

ಮೈಸೂರು: ಜಿಲ್ಲೆಯ ಹಿಂದುಳಿದ ತಾಲೂಕು ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಚಿಕ್ಕಮಾದು ಜಯ ಗಳಿಸಿದ್ದಾರೆ.
ಬಹುತೇಕ ತ್ರಿಕೋನ ಸ್ಪರ್ಧೆ ಎಂದೇ ಬಿಂಬಿತವಾಗಿದ್ದ ಕ್ಷೇತ್ರದಲ್ಲಿ ಮತದಾರರು ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯನ್ನು ಕೈ ಹಿಡಿದಿದ್ದಾರೆ. ಕಳೆದ ಬಾರಿ ಗೆಲುವು ಸಾಧಿಸಿದ್ದ ಅನಿಲ್ ಚಿಕ್ಕಮಾದು ಅವರು ಈ ಬಾರಿ 84,359 ಮತ ಪಡೆಯುವ ಮೂಲಕ ಪ್ರತಿಸ್ಪರ್ಧಿ ವಿರುದ್ಧ 34,939 ಮತಗಳ ಜಯಬೇರಿ ದಾಖಲಿಸಿದ್ದಾರೆ.
2018ರ ಚುನಾವಣೆಯಲ್ಲಿ 76,652 ಮತ ಪಡೆದು ಜೆಡಿಎಸ್‌ನ ಚಿಕ್ಕಣ್ಣ ವಿರುದ್ಧ 22,093 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಚಿಕ್ಕಣ್ಣ ಅವರು 54,559 ಮತ ಪಡೆದಿದ್ದರು. ಈ ಬಾರಿ ಅನಿಲ್ ಅವರು ಹೆಚ್ಚು ಮತಗಳನ್ನು ಪಡೆಯುವ ಜತೆಗೆ ಗೆಲುವಿನ ಅಂತರ ಹೆಚ್ಚಿಸಿಕೊಂಡಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ಅನಿಲ್ ಅವರ ಬೆನ್ನಿಗೆ ನಿಂತಿದ್ದ ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ನಿಧನದಿಂದ ಅನಿಲ್ ಚಿಕ್ಕಮಾದು ಅವರು ಕೊಂಚ ದಿಗಿಲುಗೊಂಡಿದ್ದರೂ, ಕ್ಷೇತ್ರದಲ್ಲಿ ಅವರ ಹೆಸರಿನಲ್ಲಿಯೂ ಪ್ರಚಾರ ನಡೆಸಿ ಮತದಾರರನ್ನು ಭಾವನಾತ್ಮಕವಾಗಿಯೂ ಸೆಳೆದಿದ್ದರು.
ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ.ಎಂ.ಕೃಷ್ಣನಾಯಕ ಅವರು 49,420 ಮತ ಪಡೆಯುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಜೆಡಿಎಸ್‌ನಿಂದ ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿ ಕೊನೆ ಗಳಿಗೆಯಲ್ಲಿ ಪಕ್ಷಾಂತರ ಮಾಡಿ ಬಿಜೆಪಿ ತೆಕ್ಕೆ ಸೇರಿದ್ದರೂ ಗೆಲುವು ಸಾಧಿಸಲು ವಿಫಲರಾಗಿದ್ದಾರೆ.
ಬಿಜೆಪಿಯ ಸಾಂಪ್ರದಾಯಿಕ ಮತಗಳ ಜತೆಗೆ ತಮ್ಮ ಸಮಾಜ ಸೇವಾ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಸೆಳೆಯಲು ಈ ಬಾರಿ ಯತ್ನಿಸಿದ್ದರೂ ಮತದಾರರು ಮನ್ನಣೆ ನೀಡಿಲ್ಲ.
ಜೆಡಿಎಸ್‌ಗೆ ಮೂರನೇ ಸ್ಥಾನ
ಪ್ರಥಮವಾಗಿ ಕಣಕ್ಕಿಳಿದು ಗೆಲ್ಲುವ ವಿಶ್ವಾಸದಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಜಯಪ್ರಕಾಶ್ ಮೂರನೇ ಸ್ಥಾನಕ್ಕೆ ಹೋಗಿದ್ದು, 43,519 ಮತ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಬಾರಿ ಪ್ರಬಲ ಪೈಪೋಟಿ ಕಾಣಲಿದೆ ಎಂದೇ ಬಿಂಬಿಸಲಾಗಿದ್ದ ಕ್ಷೇತ್ರದಲ್ಲಿ ಮತದಾರರು ಮಾತ್ರ ಒಂದು ಪಕ್ಷಕ್ಕೆ ಒಲವು ತೋರಿದ್ದಾರೆ. ತಮ್ಮ ತಂದೆ ಚಿಕ್ಕಣ್ಣ ಅವರಿಗಿಂತಲೂ ಜಯಪ್ರಕಾಶ್ ಕಡಿಮೆ ಮತ ಗಳಿಸಿದ್ದಾರೆ. ಪುತ್ರನಿಗಾಗಿ ಚಿಕ್ಕಣ್ಣ ಅವರು ಟಿಕೆಟ್ ಬಿಟ್ಟುಕೊಟ್ಟರೂ ವಿಧಾನಸಭೆ ಪ್ರವೇಶದ ಬಯಕೆ ಈಡೇರಿಲ್ಲ.
ಪ್ರಮುಖ ಪಕ್ಷ ಸೇರಿದಂತೆ ಒಟ್ಟು 12 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರೂ ಯಾರೂ ಮೂರಂಕಿ ದಾಟಿಲ್ಲ. ಸೋತ ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಹೊರತುಪಡಿಸಿ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಅಭ್ಯರ್ಥಿಗಳು ಯಾರು ಸರಿ ಇಲ್ಲ ಎನ್ನುವ ನೋಟಾ ಮತಗಳೇ 1184 ಚಲಾವಣೆಗೊಂಡಿವೆ.
ಇತರರು ಪಡೆದ ಮತಗಳು
ಹೋಟೆಲ್ ಶಿವಣ್ಣ-ಬಿಎಸ್‌ಪಿ (885), ಎಚ್.ಎಂ. ನಾಗೇಶ್-ಉತ್ತಮ ಪ್ರಜಾಕೀಯ ಪಾರ್ಟಿ (567), ಕೆ.ವಿ. ರಾಜು - ಸಮಾಜವಾದಿ ಜನತಾ ಪಾರ್ಟಿ (209), ಎಚ್.ಎಂ.ಶಿವಪ್ಪ - ಕರ್ನಾಟಕ ರಾಷ್ಟ್ರ ಸಮಿತಿ (200), ಪಕ್ಷೇತರರಾದ ಗಿರಿಜಾಂಬ (274), ಜಿ.ಎನ್.ದೇವದತ್ತ (218), ಎ.ಎಂ. ಬಾಬುನಾಯಕ (431), ಎಂ. ಎಸ್.ಶಿವಕುಮಾರ (434), ಸಣ್ಣ ನಾಯ್ಕ (671)