ಅನುದಾನದ ಅಭಾವ, ಬೀಜಗಳ ಕೊರತೆ

1-hvr-01
Published on

ಹಾವೇರಿ: ಕಳೆದ ವರ್ಷದ ಅತಿವೃಷ್ಟಿಯ ಹೊಡೆತಕ್ಕೆ ಸಿಲುಕಿದ್ದ ಬಿ.ಟಿ. ಹತ್ತಿ ಹಾಗೂ ಅತಿವೃಷ್ಟಿಯ ನಂತರ ಬಿತ್ತನೆ ಮಾಡಿ ಬೆಳೆದಿದ್ದ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗದ ಕಾರಣ ಈ ಸಾರಿ ಜಿಲ್ಲೆಯ ರೈತರು ಶೇಂಗಾ ಹಾಗೂ ಸೋಯಾಬಿನ್ ಮೊರೆ ಹೋಗುತ್ತಿದ್ದಾರೆ.

ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ ಬಿತ್ತನೆಗೆ ಪೂರಕವೆನ್ನಿಸುವಷ್ಟು ಮಳೆ ಮೇ ಅಂತ್ಯದಲ್ಲಿ ಆಗಿದೆ. ಇದರಿಂದ ಬಿತ್ತನೆ ಬೀಜಗಳನ್ನು ರೈತರು ಕೊಳ್ಳಲು ಆರಂಭಿಸಿದ್ದಾರೆ. ಆದರೆ, ರೈತರ ಬೇಡಿಕೆಗೆ ತಕ್ಕಂತೆ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಪೂರೈಕೆಯಾಗುವ ಸೋಯಾಬಿನ್ ಹಾಗೂ ಶೇಂಗಾ ಬಿತ್ತನೆ ಬೀಜಗಳು ರೈತ ಸಂಪರ್ಕ ಕೇಂದ್ರದಲ್ಲಿ ಸಿಗದೇ ಪರದಾಡುವಂತಾಗಿದೆ.

ಏಕೆ ಕೊರತೆ?: ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ಪೂರೈಸಲು ಈ ಸಾರಿ ಸರ್ಕಾರವು ಕೇವಲ 3.31 ಕೋಟಿ ರೂ. ಹಂಚಿಕೆ ಮಾಡಿದೆ. ಹಿಂದಿನ ವರ್ಷ 4.61 ಕೋಟಿ ರೂ.ಗಳ ಅನುದಾನವನ್ನು ಸರ್ಕಾರ ಜಿಲ್ಲೆಗೆ ಹಂಚಿಕೆ ಮಾಡಿತ್ತು. ಕರೊನಾ ಕರಿನೆರಳಿನ ಪರಿಣಾಮವಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾರಿ 1.30 ಕೋಟಿ ರೂ.ಗಳಷ್ಟು ಕಡಿಮೆ ಅನುದಾನ ಜಿಲ್ಲೆಗೆ ಹಂಚಿಕೆಯಾಗಿದೆ. ಈ ಅನುದಾನದಲ್ಲೇ ರೈತರಿಗೆ ರಿಯಾಯಿತಿ ದರದ ಬಿತ್ತನೆ ಬೀಜಗಳನ್ನು ಪೂರೈಸಲು ಕೃಷಿ ಇಲಾಖೆ ಯೋಜನೆ ರೂಪಿಸಿಕೊಂಡಿದೆ. ಆದರೆ, ರೈತರು ಕೃಷಿ ಇಲಾಖೆಯು ಹಾಕಿಕೊಂಡಿದ್ದ ಯೋಜನೆಯ ಬದಲು ಅನ್ಯ ಬೆಳೆಗಳತ್ತ ವಾಲುತ್ತಿರುವುದರಿಂದ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆಗೆ ಸ್ವಲ್ಪ ಸಮಸ್ಯೆಯಾಗಿ ಪರಿಣಮಿಸಿದೆ. ರೈತರು ಕೇಳುತ್ತಿರುವ ಸೋಯಾಬಿನ್ ಹಾಗೂ ಶೇಂಗಾ ಬಿತ್ತನೆ ಬೀಜದ ಕೊರತೆ ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಾಗಿ, ರೈತರು ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಕ್ಕೆ ಅಲೆದಾಡುವಂತಾಗಿದೆ.

