

ಚಿತ್ರದುರ್ಗ: ತಾಂತ್ರಿಕ ಹುದ್ದೆಗಳ ಸಮಾನ ವೇತನ ಶ್ರೇಣಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ನೇತೃತ್ವದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಕರ್ತವ್ಯ ಬಹಿಷ್ಕರಿಸಿ ನಗರದ ತಾಲೂಕು ಕಚೇರಿ ಆವರಣದಲ್ಲಿ ಗುರುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.
ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಕೆಲಸಗಳು ಹತ್ತು ಪಟ್ಟು ಅಧಿಕವಾಗಿವೆ. ಇ.ಆಫೀಸ್, ಆಧಾರ್ ಸೀಡ್, ಲ್ಯಾಂಡ್‌ಬೀಟ್, ಬಗರ್‌ಹುಕುಂ, ಹಕ್ಕುಪತ್ರ, ಪೌತಿ ಆಂದೋಲನ ಆ್ಯಪ್, ಬೆಳೆ ಸಮೀಕ್ಷೆ, ಕೃಷಿ, ನೀರಾವರಿ ಗಣತಿ, ದಿಶಾಂಕ್ ಮತ್ತಿತರ ಕೆಲಸಗಳಿಗೆ ಕಂದಾಯ ಇಲಾಖೆ ಅಭಿವೃದ್ಧಿಪಡಿಸಿರುವ ಮೊಬೈಲ್ ತಂತ್ರಾಂಶಗಳಿಂದ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಒತ್ತಡ ಹೆಚ್ಚಾಗಿದ್ದು, ಕೆಲಸ ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು ದೂರಿದರು.
ಗ್ರಾಮ ಆಡಳಿತಾಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಗುಣಮಟ್ಟದ ಪೀಠೋಪಕರಣಗಳು, ಮೊಬೈಲ್, ಸಿಮ್ ಮತ್ತು ಲ್ಯಾಪ್‌ಟಾಪ್, ಪ್ರಿಂಟರ್ ಮತ್ತು ಸ್ಕಾೃನರ್ ಇತ್ಯಾದಿ ಸೌಲಭ್ಯಗಳನ್ನು ಒದಗಿಸಬೇಕು. ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಈವರೆಗೆ ಆಗಿರುವ ಅಮಾನತು ಆದೇಶಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಕೆಸಿಎಸ್‌ಆರ್ ನಿಯಮಾವಳಿಗಳಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರಥಮದರ್ಜೆ ಸಹಾಯಕ/ ರಾಜಸ್ವ ನಿರೀಕ್ಷಕರ ಹುದ್ದೆಗಳಿಗೆ ತಕ್ಷಣವೇ ಪದೋನ್ನತಿ ನೀಡಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಅಂತರ್ ಜಿಲ್ಲಾ ಪತಿ-ಪತ್ನಿ ವರ್ಗಾವಣೆಗೆ ಚಾಲನೆ ನೀಡಿ ಅಂತಿಮ ಆದೇಶಕ್ಕಾಗಿ ಬಾಕಿಯಿರುವ ಪ್ರಕರಣಗಳಿಗೆ ವರ್ಗಾವಣೆ ಆದೇಶ ನೀಡಬೇಕು. ಕೌನ್ಸೆಲಿಂಗ್ ಮೂಲಕ ಅಂಗವಿಕಲ, ತೀವ್ರ ಅನಿವಾರ್ಯ ಹಾಗೂ ಅನಾರೋಗ್ಯ ಸಮಸ್ಯೆ ಪ್ರಕರಣಗಳ ನಿಯೋಜಿಸ ಬೇಕೆಂದು ಪ್ರತಿಭಟನಾನಿರತರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಗೌರವಾಧ್ಯಕ್ಷ ವಿ.ಪಾಂಡುರಂಗಪ್ಪ, ಜಿಲ್ಲಾಧ್ಯಕ್ಷ ಮಾಲತೇಶ ಮುದ್ದಜ್ಜಿ, ಕಂದಾಯ ಇಲಾಖೆ ನೌಕರರ ಜಿಲ್ಲಾಧ್ಯಕ್ಷ ಬಿ.ಎಸ್.ಸಿದ್ದೇಶಿ, ಎಂ.ಪಿ.ಸಂಪತ್‌ಕುಮಾರ್, ಶಿವಕುಮಾರ್, ರಾಘವೇಂದ್ರ ವಡೇರ್, ಜಿ.ಎಸ್.ಸುರೇಶ್, ಮಹಮದ್ ಇರ್ಫಾನ್, ಎನ್.ಜೆ.ತಾಯಕ್ಕ, ಕೆ.ನೀಲಾಂಬಿಕೆ, ಶಾಂತಾ, ಅರುಣಿ, ಶ್ರೀದೇವಿ, ಭುವನೇಶ್ವರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.