

ಮೊಳಕಾಲ್ಮೂರು: ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆ ಆದ ಅನುದಾನದ ಸಮರ್ಪಕ ಬಳಕೆಗೆ 3 ತಿಂಗಳ ಗಡುವು ನೀಡಲಾಗಿದ್ದು ಅಧಿಕಾರಿಗಳು ಜಾಗೃತರಾ ಕೆಲಸ ಮಾಡುವಂತೆ ಶಾಸಕ ಎನ್. ವೈ. ಗೋಪಾಲಕೃಷ್ಣ ತಾಕೀತು ಮಾಡಿದರು.
ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಸೋಮವಾರ,ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜನಕಲ್ಯಾಣಕ್ಕೆ ವಿವಿಧ ಯೋಜನೆಗಳಡಿ 100 ಕೋಟಿ ರೂ.ಮಂಜೂರು ಆಗಿದ್ದು ಕಾಮಗಾರಿ ಪ್ರಗತಿಯಲ್ಲಿವೆ. ಬಾಕಿ ಕೆಲಸಗಳು ನಿಗದಿತ ವೇಳೆಗೆ ಪೂರ್ಣವಾಗಬೇಕು. ಅಡಚಣೆ ಇದ್ದರೆ ಕಾನೂನಾತ್ಮಕ ಪರಿಹಾರ ಕಂಡುಕೊಳ್ಳಲು ಗಮನಕ್ಕೆ ತರಲು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಜನವರಿಯಲ್ಲಿ ಚಿತ್ರದುರ್ಗಕ್ಕೆ ಬರುವ ನಿರೀಕ್ಷೆ ಇದೆ. ಅವರಿಗೆ ಕ್ಷೇತ್ರದ ಪ್ರಗತಿ ವರದಿ ಒಪ್ಪಿಸಲು ಕೈಪಿಡಿ ತಯಾರಿಸಿ ಕೊಡಿ. ಶಾಸಕ ಎಂಬ ಅಹಂಕಾರ ನನಗಿಲ್ಲ. ಒಬ್ಬ ಸ್ನೇಹಿತನಾಗಿ ಹೇಳುತ್ತೇನೆ ಉದಾಸೀನ ತೋರಿದರೆ ಬೇರೆಡೆ ಹೋಗಲು ನಾನೇ ಶಿಫಾರಸು ಪತ್ರ ಕೊಡುತ್ತೇನೆ ಸಂತೋಷದಿಂದ ಖಾಲಿ ಮಾಡಿ ಎಂದು ಎಚ್ಚರಿಸಿದರು.
30 ಮಂಚ ನಾಪತ್ತೆ: ಸಮಾಜ ಕಲ್ಯಾಣಾಧಿಕಾರಿ ನಾಸೀರ್ ಹುಸೇನ್ ವರದಿ ಮಂಡಿಸಿ, ಕೋನಸಾಗರದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ವಾರ್ಡನ್ ಫಯಾಜ್ ಬಾಷಾ ನಿಲಯದ ನಿರ್ವಹಣೆಯಲ್ಲಿ ಎಡವುತ್ತಿದ್ದಾರೆ. ದೂರವಾಣಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಮೊಳಕಾಲ್ಮೂರಿನ ಎಸ್ಟಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಜಿಲ್ಲೆಯಿಂದ ಕಳಿಸಿದ 30 ಮಂಚಗಳನ್ನು ದುರುಪಯೋಗವಾಗಿವೆ ಎಂದು ದೂರಿದರು.
ಈ ಬಗ್ಗೆ ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಈ ಸಂಬಂಧ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದಾಗ ಶಾಸಕರು ಇದು ಗಂಭೀರ ವಿಚಾರ ಮಕ್ಕಳಿಗೆ ಬಳಕೆ ಆಗಬೇಕಿದ್ದ ಮಂಚಗಳು ನಾಪತ್ತೆ ಆಗಿವೆ ಎಂದರೆ ಏನರ್ಥ? ಸಿಇಒ ಅವರಿಗೆ ಪತ್ರ ಬರೆಯಿರಿ. ದರ್ಬಳಕೆ ಕಂಡು ಬಂದರೆ ಅಮಾನತಿಗೆ ನಾನೂ ಶಿಫಾರಸು ಮಾಡುತ್ತೇನೆ ಎಂದರು.
