ಅನುದಾನ ಬಿಡುಗಡೆಗೊಳಿಸದಿದ್ದರೆ ಪ್ರತಿಭಟನೆ

PRASHATHSHETTY
Published on

ಎನ್.ಆರ್.ಪುರ: ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆಯಡಿ ವೈಯಕ್ತಿಕ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಮಂಜೂರಾಗಿದ್ದ 77 ರೂ. ಲಕ್ಷ ಅನುದಾನ ಬಿಡುಗಡೆಯಾಗದಿದ್ದರೆ ಜಿಲ್ಲಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ ಎದುರು ಫಲಾನುಭವಿಗಳೊಂದಿಗೆ ಸೇರಿ ಪ್ರತಿಭಟನೆ ಹಮ್ಮಿಕೊಳ್ಳಲಾಗವುದು ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಹೇಳಿದರು.

2023ರ ಮಾರ್ಚ್‌ನಲ್ಲಿ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಸಭೆ ತೀರ್ಮಾನದಂತೆ ಮುಖ್ಯಮಂತ್ರಿ ಅಮೃತ್ ನಗರೋತ್ಥಾನ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲರು, ಮಕ್ಕಳ ವಿದ್ಯಾಭ್ಯಾಸ, ಹಳೇಮನೆ ದುರಸ್ತಿಗೆ ವೈಯಕ್ತಿಕವಾಗಿ ಆರ್ಥಿಕ ಸೌಲಭ್ಯ ಒದಗಿಸಲು 450ಕ್ಕೂ ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡಿ ಮಂಜೂರಾತಿ ಪತ್ರವನ್ನು ಆಯ್ಕೆಯಾದ ಫಲಾನುಭವಿಗಳಿಗೂ ಹಂಚಲಾಗಿತ್ತು. ಈ ಸಂದರ್ಭದಲ್ಲಿ ಮಂಜೂರಾತಿ ಪತ್ರ ವಿತರಿಸಿದ್ದನ್ನು ಸಹಿಸದ ಬಿಜೆಪಿ ಕೆಲವರು ಜಾತಿ ನಿಂದನೆ ಪ್ರಕರಣವನ್ನು ಪಟ್ಟಣ ಪಂಚಾಯಿತಿ ಆಡಳಿತದ ಮಂಡಳಿಯ ಇಬ್ಬರು ಸದಸ್ಯರ ವಿರುದ್ಧ ದಾಖಲಿಸಿದರು. ಈ ಗೊಂದಲದಿಂದ ಅನುದಾನ ಮಂಜೂರಾತಿಗೆ ತಡೆಯಾಯಿತು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೈಯಕ್ತಿಕವಾಗಿ ಫಲಾನುಭವಿಗಳಿಗೆ 35 ಸಾವಿರ ರೂ. ಮಂಜೂರಾತಿ ಮಾಡಲಾಗಿತ್ತು. ಹೊಸ ಸರ್ಕಾರ ಬಂದ ನಂತರ ಶಾಸಕರು ಮತ್ತು ನಾಯಕರ ಮೂಲಕ ಅನುದಾನ ಬಿಡುಗಡೆ ಮಾಡುವಂತೆ ಒತ್ತಡ ಹೇರಲಾಗಿದೆ. ಬಡಜನರಿಗೆ ಸೌಲಭ್ಯ ತಲುಪಿಸಲು ಸಾಧ್ಯವಾಗಿಲ್ಲ ಎಂಬ ನೋವಿದೆ. ಅನುದಾನ ಬಿಡುಗಡೆ ಮಾಡುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಜಿಲ್ಲಾ ಯೋಜನಾ ನಿರ್ದೇಶಕರಿಗೂ ಪಟ್ಟಣ ಪಂಚಾಯಿತಿ ಸದಸ್ಯರು ಮನವಿ ಸಲ್ಲಿಸಿದರೂ ಅನುದಾನ ಬಿಡುಗಡೆಮಾಡಿಲ್ಲ ಎಂದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಚುನಾವಣೆಯಲ್ಲಿ ಶಾಸಕರಿಗೆ 2 