ಅನ್ಯ ಬೆಳೆ ಯಾಕೆ?: ಕಳೆದ ವರ್ಷದ ಅತಿವೃಷ್ಟಿಯ ಮಧ್ಯೆಯೂ ಅಲ್ಪಸ್ವಲ್ಪ ಪ್ರಮಾಣದಲ್ಲಿ ಬಿ.ಟಿ. ಹತ್ತಿಯನ್ನು ರೈತರು ಬೆಳೆದಿದ್ದರು. ಆದರೆ, ಬಿ.ಟಿ. ಹತ್ತಿಗೆ ಪ್ರತಿ ಕ್ವಿಂಟಾಲ್​ಗೆ 5000 ದಿಂದ 5,500 ರೂ.ಗಳವರೆಗೆ ಇದ್ದ ದರ ಏಕಾಏಕಿ ಕುಸಿತಕಂಡಿತು 3000ದಿಂದ 3,500 ರೂ.ಗೆ ತಲುಪಿತು. ಹೀಗಾಗಿ, ಪ್ರತಿ ವರ್ಷ 70ರಿಂದ 80ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತಿದ್ದ ಬಿ.ಟಿ. ಹತ್ತಿಯನ್ನು ಬೆಳೆಯಲು ರೈತರು ಈ ಸಾರಿ ಹಿಂದೇಟು ಹಾಕುತ್ತಿದ್ದಾರೆ. ಇನ್ನು ಪ್ರತಿವರ್ಷ ಮುಂಗಾರು ಹಂಗಾಮಿನಲ್ಲಿ 1.50 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತಿದ್ದ ಮೆಕ್ಕೆಜೋಳಕ್ಕೆ ಕಳೆದೊಂದು ವರ್ಷದಿಂದ ಬೆಲೆಯೇ ಸಿಕ್ಕಿಲ್ಲ. ಇದರಿಂದಾಗಿ, ಮೆಕ್ಕೆಜೋಳ ಬೆಳೆಯಲು ರೈತರು ಹಿಂದೆಮುಂದೆ ನೋಡುತ್ತಿದ್ದಾರೆ. ಸ್ವಲ್ಪ ಲಾಭ ತಂದುಕೊಡಬಹುದು ಎಂಬ ನಿರೀಕ್ಷೆಯೊಂದಿಗೆ ಸೋಯಾಬಿನ್ ಹಾಗೂ ಶೇಂಗಾ ಬಿತ್ತನೆಯತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ.

ಜಿಲ್ಲೆಯಲ್ಲಿ ಪ್ರತಿ ವರ್ಷ ಸಾಮಾನ್ಯವಾಗಿ ಒಟ್ಟು ಬಿತ್ತನೆ ಪ್ರದೇಶದಲ್ಲಿ ಶೇ. 50ಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡುತ್ತಿದ್ದರು. ಶೇ. 25ರಷ್ಟು ಪ್ರದೇಶದಲ್ಲಿ ಬಿ.ಟಿ. ಹತ್ತಿ ಬಿತ್ತನೆಯಾಗುತ್ತಿತ್ತು. ಈ ಬಾರಿ ಈ ಎರಡೂ ಬೆಳೆಗಳತ್ತ ರೈತರು ಚಿತ್ತ ಹರಿಸಿಲ್ಲ. ಹೀಗಾಗಿ, ಯಾವ ಬೀಜಗಳನ್ನು ರೈತರಿಗೆ ನೀಡಬೇಕು ಎಂಬ ಅಂದಾಜು ಕೃಷಿ ಇಲಾಖೆಗೆ ಸಿಕ್ಕಿಲ್ಲ.

