ಅನುದಾನಿತ ನೌಕರರಿಗೆ ಓಪಿಎಸ್ ಜಾರಿ ಮಾಡಿ

oppo_2
oppo_2
Published on

ಕಲಬುರಗಿ: ರಾಜ್ಯ ಅನುದಾನಿತ ಮತ್ತು ಸರ್ಕಾರಿ ಶಾಲಾ, ಕಾಲೇಜುಗಳ ಪಿಂಚಣಿ ವಂಚಿತ ನೌಕರರಿಗೆ ಎನ್‌ಪಿಎಸ್ ರದ್ದು ಮಾಡಿ, ಹಳೆಯ ನಿಶ್ಚಿತ ಪಿಂಚಣಿ (ಓಪಿಎಸ್) ಜಾರಿಗೆ ಆಗ್ರಹಿಸಿ ಡಿ.೧೭ರಂದು ಬೆಳಗಾವಿಯ ಸುವರ್ಣ ಸೌಧದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಳಾಗಿದೆ ಎಂದು ಅನುದಾನಿತ ಶಾಲೆ, ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಶ್ರೀಕೃಷ್ಣ ಮಾಗಣಗೇರಿ ತಿಳಿಸಿದರು.

೨೦೦೬ ಏಪ್ರಿಲ್ ೧ಕ್ಕಿಂತ ಪೂರ್ವ ನೇಮಕವಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರ ಅನುದಾನಕ್ಕೂ ಪೂರ್ವ ಸೇವೆ ಪರಿಗಣಿಸಲು ಅಡ್ಡಿಯಾದ ೨೦೧೪ರ ವಿಧೇಯಕ ರದ್ದುಪಡಿಸಲು ನೌಕರರ ಪರ ಬಂದ ಕೋರ್ಟ್ ತೀರ್ಪು ವಿರುದ್ಧ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಹಿಂಪಡೆಯಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಓಪಿಎಸ್ ಜಾರಿ ವಿಳಂಬವಾದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವಂತೆ ಎನ್‌ಪಿಎಸ್ ಯಥಾವತ್ತಾಗಿ ಜಾರಿ ಮಾಡಬೇಕು. ನೇಮಕ, ಪ್ರಾಧಿಕಾರದ ವಂತಿಗೆಯನ್ನು ಆಡಳಿತ ಮಂಡಳಿ ಬದಲು ಸರ್ಕಾರವೇ ಭರಿಸಲು ಕ್ರಮ ವಹಿಸಬೇಕು, ಜ್ಯೋತಿ ಸಂಜೀವಿನಿ ಯೋಜನೆಯನ್ನು ಯಥಾವತ್ತಾಗಿ ಜಾರಿ ಮಾಡಬೇಕು, ಅನುದಾನಿತ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಕೊಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಲಾಗುವುದು ಎಂದರು.

ಇಸಾಮುದ್ದೀನ್ ಖಾಜಿ, ಸೂರ್ಯಕಾಂತ ಪಿ.ಜಿ., ಅಂಬಾದಾಸ ಪಾಟೀಲ್, ಭಾನುಕುಮಾರ ಗಿರೇಗೋಳ, ಅಶೋಕ ನಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net