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆಯನ್ನು ನಾಗರಿಕರು ನೀಡಿದ್ದು ಇವರ ಋಣ ತೀರಿಸುವ ಜವಾಬ್ದಾರಿ ಶಾಸಕರಿಗೂ ಹಾಗೂ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಗೂ ಇದ್ದು, ಶಾಸಕರು ಸಹ ಅನುದಾನ ಬಿಡುಗಡೆ ಮಾಡಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪಟ್ಟಣದಲ್ಲಿ ಬಿಜೆಪಿಯಿಂದ ನಡೆಸಿದ ಪ್ರತಿಭಟನೆಯಲ್ಲಿ ನಗರದ ಮುಖಂಡರೊಬ್ಬರು ಪಟ್ಟಣ ಪಂಚಾಯಿತಿ ಆಡಳಿತ ಸದಸ್ಯರಲ್ಲಿ ಭಿನ್ನಾಭಿಪ್ರಾಯವಿದೆ ಎಂದು ದೂರಿದ್ದಾರೆ. ಆಡಳಿತ ಮಂಡಳಿಯ 9 ಸದಸ್ಯರು ಒಗ್ಗಟ್ಟಾಗಿದ್ದು ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಲಾಗಿದೆ. ನಗರದ ನಿವಾಸಿಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ನಿಟ್ಟಿನನಲ್ಲಿ ಅಮೃತ್ ಯೋಜನೆಯಡಿ ಮುತ್ತಿನಕೊಪ್ಪದ ತುಂಗಾ ನದಿಯಿಂದ ದಿನದ 24 ಗಂಟೆ ನೀರು ಪೂರೈಸಲು 17.91 ಕೋಟಿ ರೂ. ವೆಚ್ಚದ ಯೋಜನೆ ಸರ್ಕಾರ ಮಂಜೂರು ಮಾಡಿದ್ದು ಟೆಂಡರ್ ಪ್ರಕ್ರಿಯೆ ನಡೆದಿದೆ. ಆಶ್ರಯ ಯೋಜನೆಯಡಿ 158 ಫಲಾನುಭವಿಗಳನ್ನು ಆಯ್ಕೆಮಾಡಲಾಗಿದ್ದು ಬಡಾವಣೆ ನಿರ್ಮಾಣಕ್ಕೆ ಶಾಸಕರು ಹಾಗೂ ಎಂ.ಶ್ರೀನಿವಾಸ್ ಸಹಕಾರದಿಂದ 3.71ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತ ತಲುಪಿದೆ ಎಂದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಮಾಜಿ ಶಾಸಕ ಡಿ.ಎನ್.ಜೀವರಾಜ್ ಪ್ರತಿಭಟನೆಯಲ್ಲಿ ಆರೋಪಿಸಿದಂತೆ ಯಾರಿಗೂ 2 ಲಕ್ಷ ರೂ. ಮಂಜೂರಾತಿ ಮಾಡಿರಲಿಲ್ಲ. ಅಂಕಿ ಅಂಶಗಳ ಮಾಹಿತಿ ಇಲ್ಲದೆ ಸುಳ್ಳು ಆರೋಪ ಮಾಡಿದ್ದಾರೆ. ಪಟ್ಟಣದ ಒಂದೊಂದು ಬಡಾವಣೆಯಲ್ಲಿ ಒಂದೊಂದು ಸಮಸ್ಯೆಯಿರುವುದರಿಂದ ಹಕ್ಕು ಪತ್ರ ನೀಡಲು ಸಾಧ್ಯವಿಲ್ಲ. ಹಕ್ಕು ಪತ್ರ ಪಡೆಯಲು ಬುರ್ಕಾ ಹಾಕಿಕೊಳ್ಳಬೇಕೆಂದು ಮಾಜಿ ಶಾಸಕರು ಹೇಳಿಕೆ ನೀಡುವ ಮೂಲಕ ಮುಸ್ಲಿಂ ಧರ್ಮದ ಬಗ್ಗೆ ಅಗೌರವಾಗಿ ನಡೆದುಕೊಂಡು ಸಮಾಜದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ ಎಂದು ದೂರಿದರು.

ಪಪಂ ಅಧ್ಯಕ್ಷೆ ಉಮಾಕೇಶವ್, ಸದಸ್ಯರಾದ ಸುರಯ್ಯಬಾನು, ಶೋಜಾ, ಆರ್.ಕುಮಾರಸ್ವಾಮಿ, ಮುಕುಂದ, ಮುನಾವರ ಪಾಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net