

ಬೆಂಗಳೂರು ಗ್ರಾಮಾಂತರ: ಕನ್ನಮಂಗಲ ಪಂಚಾಯಿತಿ ಕಡತನಾಶ ಪ್ರಯತ್ನ ಪ್ರಕರಣದ ಬೆನ್ನಲ್ಲೆ ಕೋಟ್ಯಂತರ ರೂ. ಭ್ರಷ್ಟಾಚಾರಗಳು ಒಂದೊಂದೇ ಹೊರಬರುತ್ತಿದೆ. 14 ಹಾಗೂ 15ನೇ ಹಣಕಾಸಿನ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಗುಳುಂ ಮಾಡಲಾಗಿದೆ. ಸಿಎಸ್‌ಆರ್ ಅನುದಾನವನ್ನಷ್ಟೇ ಸಣ್ಣಪುಟ್ಟ ಕಾಮಗಾರಿಗಳಿಗೆ ಬಳಕೆ ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿರುವ ಪಂಚಾಯಿತಿಯಾದ್ದರಿಂದ ಸಿಎಸ್‌ಆರ್ ಅನುದಾನ ಹೆಚ್ಚಾಗಿಯೇ ಬರುತ್ತಿದೆ. ಶಾಲಾ ಕಟ್ಟಡ ನವೀಕರಣ, ಅಂಗನವಾಡಿ ನಿರ್ಮಾಣ, ಬೀದಿದೀಪ, ರಸ್ತೆ ಕಾಮಗಾರಿ, ಕೆರೆ ಹೂಳೆತ್ತುವುದು ಸೇರಿ ಇನ್ನಿತರ ಕಾಮಗಾರಿಗಳಿಗೆ ಸಿಎಸ್‌ಆರ್ ಅನುದಾನ ಬಳಸಲಾಗಿದೆ. ಆದರೆ ಪಂಚಾಯಿತಿಗೆ ಬಿಡುಗಡೆಯಾದ ಅನುದಾನ ಹಾಗೂ ಬರುತ್ತಿದ್ದ ವರಮಾನ ಎರಡೂ ಇಲ್ಲಿನ ಕೆಲ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳ ಜೇಬಿಗೆ ಸೇರುತ್ತಿತ್ತು ಎಂಬುದು ಜಿಪಂ ತನಿಖಾ ವರದಿಯಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ. ಪಂಚಾಯಿತಿ ಅನುದಾನ ತಮಗೆ, ಸಿಎಸ್‌ಆರ್ ಂಡ್ ಅಭಿವೃದ್ಧಿಗೆ ಎಂಬಂತೆ ವರ್ಷಗಳಿಂದ ಪಂಚಾಯಿತಿಯಲ್ಲಿ ಹಣ ಬಾಚಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಶ್ರೀಮಂತ ಪಂಚಾಯಿತಿಯಲ್ಲಿ ಹಣದ ಹರಿವು: ಜಿಲ್ಲೆಯ 105 ಪಂಚಾಯಿಗಳ ಪೈಕಿ ಅಣ್ಣೇಶ್ವರ, ಬಾಶೆಟ್ಟಿಹಳ್ಳಿ ಸೇರಿ ಅನೇಕ ಪಂಚಾಯಿತಿಗಳ ವರಮಾನ ವರ್ಷಕ್ಕೆ ಕೋಟಿಗಳ ಲೆಕ್ಕದಲ್ಲಿದೆ. ಅವುಗಳ ಸಾಲಿನಲ್ಲಿ ನಿಲ್ಲುವ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಂಚಾಯಿತಿ ವರ್ಷಕ್ಕೆ 5 ಕೋಟಿ ರೂ.ತೆರಿಗೆ ಸಂಗ್ರವಾಗುವ ಹೆಗ್ಗಳಿಕೆಯನ್ನೂ ಹೊಂದಿದೆ. ಇಷ್ಟೆಲ್ಲ ಆದಾಯವಿರುವ ಪಂಚಾಯಿತಿಯಲ್ಲಿ ಅಷ್ಟೇ ಮೊತ್ತದ ಹಣ ಗುಳಂ ಮಾಡಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.