ಯಾವ ಬೀಜಕ್ಕೆ ಎಷ್ಟು ರಿಯಾಯಿತಿ: ಮೆಕ್ಕೆಜೋಳಕ್ಕೆ ಎಸ್​ಸಿ, ಎಸ್​ಟಿ ರೈತರಿಗೆ ಪ್ರತಿ ಕೆಜಿಗೆ 30 ರೂ., ಸಾಮಾನ್ಯ ರೈತರಿಗೆ ಪ್ರತಿ ಕೆಜಿಗೆ 20 ರೂ. ರಿಯಾಯಿತಿಯಿದೆ. ಮೆಕ್ಕೆಜೋಳ ಬಿತ್ತನೆಗೆ ಪ್ರತಿ ಎಕರೆಗೆ 6ರಿಂದ 8 ಕೆಜಿ ಬೀಜ ಬೇಕಾಗುತ್ತದೆ. ಮೆಕ್ಕೆಜೋಳವು ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾದರೆ ರಿಯಾಯಿತಿಯ ಹಣವೂ ಅಲ್ಪಪ್ರಮಾಣದಲ್ಲಿ ಖರ್ಚಾಗುತ್ತದೆ. ಅದರ ಬದಲು ಸೋಯಾಬಿನ್ ಬೀಜವನ್ನು ರೈತರು ಖರೀದಿಸಿದರೆ 1ಎಕರೆಗೆ 30 ಕೆಜಿಯಷ್ಟು ಬೀಜ ಬೇಕು. ಇದಕ್ಕೆ ಪ್ರತಿ ಕೆಜಿಗೆ ಎಸ್​ಸಿ,ಎಸ್​ಟಿ ರೈತರಿಗೆ 37.50 ರೂ. ಹಾಗೂ ಸಾಮಾನ್ಯ ರೈತರಿಗೆ 25 ರೂ. ರಿಯಾಯಿತಿಯಿದೆ. ಇನ್ನು ಶೇಂಗಾ ಬೀಜ ಪ್ರತಿ ಎಕರೆಗೆ 40ರಿಂದ 50 ಕೆಜಿಯಷ್ಟು ಬೇಕು. ನೀರಾವರಿಯಾದರೆ 50ರಿಂದ 60 ಕೆಜಿ ಬೇಕು. ಇದಕ್ಕೆ ಪ್ರತಿ ಕೆಜಿಗೆ ಸಾಮಾನ್ಯ ರೈತರಿಗೆ 15 ರೂ. ಎಸ್​ಸಿ,ಎಸ್​ಟಿಯವರಿಗೆ 22.50 ರೂ. ರಿಯಾಯಿತಿಯಿದೆ. ಇವೆರಡು ಬೀಜಗಳನ್ನು ಹೆಚ್ಚು ರೈತರು ಖರೀದಿಸಿದರೆ ಸರ್ಕಾರದಿಂದ ಹಂಚಿಕೆಯಾಗಿರುವ ಅನುದಾನದಲ್ಲಿ ಎಲ್ಲ ರೈತರಿಗೆ ರಿಯಾಯಿತಿ ದರದಲ್ಲಿ ಬೀಜ ವಿತರಿಸುವುದು ಕೃಷಿ ಇಲಾಖೆಗೆ ಕಷ್ಟಕರವಾಗುತ್ತದೆ. ಹೀಗಾಗಿ, ಕೃಷಿ ಇಲಾಖೆಯು ಒಬ್ಬ ರೈತನಿಗೆ 5 ಎಕರೆಯ ಬದಲು ಗರಿಷ್ಠ 3 ಎಕರೆಗೆ ಬಿತ್ತನೆ ಬೀಜಗಳನ್ನು ಪೂರೈಸಲು ಮುಂದಾಗಿದೆ.

ಯಾವ ಬೆಳೆ ಎಷ್ಟು ಬಿತ್ತನೆ ಗುರಿ?

