

ಬಾಗೇಪಲ್ಲಿ: ಅನುದಾನ ಹಂಚಿಕೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿರುವುದರಿಂದ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.ತಾಲೂಕಿನ ರಾಮನೊಡ್ಡಂಪಲ್ಲಿ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕೊತ್ತಕೋಟೆ ಗ್ರಾಮ ಪಂಚಾಯತಿ ಆಯೋಜಿಸಿದ್ದ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಕಾಲನಿಗಳಲ್ಲಿ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಬಾಗೇಪಲ್ಲಿ ಶಾಸಕರು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳು ಮಾಡುತ್ತಿಲ್ಲ ಎಂಬ ವಿರೋಧ ಪಕ್ಷ ನಾಯಕರ ಮಾತು ನಿಜ. ಆಡಳಿತರೂಢ ಸರ್ಕಾರ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ 100 ಕೋಟಿ ರೂ. ಅನುದಾನ ನೀಡುತ್ತಿದ್ದು, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 100 ರೂಪಾಯಿ ಸಹ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ಕ್ಷೇತ್ರವನ್ನು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದರು.
ನಗರ ಮತ್ತು ಪಟ್ಟಣ ಪ್ರದೇಶದ ನಾಗರೀಕರಲ್ಲಿ ಮೂಡನಂಬಿಕೆಗಳ ಬಗ್ಗೆ ಅರಿವು ಮೂಡಿದ್ದು, ಗ್ರಾಮೀಣ ಪ್ರದೇಶದ ಗಡಿ ಗ್ರಾಮಗಳಲ್ಲಿ ಮೂಡನಂಬಿಕೆಗಳು ಜೀವಂತವಾಗಿವೆ. ಶಿಶು ಅಭಿವೃದ್ಧಿ ಇಲಾಖೆ ಪ್ರಮುಖ ಪಾತ್ರವಹಿಸಿ ಜನರಲ್ಲಿ ಅರಿವು ಮೂಡಿಸಿದರೆ ಮೂಡನಂಬಿಕೆಗಳನ್ನು ಶಾಶ್ವತವಾಗಿ ಹೋಗಲಾಡಿಸಬಹುದು ಎಂದರು.
ತಾಪಂ ಇಒ ಮಂಜುನಾಥಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ, ಬಿಇಒ ಸಿದ್ದಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ನಾಗರಾಜು, ಅಧಿಕಾರಿಗಳಾದ ಆರ್.ಶಿವಪ್ಪ, ವೆಂಕಟರಾಯಪ್ಪ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಬೋರ್‌ವೆಲ್ ವೆಂಕಟೇಶ್, ಮುಖಂಡರಾದ ಸೂರ್ಯನಾರಾಯಣ, ಸುರೇಂದ್ರ, ಸೂರಿ, ರವಿ ಇತರರಿದ್ದರು.