

ಅನುದಾನ ಕೊರತೆ
| ಅರ್ಧಕ್ಕೆ ನಿಂತ ನೌಕರರ ಭವನ ಕಾಮಗಾರಿ
| ವರ್ಷವಾದರೂ ಮೇಲೇಳದ ಹೈಟೆಕ್ ಕಟ್ಟಡ
ಆನಂದ ಭಮ್ಮನ್ನವರ ಚಿಕ್ಕೋಡಿ
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ನೌಕರರ ಬಹು ದಿನದ ಬೇಡಿಕೆಯಾದ ನೌಕರರ ಭವನ ನಿರ್ಮಾಣ ಕಾಮಗಾರಿಯು ಅನುದಾನ ಕೊರತೆಯಿಂದ ಕಳೆದ ಒಂದು ವರ್ಷದಿಂದ ಅರ್ಧಕ್ಕೆ ನಿಂತಿದೆ. ಪರಿಣಾಮ ಹೈಟೆಕ್ ನೌಕರರ ಭವನದ ಕನಸು ಕಂಡಿರುವ ಸರ್ಕಾರಿ ನೌಕರರಿಗೆ ನಿರಾಶೆ ಮೂಡಿದೆ.
ಇಲ್ಲಿನ ಬಸ್ ನಿಲ್ದಾಣದ ಸಮೀಪ ೫ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಭವನ ನಿರ್ಮಾಣ ಕಾಮಗಾರಿಯ ಅಂದಾಜು ಪತ್ರಿಕೆ ರೂಪಿಸಲಾಗಿತ್ತು. ಆರಂಭದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಮೊದಲ ಕಂತಿನ ೧.೫ ಕೋಟಿ ರೂ.ವೆಚ್ಚದಲ್ಲಿ ಭವನದ ನೆಲ ಮಹಡಿ ನಿರ್ಮಾಣವಾಗಿದೆ.ಆದರೆ ಕಳೆದ ಒಂದು ವರ್ಷದಿಂದ ಅನುದಾನ ಬಾರದೆ ಕಾಮಗಾರಿ ಸ್ಥಗಿತಗೊಂಡಿದೆ.
ಕಳೆದ ೨೦೨೪ರ ಜೂನ್‌ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ವಿ.ಪ ಸದಸ್ಯ ಪ್ರಕಾಶ ಹುಕ್ಕೇರಿ, ಸ್ಥಳಿಯ ಶಾಸಕ ಗಣೇಶ ಹುಕ್ಕೇರಿ ಕಾಮಗಾರಿಗೆ ಚಾಲನೆ ನೀಡಿದ್ದರು. ಲೋಕೊಪಯೋಗಿ ಇಲಾಖೆಯಿಂದ ೩.೫ ಕೋಟಿ ಅನುದಾನ ನೀಡುವುದಾಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದ್ದರು. ಅದರಲ್ಲಿ ೧.೫ ಕೋಟಿ ಮೊದಲ ಕಂತಿನ ಅನುದಾನ ನೀಡಿದ್ದಾರೆ. ಇನ್ನುಳಿದ ೩.೫ ಕೋಟಿ ಅನುದಾನ ನೀಡಬೇಕಿದೆ.
ಅನುದಾನಕ್ಕೆ ಮನವಿ:
ಸರ್ಕಾರಿ ನೌಕರರಿಗಾಗಿ ಜಿಲ್ಲಾ ಮಟ್ಟದ ಭವನ ನಿರ್ಮಿಸಬೇಕೆಂದು ನೌಕರರ ಕನಸಾಗಿದೆ. ಒಟ್ಟು ೫ ಕೋಟಿ ರೂ ಅನುದಾನದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಶಾಸಕ ಗಣೇಶ ಹುಕ್ಕೇರಿ ೫೦ ಲಕ್ಷ ರೂ, ರಾಜ್ಯ ಸರ್ಕಾರಿ ನೌಕರರ ಸಂಘದಿAದ ೫೦ ಲಕ್ಷ ರೂ, ನೀಡುವಂತೆ ರಾಜ್ಯಾಧ್ಯಕ್ಷರಿಗೆ ಜಿಲ್ಲಾ ಘಟಕ ಮನವಿ ಮಾಡಿದೆ.ಆದರೆ ಇನ್ನು ಅನುದಾನ ಬಾರದೆ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಸಭೆ ಸಮಾರಂಭಕ್ಕೆ ತೊಂದರೆ:
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಗೆ ಒಳ ಪಡುವ ಚಿಕ್ಕೋಡಿ,ನಿಪ್ಪಾಣಿ, ಹುಕ್ಕೇರಿ, ಗೋಕಾಕ, ಮೂಡಲಗಿ, ರಾಯಬಾಗ, ಕಾಗವಾಡ, ಮತ್ತು ಅಥಣಿ ತಾಲೂಕು ಸೇರಿ ಒಟ್ಟು ೧೬,೦೦೦ ಸರ್ಕಾರಿ ನೌಕರರಿದ್ದಾರೆ. ಆದರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸರ್ಕಾರಿ ನೌಕರರಿದ್ದರು, ಸ್ವಂತ ಭವನ ಇಲ್ಲದಿರುವುದರಿಂದ ಇವರ ಸಭೆ, ಸಮಾರಂಭಕ್ಕೆ ಬೇರೆ ಬೇರೆ ಇಲಾಖೆಯ ಸಭಾಂಗಣವೇ ಆಸರೆ ಪಡೆಯಬೇಕಿದೆ.