

ದಾವಣಗೆರೆ: ನಗರಪಾಲಿಕೆಯಲ್ಲಿ ಕಾಂಗ್ರೆಸ್ ಸದಸ್ಯರ ವಾರ್ಡ್ ಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿಲ್ಲ ಎನ್ನುವ ಆಡಳಿತಾರೂಢರು ದಾಖಲೆ ಬಿಡುಗಡೆ ಮಾಡಲಿ ಎಂದು ಪಾಲಿಕೆ ವಿಪಕ್ಷನಾಯಕ ಗಡಿಗುಡಾಳ್ ಮಂಜುನಾಥ್ ಆಗ್ರಹಿಸಿದರು.
ಬಿಜೆಪಿಗರು ಜನರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪ್ರತಿನಿಧಿಸುವ ಬೆರಳೆಣಿಕೆಯ ವಾರ್ಡ್ ಗಳಿಗೆ ಶಾಸಕರ ನಿಧಿ ಹಾಗೂ ಎಸ್ಟಿಪಿ ಅನುದಾನ ನೀಡಲಾಗಿದೆಯೆ ಹೊರತಾಗಿ ಪಾಲಿಕೆಯ ಸಾಮಾನ್ಯ ಅನುದಾನ ನೀಡಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
35 ನೇ ವಾರ್ಡ್ ಗೆ 2.35 ಕೋಟಿ ರೂ, 31ನೇ ವಾರ್ಡ್ ಗೆ 1.5 ಕೋಟಿ ರೂ., 43ನೇ ವಾರ್ಡ್ ಗೆ 2. 20 ಕೋಟಿ ರೂ. ಎಸ್ಟಿಪಿ ಅನುದಾನ ನೀಡಲಾಗಿದೆ. ನಗರೋತ್ಥಾನದಡಿ ಕೆಲವು ವಾರ್ಡ್ ಗಳಿಗೆ ಕಡಿಮೆ ಮೊತ್ತದ ಅನುದಾನ ಹಂಚಿಕೆ ಮಾಡಲಾಗಿದೆ. ಉಳಿದಂತೆ ಸಾಮಾನ್ಯ ನಿಧಿಯ ಅನುದಾನ ನೀಡಿಲ್ಲ.ಈ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ನಾವೂ ಜನರ ಸೇವೆ ಮಾಡಲೆಂದೇ ಪಾಲಿಕೆ ಸದಸ್ಯರಾಗಿ ಚುನಾಯಿತರಾಗಿದ್ದೇವೆ. ಜನರ ತೆರಿಗೆ ಹಣ ಸಮ ಪ್ರಮಾಣದಲ್ಲಿ ಕಾಂಗ್ರೆಸ್ ವಾರ್ಡ್ ಗಳಿಗೂ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಸದಸ್ಯ ಎ. ನಾಗರಾಜ್ ಮಾತನಾಡಿ 2020-21 ನೇ ಸಾಲಿನಲ್ಲಿ 34 ಕೋಟಿ ರೂ., 21-22ನೇ ಸಾಲಿನಲ್ಲಿ 38 ಕೋಟಿ ರೂ. ಕಂದಾಯ ಸಂಗ್ರಹವಾಗಿದೆ. ಆದರೆಕಳೆದ ಸಾಲಿನಲ್ಲಿ 55 ಕೋಟಿ ರೂ.ಗಳ ಹೆಚ್ಚುವರಿ ಕೆಲಸ ಮಾಡಲಾಗಿದೆ. ಐದು ತಿಂಗಳು ಕಳೆದರೂ ಒಂದು ಟೆಂಡರ್ ನಡೆದಿಲ್ಲ. ಏಕೆಂದರೆ ಪಾಲಿಕೆ ಬೊಕ್ಕಸದಲ್ಲಿ ಶೂನ್ಯ ಆದಾಯ ತೋರಿಸುತ್ತಿದೆ. ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ ಎಂದು ದೂರಿದರು.
ಪಾಲಿಕೆ ಸದಸ್ಯರಾಗಿ ಅನೇಕ ಬಾರಿ ಮೇಯರ್, ಆಯುಕ್ತ ರನ್ನು ಸಂಪರ್ಕಿಸಿದರೂ ಸರಿಯಾದ ಉತ್ತರ ದೊರೆತಿಲ್ಲ. ಹೀಗಾಗಿ ಮಾಧ್ಯಮದ ಬಳಿ ಬಂದಿದ್ದೇವೆ. ಪಾಲಿಕೆ ಗೇಟ್ ಗೆ ಬೀಗ ಹಾಕಿದ ಬಳಿಕ ಸ್ವಚ್ಛತೆ ಗೆ ಬಳಸುವ ವಾಹನಗಳು ವಾರ್ಡ್ ಗಳನ್ನು ತಲುಪಿವೆ. ಸ್ವಚ್ಛತಾ ಕೆಲಸಗಾರರನ್ನು ತಲುಪಬೇಕಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಸಯೀದ್ ಚಾರ್ಲಿ, ಪಾಮೇನಹಳ್ಳಿ ನಾಗರಾಜ್, ಅಬ್ದುಲ್ ಲತೀಫ್, ಮುಖಂಡ ಹುಲ್ಮನಿ ಗಣೇಶ್, ಉಮೇಶ್, ಜಗದೀಶ್ ಇದ್ದರು.