

ಚನ್ನರಾಯಪಟ್ಟಣ: ಸರ್ಕಾರದಿಂದ ಅನುದಾನ ಕೊರತೆ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ, ಆದಾಗ್ಯೂ ಪುರಸಭೆಯ ತೆರಿಗೆ ಹಣವನ್ನು ಕ್ರೋಡೀಕರಿಸಿ ವಾರ್ಡ್‌ಗಳ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ವಾರ್ಡ್ ನಂ.7ರಲ್ಲಿನ ಗಾಯತ್ರಿ ಬಡಾವಣೆಯಲ್ಲಿ ಸುಮಾರು 55 ಲಕ್ಷ ರೂ.ವೆಚ್ಚದ ವಿವಿಧ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪುರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ ಮನೆ ಮಾಲೀಕರು ಹಾಗೂ ನಿವೇಶನದಾರರ ಸಹಕಾರದಲ್ಲಿ ಪುರಸಭೆಯ ವಿವಿಧ ವಾರ್ಡಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಇದಕ್ಕೆ ಪುರಸಭೆ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಸಹಕಾರ ಅತಿ ಮುಖ್ಯವಾಗಿದೆ ಎಂದರು.
ಹಲವು ವರ್ಷಗಳಿಂದ ನಾಗಸಮುದ್ರ ರಸ್ತೆಯಿಂದ ರಾಘವೇಂದ್ರ ಕನ್ವೆನ್ಷನ್ ಹಾಲ್‌ನವರೆಗೆ ಚರಂಡಿ ಹಾಗೂ ಡಾಂಬರ್ ರಸ್ತೆ ನಿರ್ಮಾಣಕ್ಕೆ ವಾರ್ಡಿನ ಸಾರ್ವಜನಿಕರು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಇದನ್ನು ನೀಗಿಸಲು ಸದಸ್ಯರು ಮುಂದಾಗಿದ್ದು, ಇದೀಗ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಬಿ.ಎಂ.ರಸ್ತೆಯಿಂದ ನಾಗಸಮುದ್ರ ಗ್ರಾಮದವರೆಗೆ ಸಿಆರ್‌ಎಫ್ ನಿಧಿಯಿಂದ ಸುಮಾರು ಎರಡು ಕೋಟಿ ರೂ.ವೆಚ್ಚ ಮಾಡಿ ರಸ್ತೆ ಡಾಂಬರ್ ಹಾಕಲಾಗಿದೆ. ಇದರಿಂದ ಆನೇಕೆರೆ ಸೇರಿದಂತೆ ವಿವಿಧ ಗ್ರಾಮಸ್ಥರಿಗೆ ಸಾಕಷ್ಟು ಅನುಕೂಲ ಆಗಲಿದೆ. ಆದ್ಯತೆ ಮೇರಿಗೆ ನರದ ಎಲ್ಲ ಕಡೆಯಲ್ಲಿ ಕಾಮಗಾರಿ ಮಾಡಿಸಲಾಗುವುದು, ಏಳನೇ ವಾರ್ಡಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿತ್ತು, ಅದರೆ ವಾರ್ಡಿನ ಸದಸ್ಯರ ಅಕಾಲಿಕ ಮರಣದಿಂದ ಅಭಿವೃದ್ಧಿ ಕುಂಟಿತವಾಗಿತ್ತು. ನೂತನ ಸದಸ್ಯರಾಗಿ ರಾಮು ಆಯ್ಕೆಯಾದ ಮೇಲೆ ಕಾಮಗಾರಿ ವೇಗ ಪಡೆದಿದೆ ಎಂದರು.
ರಸ್ತೆ ಡಾಂಬರ್ ಹಾಕಿದಾಗ ಬೆಳಗಿನ ವೇಳೆ ಮಹಿಳೆಯರು ಮನೆ ಮುಂದೆ ಹೆಚ್ಚು ನೀರು ಹಾಕುತ್ತಾರೆ. ಇದರಿಂದ ಡಾಂಬರ್ ಹಾಳಾಗುತ್ತದೆ. ರಸ್ತೆ ಗುಂಡಿ ಬೀಳುತ್ತದೆ, ರಸ್ತೆಯಲ್ಲಿ ನಿಲ್ಲಿಸಿ ಕಾರು, ದ್ವಿಚಕ್ರ ವಾಹನ ತೊಳೆಯುತ್ತಾರೆ. ಇದರಿಂದಲೂ ಡಾಂಬರ್ ರಸ್ತೆ ಹಾಳಾಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಜನತೆ ರಸ್ತೆಗೆ ಹೆಚ್ಚು ನೀರು ಹಾಕುವುದನ್ನು ನಿಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.
ವಾರ್ಡಿನಲ್ಲಿ ಬೀದಿ ದೀಪಗಳ ಸಮಸ್ಯೆ ಇದೆ, ಅದನ್ನು ನೀಗಿಸಲಾಗುತ್ತಿದೆ, ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು ವಾರ್ಡಿನಲ್ಲಿ ಕಸ ರಸ್ತೆ ಬದಿ ಬೀಳದಂತೆ ನೋಡಿಕೊಳ್ಳಲಾಗುತ್ತಿದೆ, ವಾರ್ಡಿನ ಸಾರ್ವಜನಿಕರ ಸಹಕಾರ ಮುಖ್ಯವಾಗಿದ್ದು, ಕಸವನ್ನು ಪುರಸಭಾ ಆಟೋ ಟಿಪ್ಪರ್‌ಗಳಿಗೆ ನೀಡಬೇಕು. ಇದರಿಂದ ನಗರಕ್ಕೆ ಹೆಚ್ಚು ಸೌಂದರ್ಯ ಬರಲಿದೆ ಎಂದು ತಿಳಿಸಿದರು.
ಪುರಸಭಾಧ್ಯಕ್ಷ ಸಿ.ಎನ್.ಮೋಹನ್, ಸದಸ್ಯರಾದ ರಾಮಕೃಷ್ಣ, ಗಣೇಶ್, ಪ್ರಕಾಶ್, ಉಮಾಶಂಕರ್, ರವಿ, ಪ್ರೇಮ್‌ಕುಮಾರ್, ಟಿಎಪಿಎಂಎಸ್ ಅಧ್ಯಕ್ಷ ಅನಿಲ್‌ಕುಮಾರ್, ಮುಖಂಡರಾದ ವಾಸು, ರಾಜು, ಮಂಜು, ಗಂಗಾಧರ್, ಬೋರೇಗೌಡ, ನಾಗಣ್ಣ, ಶ್ರೀಧರ್ ಮತ್ತಿತರರು ಹಾಜರಿದ್ದರು.