ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ ರೈತರು

19klgphoto-1.....
Published on

ಕೊಳ್ಳೇಗಾಲ: ಕೆರೆಗಳ ಒತ್ತುವರಿ, ಕೆರೆಯೊಳಗೆ ನಿರ್ಮಿಸಿರುವ ಅವೈಜ್ಞಾನಿಕ ಯುಜಿಡಿ ತೆರವು ಹಾಗೂ ಕಾಲುವೆಗೆ ಸೇರುವ ಯುಜಿಡಿ ನೀರನ್ನು ತಡೆ ಹಿಡಿಯುವಂತೆ ಆಗ್ರಹಿಸಿ ತಾಲೂಕು ಗುಂಡಾಲ್ ಜಲಾಶಯದ ಹಳೇ ಸ್ಥಿರಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘ ಕಾರ್ಯಕರ್ತರು ಸೋಮವಾರ ನಗರದ ಕಬಿನಿ ಇಲಾಖೆಯ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.


ಸಂಘದ ಅಧ್ಯಕ್ಷ ದಶರಥ್ ಮಾತನಾಡಿ, ಗುಂಡಾಲ್ ಜಲಾಶಯ ವ್ಯಾಪ್ತಿಗೆ ಬರುವ 9 ಕೆರೆಗಳು ಒತ್ತು ವರಿಯಾಗಿವೆ. ಈ ಬಗ್ಗೆ ನೀರಾವರಿ ಇಲಾಖೆ ಗಮನ ಸೆಳೆದು ಹೋರಾಟವನ್ನು ಮಾಡಲಾಗಿದೆ. ಕೆರೆ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ಅಧಿಕಾರಿಗಳು ಒತ್ತುವರಿ ತೆರವಿಗೆ ಮೀನಮೇಷ ಎಣಿಸುತ್ತಿದ್ದಾರೆ. ಅದಕ್ಕಾಗಿ ಸಂಘದ ಪದಾಧಿಕಾರಿಗಳು, ರೈತರು ಅನಿರ್ದಿಷ್ಟಾವಧಿ ಧರಣಿ ಹೂಡಿದ್ದು, ನ್ಯಾಯ ಸಿಗುವವರೆಗೂ ಜಾಗ ಬಿಟ್ಡು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.


ರೈತ ಮುಖಂಡ ನರಸಿಂಹನ್ ಮಾತನಾಡಿ, ಕೆರೆ ಒತ್ತುವರಿ ತೆರವಿನ ಕೂಗು ನಿನ್ನೆಯದಲ್ಲ. ರೈತರ ಅಳಲನ್ನು ಅಧಿಕಾರಿಗಳು ಆಲಿಸುತ್ತಿಲ್ಲ ರೈತರ ಜೀವನ ನಾಡಿ ಕೆರೆ ಸಂರಕ್ಷಣೆ ಯಾಗಬೇಕಿದೆ. ಚಿಕ್ಕರಂಗನಾಥ ಕೆರೆಯೊಳೆಗೆ ಅವೈಜ್ಞಾನಿಕವಾಗಿ ಯುಜಿಡಿ ನಿರ್ಮಿಸಲಾಗಿದೆ. ಶೌಚಗೃಹ ಹಾಗೂ ಕೊಳಚೆ ನೀರು ಕೆರೆ ಸೇರಿ ಮಲಿನವಾಗುತ್ತಿದೆ. ಒತ್ತುವರಿ ತೆರವುಗೊಳಿಸದೆ ಕೊಂಗಳಕೆರೆ ಅಭಿವೃದ್ಧಿಗೊಳ್ಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಆಗುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದರು.


ಸ್ಥಳಕ್ಕಾಗಮಿಸಿದ ಕಬಿನಿ ಕಾರ್ಯಪಾಲಕ ಇಂಜಿನಿಯರ್ ಎಂ.ಬಿ.ಪಾಟೀಲ್ ಮಾತನಾಡಿ, ದೊಡ್ಡರಂಗನಾಥ ಕೆರೆಯಲ್ಲಿ ಒತ್ತುವರಿ ತೆರವಿಗೆ ಕ್ರಮ ವಹಿಸಿದ್ದೇವೆ. ಅಂತೆಯೇ ಚಿಕ್ಕರಂಗನಾಥ ಕೆರೆಯಲ್ಲೂ ಕಂದಾಯ ಇಲಾಖೆ ನೀಡಿರುವ ಸರ್ವೇ ಸ್ಕೆಚ್ ಆಧರಿಸಿ ಒತ್ತುವರಿ ಮಾಡಲಾಗುವುದು ಎಂದರು.
ನಗರಸಭೆ ಎಇಇ ಸುರೇಶ್, ಕೊಳ್ಳೇಗಾಲ ನಗರಸಭೆಗೆ ಬರುವ ಮುನ್ನ ಚಿಕ್ಕರಂಗನಾಥ ಯುಜಿಡಿ ನಿರ್ಮಿಸಲಾಗಿದೆ. ಯುಜಿಡಿ ತೆರವುಗೊಳಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಮಟ್ಟದಲ್ಲಿ ಗಮನ ಸೆಳೆದಿದ್ದೇವೆ ಎಂದು ತಿಳಿಸಿದರು.


ಸಂಘದ ಅಧ್ಯಕ್ಷ ದಶರಥ, ರೈತ ಮುಖಂಡ ರಾಮಕೃಷ್ಣ, ನರಸಿಂಹ, ಅಣಗಳ್ಳಿ ಬಸವರಾಜು, ಷಣ್ಮುಗಸ್ವಾಮಿ, ಜಿನಕನಹಳ್ಳಿ ನಟರಾಜು, ಮಧುವನಹಳ್ಳಿ ಬಸವರಾಜು, ಸಿದ್ದಯ್ಯನಪುರ ಚಾಮರಾಜು, ನಾಗಣ್ಣ, ಚಲುವನಹಳ್ಳಿ ಮಲ್ಲಿಕಾರ್ಜುನಸ್ವಾಮಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net