ಪ್ರಕರಣಗಳ ಸರಮಾಲೆ: ಪಂಚಾಯಿತಿ ಕಟ್ಟಡಕ್ಕೆ ಬೆಂಕಿ ಪ್ರಕರಣ ಬಳಿಕ ಇಲ್ಲಿನ ಡೇಟಾ ಆಪರೇಟರ್ ಅನುರಾಧಾ, ವಾಟರ್‌ಮನ್ ವೆಂಕಟೇಶ್ ಸೇರಿ ಇನ್ನಿತರರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ. ಬೆಂಕಿ ಪ್ರಕರಣ ಸಂಬಂಧ ಈಗಾಗಲೇ ಡೇಟಾ ಆಪರೇಟರ್ ಹಾಗೂ ವಾಟರ್‌ಮನ್ ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ, ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ದಾಖಲಾಗಿದ್ದು, ಎಸಿಬಿ ತನಿಖೆ ನಡೆಸುತ್ತಿದೆ.
ಅನ್ಯಭಾಷಿಗರಿಗೆ ಮಣೆ: ಕಡತ ನಾಶ ಪ್ರಕರಣದ ಮೇಲೆ ಬಂಧಿತರಾಗಿರುವ ಡೇಟಾ ಆಪರೇಟರ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. 10ನೇ ತರಗತಿವರೆಗೆ ಕನ್ನಡದಲ್ಲಿ ವ್ಯಾಸಂಗ ಮಾಡಿಲ್ಲ, ಆದರೂ ಡೇಟಾ ಆಪರೇಟರ್ ಆಗಿ ನಿಯೋಜನೆಗೊಂಡು ಅಕ್ರಮ ನಡಾವಳಿ ಮೂಲಕ ಬಿಲ್‌ಕಲೆಕ್ಟರ್ ಹುದ್ದೆ ಗಿಟ್ಟಿಸಿದ ಎಂಬ ಅಂಶವನ್ನು ಜಿಪಂ ತನಿಖಾ ತಂಡ ಹೊರಹಾಕಿದೆ. ಪಂಚಾಯಿತಿ ಕೆಲವು ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಯನ್ನು ಹಿಡಿತದಲ್ಲಿಟ್ಟುಕೊಂಡು ಪಂಚಾಯಿತಿಯ ಪ್ರತಿ ವ್ಯವಹಾರವನ್ನು ಕಣ್ಣಳತೆಯಲ್ಲೇ ನಿರ್ವಹಿಸುತ್ತಿದ್ದರು. ಇಲ್ಲಿನ ಅಕ್ರಮಗಳ ವಿರುದ್ಧ ಯಾರೂ ತುಟಿಬಿಚ್ಚದಂತೆ ಆಣತಿ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ವರ್ಷಗಟ್ಟಲೆ ನಡೆದಿರುವ ಕೋಟ್ಯಂತರ ರೂ.ಭ್ರಷ್ಟಾಚಾರ ಬೆಳಕಿಗೆ ಬಂದಿರಲಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಎಸಿಬಿ ಹಾಗೂ ಜಿಪಂ ತನಿಖಾ ತಂಡ ಕನ್ನಮಂಗಲ ಪಂಚಾಯಿತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುತ್ತಿದೆ. ಕೆಲವೊಂದು ವಿಷಯಗಳ ಬಗ್ಗೆ ಈಗಾಗಲೇ ವರದಿ ಸಿದ್ಧಪಡಿಸಲಾಗಿದೆ. ಪೂರ್ಣ ತನಿಖೆ ಬಳಿಕ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಎಂ.ಆರ್.ರವಿಕುಮಾರ್, ಜಿಪಂ ಸಿಇಒ ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಇದೊಂದು ಗಂಭೀರ ಪ್ರಕರಣ. ಈ ಎಲ್ಲದರ ಬಗ್ಗೆ ಸಿಇಒ ಗಮನಕ್ಕೆ ತಂದಿದ್ದಾರೆ. ಅವರೇ ಜಿಪಂ ಮುಖ್ಯಸ್ಥರಾಗಿದ್ದು, ಎಲ್ಲವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಈಗಾಗಲೆ ಎಸಿಬಿ ಹಾಗೂ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿದೆ. ಸೇವೆಯಿಂದ ವಜಾ ಮಾಡುವಂತೆ ಸೂಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅತೀಕ್, ಸರ್ಕಾರದ ಪ್ರಧಾನ ಕಾರ್ಯದರ್ಶಿ