ಶಾಲಾ ಕೊಠಡಿಗಳ ನಿರ್ಮಾಣಕ್ಕೆ 2.25 ಕೋಟಿ ರೂ. ಶಾಸಕರ ನಿಧಿ ಮೀಸಲಿಡಲಾಗಿದೆ. ತ್ವರಿತ ಬಳಕೆಗೆ ಸೂಕ್ತ ಕ್ರಮವಹಿಸಲು ಬಿಇಒ ನಿರ್ಮಲಾದೇವಿ ಅವರಿಗೆ ಸೂಚಿಸಿದರು.
ಪಟ್ಟಣ,ಗ್ರಾಮಿಣ ಜನರ ಆರೋಗ್ಯ ಸುರಕ್ಷತೆಗೆ ಇಲಾಖೆ ಹೆಚ್ಚು ಕಾಳಜಿ ವಹಿಸಬೇಕು. ಹೋಟೆಲ್‌ಗಳಲ್ಲಿ ಗುಣಮಟ್ಟದ ತಿಂಡಿ, ಆಹಾರ ಪದಾರ್ಥಗಳು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೆಕು.
ಅಗತ್ಯ ಬಿದ್ದರೆ ಖುದ್ದು ಪರಿಶೀಲನೆ ನಡೆಸಿ ಲೋಪ ಕಂಡು ಬಂದರೆ ಪೆನಾಲ್ಟಿ ಹಾಕಿ ಎಂದು ಟಿಎಚ್‌ಒ ಡಾ.ಮಧುಕುಮಾರ ಅವರಿಗೆ ಖಡಕ್ ಸೂಚನೆ ನೀಡಿದರು. ಉಳಿದಂತೆ ಇಲಾಖೆವಾರು ಪ್ರಗತಿ ವರದಿ ಮಾಹಿತಿ ಪಡೆದರು.
ಮದ್ಯದ ಪರವಾನಗಿ ನೀಡಬೇಡಿ: ತಾಲೂಕಿನಲ್ಲಿ ಮದ್ಯದ ಅಮಲು ಎಲ್ಲೇ ಮೀರಿದೆ. ಮನೆಯಲ್ಲಿ ಹೆಂಡ್ರು ಮಕ್ಕಳ ಜೀವನ ಕಷ್ಟವಾಗಿದೆ. ಬಾರ್‌ಗಳನ್ನು ಮುಚ್ಚುವಂತೆ ಗ್ರಾಮೀಣ ಮಹಿಳೆಯರು ಒತ್ತಾಯಿಸುತ್ತಿದ್ದಾರೆ.
ತಾಲೂಕಿನ ಯಾವುದೇ ಮೂಲೆಯಲ್ಲಿ ನನ್ನ ಅನುಮತಿ ಇಲ್ಲದೆ ಪರವಾನಗಿ ನೀಡಬಾರದು. ಯಾವ ಪ್ರಭಾವಕ್ಕೂ ಮಣಿಯದಂತೆ ಶಾಸಕರು ಅಬಕಾರಿ ಇನ್‌ಸ್ಪೆಕ್ಟರ್ ಸಾದತ್ ಅವರಿಗೆ ಸೂಚಿಸಿದರು.
ಅತ್ಯಂತ ಹಿಂದುಳಿದ ತಾಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಎಲ್ಲರೂ ಸೇರಿ ಒಂದು ತಂಡವಾಗಿ ಕೆಲಸ ಮಾಡಲು ಕರ್ತವ್ಯ ನಿಷ್ಠೆ ತೋರಬೇಕು. ಹನುಮಂತಪ್ಪ, ತಾಪಂ ಇಒ.