ಅನಿಲ ಸಂಪರ್ಕದತ್ತ ಇರಲಿ ಎಚ್ಚರ, ಡಿವೈಎಸ್‌ಪಿ ಉಮಾಶಂಕರ್ ಸಲಹೆ, ಪೆಟ್ರೋಲಿಯಂ ಅಪಾಯ ನಿರ್ವಹಿಸುವ ಕಾರ್ಯಾಗಾರ

f1a62dd2-b3c4-4007-8e7f-ee75726ec162
Published on

ಬೆಂಗಳೂರು ಗ್ರಾಮಾಂತರ:  ಅನಿಲ ಸಂಪರ್ಕ ಕೊಳವೆಗಳು ಹಾದುಹೋಗಿರುವ ಕಡೆಗಳಲ್ಲಿ ಅತಿ ಕ್ರಮ ಪ್ರವೇಶ ಮಾಡಬಾರದು ಎಂದು ಹೊಸಕೋಟೆ ತಾಲೂಕು ಡಿವೈಎಸ್ಪಿ ಉಮಾಶಂಕರ್ ಸಲಹೆ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಆರೋಗ್ಯ ಕರ್ನಾಟಕದ ಸಹಯೋಗದಲ್ಲಿ ಹೊಸಕೋಟೆ ತಾಲೂಕಿನ ದೇವಲಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಪೆಟ್ರೋಲಿಯಂ ಅಪಾಯ ನಿರ್ವಹಿಸುವ ಕುರಿತ ಸಾರ್ವಜನಿಕ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಲವು ಗ್ರಾಮಗಳ ಜಮೀನುಗಳಲ್ಲಿ ಅನಿಲ ಸಂಪರ್ಕ ಕಲ್ಪಿಸುವ ಕೊಳವೆಗಳು ಹಾದು ಹೋಗಿದ್ದು, ರೈತರು ಈ ಬಗ್ಗೆ ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆಯಿಂದ ಕೃಷಿ ಚಟುವಟಿಕೆ ನಡೆಸಬೇಕು ಎಂದು ಹೇಳಿದರು.

ಅಡುಗೆ ಮನೆಯಲ್ಲಿ ಗ್ಯಾಸ್‌ಸಿಲಿಂಡರ್ ಇಡುವುದರಿಂದ ಜಾಗರೂಕತೆಯಿಂದ ಹಾಗೂ ಸುರಕ್ಷಿತವಾಗಿ ಬಳಕೆ ಮಾಡಬೇಕು, ಮುಂಜಾಗ್ರತೆಯಿಲ್ಲದಿದ್ದರೆ ಅಪಾಯಕ್ಕೆ ನಾವೇ ಆಹ್ವಾನ ನೀಡಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಿರಿಯ ಆರೋಗ್ಯ ಅಧಿಕಾರಿ ಗುರುರಾಜ್ ಮಾತಾನಾಡಿ, ಎಲ್ಲ ಇಲಾಖೆಗಳು ಪೆಟ್ರೋಲಿಯಂ ಇಂಧನದ ಬಗ್ಗೆ ಅರಿವು ಮೂಡಿಸಬೇಕು.ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅನಿಲವನ್ನು ಸುರಕ್ಷಿತವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಪರಿಶೀಲಿಸಿ ದೃಢಪಡಿಸಿಕೊಳ್ಳಬೇಕು ಎಂದು ಹೇಳಿದರು.

ಎಲ್ಲರೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಆಕಸ್ಮಿಕ ಅವಘಡಗಳಿಗೆ ಆಸ್ಪದ ನೀಡದೆ, ಎಚ್ಚರಿಕೆ ವಹಿಸಬೇಕು ಎಂದು ಹೊಸಕೋಟೆ ತಾಲೂಕು ಉಪತಹಸೀಲ್ದಾರ್ ರಾಧಮ್ಮ ಹೇಳಿದರು.

ತಾಲೂಕಿನಲ್ಲಿರುವ ಪೆಟ್ರೋಲಿಯಂ ತೈಲಗಳ ಉಗ್ರಾಣ ಹಾಗೂ ಗ್ಯಾಸ್ ಸಿಲಿಂಡರ್ ಗಳಿಂದಾಗುವ ಅಪಾಯಗಳ ಬಗ್ಗೆ ಸಾರ್ವಜನಿಕರು ನಿರ್ಲಕ್ಷ್ಯ ವಹಿಸಬಾರದು, ಅವಘಡಗಳಿಗೆ ಆಸ್ಪದ ನೀಡದೆ ಜಾಗೃತಿ ವಹಿಸಬೇಕು ಎಂದು ದೇವನಗೊಂದಿ ಗ್ರಾಪಂ ಅಧ್ಯಕ್ಷ ಮಾರೇಗೌಡ ತಿಳಿಸಿದರು.

ಕಾರ್ಖಾನೆಗಳ ಉಪ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ, ಪ್ರತಿದಿನ ಕಾರ್ಖಾನೆಗಳನ್ನು ಪ್ರಾರಂಭಿಸುವ ಮೊದಲು ಎಲ್ಲ ಸುರಕ್ಷಿತ ಕ್ರಮ ಅನುಸರಿಸಿದ್ದಾರೆಯೇ ಎಂದು ಪರಿಶೀಲಿಸಿ, ನಂತರ ಕಾರ್ಯ ಚಟುವಟಿಕೆ ಪ್ರಾರಂಭಿಸಬೇಕು. ಪ್ರತಿ ಹಳ್ಳಿ ಹಳ್ಳಿಗೂ ಆಟೋ ಪ್ರಚಾರದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತಹ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net