊಣ್ಣೂರ, ಅಂಬಾದಾಸ ಪಾಟೀಲ್, ಅಲ್ತಾಫ್ ಇತರರಿದ್ದರು.