ಜಿಲ್ಲೆಯಲ್ಲಿ 2020ರ ಮುಂಗಾರು ಹಂಗಾಮಿನಲ್ಲಿ ಒಟ್ಟು 3,32,826ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಪ್ರಮುಖವಾಗಿ ಮೆಕ್ಕೆಜೋಳ 1,63,318ಹೆಕ್ಟೇರ್, ಬಿಟಿಹತ್ತಿ 77,565ಹೆಕ್ಟೇರ್, ಭತ್ತ 40,235ಹೆಕ್ಟೇರ್, ಶೇಂಗಾ 19,840ಹೆಕ್ಟೇರ್ ಹಾಗೂ ಸೋಯಾಭಿನ್ 11,360ಹೆಕ್ಟೇರ್ ಬಿತ್ತನೆಯ ನಿರೀಕ್ಷೆಯನ್ನು ಕೃಷಿ ಇಲಾಖೆ ಹೊಂದಿತ್ತು. ಅದರ ಲೆಕ್ಕಾಚಾರದಲ್ಲಿಯೇ ಸರ್ಕಾರದ ಸಬ್ಸಿಡಿ ಹಣವನ್ನು ಹಂಚಿಕೆ ಮಾಡಲು ಯೋಜನೆ ರೂಪಿಸಿತ್ತು. ಆದರೆ ಇದೀಗ ರೈತರು ಶೇಂಗಾ ಹಾಗೂ ಸೋಯಾಭಿನ್ ಬೀಜಗಳಿಗೆ ಬೇಡಿಕೆ ಹೆಚ್ಚು ಸಲ್ಲಿಸುತ್ತಿರುವುದರಿಂದ ಕೃಷಿ ಇಲಾಖೆಗೆ ಬೀಜ ಪೂರೈಕೆ ಕಗ್ಗಂಟ್ಟಾಗಿ ಪರಿಣಮಿಸಿದೆ.

ಕೃಷಿ ಇಲಾಖೆಗೆ ಈ ಸಾರಿ 3.31 ಕೋಟಿ ರೂ.ಗಳ ಅನುದಾನವು ಬಿತ್ತನೆ ಬೀಜಗಳ ಪೂರೈಕೆಗೆ ಹಂಚಿಕೆಯಾಗಿದೆ. ನಮ್ಮ ಗುರಿಯಂತೆ ಬಿತ್ತನೆಯಾದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಈ ಸಾರಿ ರೈತರು ಮೆಕ್ಕೆಜೋಳದ ಬದಲು ಶೇಂಗಾ ಹಾಗೂ ಸೋಯಾಬಿನ್ ಬೀಜಗಳನ್ನು ಹೆಚ್ಚಾಗಿ ಕೇಳುತ್ತಿದ್ದಾರೆ. ರೈತರ ಬೇಡಿಕೆಗೆ ತಕ್ಕಂತೆ ಬೀಜ ಪೂರೈಸಲು ಕ್ರಮ ಕೈಗೊಂಡಿದ್ದೇವೆ. ಸರ್ಕಾರವು ಈಗ ಹಂಚಿಕೆಯಾಗಿರುವ ಅನುದಾನ ಖಾಲಿಯಾದರೆ ಇನ್ನಷ್ಟು ಕೊಡುವುದಾಗಿ ತಿಳಿಸಿದೆ. ಹೀಗಾಗಿ, ರೈತರಿಗೆ ಸಮಸ್ಯೆಯಾಗದಂತೆ ಬೀಜ ಪೂರೈಸುತ್ತೇವೆ. ಪರ್ಯಾಯ ಬೆಳೆಗಳನ್ನು ರೈತರು ಬೆಳೆಯುವಂತೆ ಪ್ರೋತ್ಸಾಹಿಸಲು ಗರಿಷ್ಠ 3 ಎಕರೆಗೆ ಮಾತ್ರ ಒಂದೇ ಬೆಳೆಯ ಬೀಜ ವಿತರಣೆ ಮಾಡುತ್ತಿದ್ದೇವೆ. | ಬಿ. ಮಂಜುನಾಥ, ಜಂಟಿ ನಿರ್ದೇಶಕರು ಕೃಷಿ ಇಲಾಖೆ ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net