

ಎನ್.ಆರ್.ಪುರ: ನಗರೋತ್ಥಾನ ಹಂತ 4ರ ಯೋಜನೆಯಡಿ ವೈಯಕ್ತಿಕ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲು ಅನುದಾನ ಬಿಡುಗಡೆ ಮಾಡುವಂತೆ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಬೆಂಗಳೂರಿನಲ್ಲಿ ರಾಜ್ಯ ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪಟ್ಟಣ ಪಂಚಾಯಿತಿಗೆ ನಗರೋತ್ಥಾನ ಹಂತ 4ರಡಿ 5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಅನುದಾನದಡಿ ಎಸ್‌ಸಿಪಿ, ಟಿಎಸ್‌ಪಿ ಶೇ.24.10, ನಗರ ಇತರ ಬಡ ಜನರ ಕಲ್ಯಾಣ ಕಾರ್ಯಕ್ರಮ ಶೇ.7.25 ಹಾಗೂ ಅಂಗವಿಕಲ ಕಲ್ಯಾಣ ಕಾರ್ಯಕ್ರಮ ಶೇ.5 ಘಟಕದಡಿ ಮನೆ ನಿರ್ಮಾಣ ಸಹಾಯಧನ, ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯ ಧನ, ವಿದ್ಯಾಭ್ಯಾಸಕ್ಕಾಗಿ ಸಹಾಯಧನ, ವೈಯಕ್ತಿಕ ಶೌಚಗೃಹ ನಿರ್ಮಾಣ ಸಹಾಯಧನ ಇತ್ಯಾದಿ ವೈಯಕ್ತಿಕ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸುವ ಸಲುವಾಗಿ 77 ಲಕ್ಷ ರೂ. ಕಾಯ್ದಿರಿಸಿದ್ದು ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಆದರೆ ಕಾರ್ಯಕ್ರಮಗಳಿಗೆ ಕಾಯ್ದಿರಿಸಿದ ಅನುದಾನದ ಮೊತ್ತ ಇದುವರೆಗೂ ಬಿಡುಗಡೆಯಾಗದ ಕಾರಣ ಫಲಾನುಭವಿಗಳಿಗೆ ಯಾವುದೇ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ ಸಮಯದಲ್ಲಿ ವೈಯಕ್ತಿಕ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದ್ದರಿಂದಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾರರು ಕಾಂಗ್ರೆಸ್‌ಗೆ ಎರಡು ಸಾವಿರ ಮತಗಳನ್ನು ನೀಡಿ ಗೆಲುವಿಗೆ ಕಾರಣರಾಗಿದ್ದಾರೆ. ಫಲಾನುಭವಿಗಳ ಆಯ್ಕೆ ಮಾಡಿ ಸುಮಾರು 3 ವರ್ಷ ಕಳೆಯುತ್ತ ಬಂದಿದ್ದು ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸದೆ ಇರುವುದರಿಂದ ಫಲಾನುಭವಿಗಳು ಈ ಬಗ್ಗೆ ಪದೇಪದೆ ಪ್ರಶ್ನೆಮಾಡುತ್ತಿರುವುದರಿಂದ ಪಪಂ ಸದಸ್ಯರು ಮುಜುಗರಪಡುವಂತಾಗಿದೆ. ಹಾಗಾಗಿ ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಖಾಂಡ್ಯಭಾಗದ ಕಾಂಗ್ರೆಸ್ ಮುಖಂಡ ಕಾಫಿ ಗಿರೀಶ್ ಇದ್ದರು.