

ರಾಯಚೂರು: ಜಿಲ್ಲೆಯಲ್ಲಿನ ಕುರಿಗಾಹಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದರ ಜತೆಗೆ ಸ್ಥಗಿತಗೊಂಡಿರುವ ಅನುಗ್ರಹ ಯೋಜನೆಯನ್ನು ಮುಂದುವರಿಸಬೇಕು ಎಂದು ಅಮೋಘ ಸಿದ್ಧೇಶ ಕುರಿ ಸಂಗೋಪನೆ ಹಾಗೂ ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಲ್ಲಯ್ಯ ಗೋರ್ಕಲ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಅಮೃತ ಸ್ವಾಭಿಮಾನಿ ಯೋಜನೆಯಡಿ ಸಹಾಯಧನವನ್ನು ಶೇ.90ಕ್ಕೆ ಹೆಚ್ಚಿಸಬೇಕು. ಕುರಿ ಸಾಕಣೆಗೆ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ದೊರೆಯುವಂತೆ ಮಾಡಬೇಕು. ಬೇರೆ ಜಿಲ್ಲೆಯಲ್ಲಿ ಕುರಿ ಖರೀದಿಗೆ ಸಾಲ ನೀಡುತ್ತಿದ್ದು, ಜಿಲ್ಲೆಯ ಆರ್‌ಡಿಸಿಸಿ ಬ್ಯಾಂಕಿನಿಂದ ಸಾಲ ನೀಡುತ್ತಿಲ್ಲ. ಅನುಗ್ರಹ ಯೋಜನೆಯನ್ನು ಹಿಂದಿನ ಸರ್ಕಾರ ಸ್ಥಗಿತಗೊಳಿಸಿದೆ. ಈ ಯೋಜನೆ ಸಮಿತಿಗೆ ತಹಸೀಲ್ದಾರ್ ಮತ್ತು ತಾ.ಪಂ. ಇಒ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು. ಆದರೆ, ತಹಸೀಲ್ದಾರ್ ಮತ್ತು ತಾಪಂ ಇಒರಿಂದ ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಪಶು ವೈದ್ಯರು, ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರು, ಕುರಿ ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಅನುಗ್ರಹ ಯೋಜನೆಯ ಸಮಿತಿ ಸದಸ್ಯರನ್ನಾಗಿ ನೇಮಿಸಬೇಕು. ಕುರಿಗಳ ಕಳ್ಳತನ ಹೆಚ್ಚಳವಾಗುತ್ತಿದ್ದು, ದೌರ್ಜನ್ಯ, ಅತ್ಯಾಚಾರದಂತಹ ಘಟನೆಗಳು ನಡೆಯುತ್ತಿವೆ. ಕುರಿಗಾಹಿಗಳಿಗೆ ಬಂದೂಕು ಪರವಾನಗಿ ನೀಡಿ ತರಬೇತಿ ನೀಡಬೇಕು ಎಂದು ಆಗ್ರಹಿಸಿದರು.
ಕುರಿ ಅಭಿವೃದ್ಧಿ ನಿಗಮದಿಂದ ಕುರಿಗಾಹಿಗಳಿಗೆ ಟೆಂಟ್, ಬಲೆ ನೀಡುವ ಯೋಜನೆಯಿದೆ. ಆದರೆ ಜಿಲ್ಲೆಗೆ ಕೇವಲ 20 ಟೆಂಟ್ ನೀಡಲಾಗಿದೆ. ಪ್ರತಿ ಜಿಲ್ಲೆಗೆ 500 ರಿಂದ ಒಂದು ಸಾವಿರ ಪರಿಕರ ನೀಡಬೇಕು. ಈ ಹಿಂದೆ ಜಿಲ್ಲೆಗೆ ನೀಡಲಾಗಿದ್ದ ಆಂಬುಲೆನ್ಸ್ ಸ್ಥಗಿತಗೊಂಡಿದ್ದು, ಕೂಡಲೇ ಅದನ್ನು ಆರಂಭಿಸಬೇಕು ಎಂದರು.
ಔಷಧವನ್ನು ತಾಲೂಕವಾರು ಸಂಗ್ರಹಿಸಿ ವಿತರಿಸಬೇಕು. ಕುರಿಗಾಹಿಗಳಿಗೆ 5 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ, ಕೆಎಂಎ್ ಮಾದರಿಯಲ್ಲಿ ಮಾಂಸ ಮಾರಲು ಮಳಿಗೆ, ಮಹಾಮಂಡಳದ ಮೂಲಕ ಕುರಿ ಮಾಂಸ ರಫ್ತಿಗೆ ಅವಕಾಶ ನೀಡಬೇಕು ಎಂದು ಮಲ್ಲಯ್ಯ ಗೋರ್ಕಲ್ ಒತ್ತಾಯಿಸಿದರು. ಪದಾಧಿಕಾರಿಗಳಾದ ಪ್ರಕಾಶ ಬೊಮ್ಮನಾಳ, ದೇವರಾಜ ಬ್ಯಾಗವಾಟ, ರವಿಕುಮಾರ, ಬಸವರಾಜ ಗೋನಾಳ, ಶಿವುಕುಮಾರ ಉಪಸ್ಥಿತರಿದ್ದರು.