

ಚಿತ್ರದುರ್ಗ: ಮನುಷ್ಯ ಶಿವಸ್ವರೂಪಿಯಾದಾಗ ಮಾತ್ರ ಅನಿಷ್ಟ ತೊಲಗಿಸಲು ಸಾಧ್ಯ ಎಂದು ಸಂಸದ ಗೋವಿಂದ ಎಂ ಕಾರಜೋಳ ಅಭಿಪ್ರಾಯಪಟ್ಟರು.
ಮುರುಘಾವಠದ ಅನುಭವ ಮಂಟಪದಲ್ಲಿ ಬುಧವಾರ ನಡೆದ ಶರಣ ಸಂಸ್ಕೃತಿ ಉತ್ಸವ, ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ವೀರಶೈವ ಮಠಗಳು ನಾಡಿನ ಉದ್ದಗಲಕ್ಕೂ ಎಲ್ಲ ಸಮಾಜಗಳಿಗೂ ಅಕ್ಷರ, ಅನ್ನ ದಾಸೋಹ ನೀಡಿವೆ. ಬಸವಣ್ಣನ ತತ್ವಾದರ್ಶ ಅನುಷ್ಠಾನಕ್ಕೆ ತರುವಲ್ಲಿ ಮುರುಘಾಮಠ ಮುಂಚೂಣಿಯಲ್ಲಿದೆ ಎಂದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಹಿಂದಿನ ಅನುಭವ ಮಂಟಪದ ಆಧಾರದ ಮೇರೆಗೆ ಇಂದಿನ ಸಂಸತ್ತು ನಿರ್ಮಾಣವಾಗಿದೆ. ಅದಕ್ಕೆ ಬಸವಣ್ಣನವರೇ ಮೂಲ. ನಮ್ಮ ಸಮುದಾಯದ ಕಟ್ಟಡ ನಿರ್ಮಿಸಲು ಜಯದೇವ ಶ್ರೀಗಳು ಅಂದಿನ ಕಾಲದಲ್ಲೇ 1 ಸಾವಿರ ರೂ. ದೇಣಿಗೆ ನೀಡಿದ್ದರು ಎಂದು ಸ್ಮರಿಸಿಕೊಂಡರು.
ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಮಾತನಾಡಿ, ಜಯದೇವ ಶ್ರೀಗಳ ಕಾಯಕ, ಲಿಂಗಾರ್ಚನೆ, ಗುರುಪೂಜೆ, ದಾಸೋಹ ಸೇವೆ ಅವಿಸ್ಮರಣೀಯ. ಅವರ ಸಮಾಜಮುಖಿ ಕಾರ್ಯ ಲೋಕಾರ್ಪಿತವಾಗಿವೆ ಎಂದು ಬಣ್ಣಿಸಿದರು.
ಇದೇ ವೇಳೆ ಸೋಮಶೇಖರ್ ಸೇರಿ ತುಮಕೂರಿನ ಜಯದೇವ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿ ಸದಸ್ಯರನ್ನು ಸನ್ಮಾನಿಸಲಾಯಿತು.
ಮಲ್ಲಿಕಾರ್ಜುನ ಶ್ರೀ, ಶಿವರುದ್ರ ಶ್ರೀ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಡಾ.ಬಸವಕುಮಾರ ಶ್ರೀ, ಚೆನ್ನಬಸವಣ್ಣ ಶ್ರೀ ಸಾನ್ನಿಧ್ಯ ವಹಿಸಿದ್ದರು. ಎಂಎಲ್ಸಿ ಕೆ.ಎಸ್.ನವೀನ್, ದೇವಿಕುಮಾರಿ, ಶಸಾಪ ಅಧ್ಯಕ್ಷ ಕೆ.ಎಂ.ವೀರೇಶ್ ಇತರರಿದ್ದರು.