

ಮೈಸೂರು: ರಾಜ್ಯದಲ್ಲಿಯೇ ಅತ್ಯಂತ ಎತ್ತರಕ್ಕೆ ಬೆಳೆದಿರುವ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರ ಬಿಟ್ಟು ಅನಿರೀಕ್ಷಿತವಾಗಿ ವರುಣ, ಚಾಮರಾಜನಗರ ಕ್ಷೇತ್ರಕ್ಕೆ ಬಂದೆ. ಪಕ್ಷದ ವರಿಷ್ಠರು ನೀಡಿದ ಆದೇಶವನ್ನು ಪ್ರಶ್ನೆ ಮಾಡದೆ ಪಾಲಿಸಿದ್ದೇನೆ. ಅಲ್ಪಾವಧಿಯಲ್ಲಿಯೇ ಜನರು ಪ್ರೀತಿ, ವಿಶ್ವಾಸ ತೋರಿದ್ದು, ಅದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ಪಕ್ಷದ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು.
ಬೆಂಗಳೂರಿನಲ್ಲಿ ನನ್ನದೇ ಆದ ಕೋಟೆ ಕಟ್ಟಿದ್ದೇನೆ. ನಾನು ನನ್ನ ದುಡಿಮೆಯಲ್ಲಿ ಬೆಳೆದಿದ್ದೇನೆ. ಹೈಕಮಾಂಡ್‌ನವರು ಯಾಕೆ ನನನ್ನ್ನು ಇಲ್ಲಿಗೆ ಕರೆಸಿದ್ದರೋ ಗೊತ್ತಿಲ್ಲ. ಚಿನ್ನದಂತಹ ನನ್ನ ಗೋವಿಂದರಾಜನಗರ ಕ್ಷೇತ್ರದ ಜನ ಬೀದಿಯಲ್ಲಿ ಅನಾಥರಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಅಂಗವಿಕಲರಿಗೆ ಮಾಡಿದ್ದ ಜಿಮ್‌ಗೆ ಬೀಗ ಹಾಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹೈಕಮಾಂಡ್ ಸೂಚಿಸಿದ್ದರಿಂದ ವರುಣ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಂದೆ. ನನ್ನ ಸೋಲಿಗೆ ಯಾರು ಕಾರಣರೆಂದು ಈಗ ಹೇಳುವುದಿಲ್ಲ. ಮುಂದೊಂದು ದಿನ ಅದು ಹೊರಗೆ ಬರುತ್ತದೆ. ವರುಣ ಕ್ಷೇತ್ರದಲ್ಲಿ ಎಲ್ಲ್ಲ ಮುಖಂಡರು, ಕಾರ್ಯಕರ್ತರು ಬೆಂಬಲ ನೀಡಿದರು. ನನ್ನ ಸೋಲಿಗೆ ಎರಡು, ಮೂರನೇ ಹಂತದ ನಾಯಕರು ಕಾರಣವಲ್ಲ. ಅದಕ್ಕೂ ಮೇಲಿನವರು ಏನು ಮಾಡಿದ್ದಾರೆ ಎಂಬುದು ನನಗೆ ಗೊತ್ತು. ಚಾಮುಂಡೇಶ್ವರಿ ತಾಯಿಯೇ ನನ್ನ ವಿರುದ್ಧ ಅಪಪ್ರಚಾರ ಮಾಡಿರುವವರನ್ನು ನೋಡಿಕೊಳ್ಳುತ್ತಾಳೆ ಎಂದು ಮಾರ್ಮಿಕವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಟರಾದ ಶಿವರಾಜಕುಮಾರ್, ಲೂಸ್ ಮಾದ, ದುನಿಯಾ ವಿಜಯ್ ಅವರನ್ನು ಪ್ರಚಾರಕ್ಕೆ ಕರೆತಂದರು. ಸಿದ್ದರಾಮಯ್ಯ ಅವರ ಇಡೀ ಜೀವನದಲ್ಲಿ ಖರ್ಚು ಮಾಡದಷ್ಟು ಹಣವನ್ನು ಈ ಬಾರಿಯ ಚುನಾವಣೆಯಲ್ಲಿ ಖರ್ಚು ಮಾಡಿದ್ದಾರೆ. ಸಿದ್ದರಾಮಯ್ಯಗೆ ಯಾರು ಯಾರು ಫಂಡ್ ಮಾಡಿದ್ದಾರೆ ಎಂಬುದು ಸಹ ನನಗೆ ಗೊತ್ತು. ನಾನು ದಡ್ಡನಲ್ಲ, ದಡ್ಡನ ತರಹ ನಡೆದುಕೊಳ್ಳುವ ಬುದ್ಧಿವಂತ ಎಂದು ಹೇಳಿದರು.
ನಾನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಗರಡಿಯಲ್ಲಿ ಬೆಳೆದವನು. ಜೆ.ಎಚ್.ಪಟೇಲ್ ಅವರ ಜತೆಯಲ್ಲಿ ಇದ್ದೆ. ಬಿಜೆಪಿಗೆ ಬಂದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಏನೆಲ್ಲ ಕೆಲಸ ಮಾಡಬೇಕೆಂದು ಹೇಳಿಕೊಟ್ಟರು. ನನಗೆ ಪಕ್ಷವೇ ದೇವರು, ಪಕ್ಷವೇ ತಾಯಿ. ಆದರೆ ಬೇಸರ ಮಾಡಿ ಸಿಟ್ಟು ಬರಿಸಿದರೆ ಹೊರ ಹೋಗುತ್ತಿರುತ್ತೇನೆ. ಎಸ್.ಎಂ.ಕೃಷ್ಣ ಅವರ ವಿರುದ್ಧ ಜಗಳವಾಡಿಕೊಂಡು ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದಿರುವ ಸ್ವಾಭಿಮಾನಿ ಎಂದು ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದರು.
ನಾನು ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುತ್ತೇನೆ. ನನಗಿಂತ ದೊಡ್ಡವರು ತಪ್ಪು ಮಾಡಿದ್ದರೂ ತಪ್ಪೆಂದು ಹೇಳುತ್ತೇನೆ. ರಾಜಕೀಯ ಎಂದೂ ನಿಂತ ನೀರಲ್ಲ. ಸದಾ ಹರಿಯುತ್ತಿರುತ್ತದೆ. ವರುಣದಲ್ಲಿ ಯಾರಿಗಾದರೂ ತೊಂದರೆ ಕೊಟ್ಟರೆ ಸೋಮಣ್ಣ ಇದ್ದಾನೆ, ಚಿಂತಿಸಬೇಕಿಲ್ಲ. ಕಾರ್ಯಕರ್ತರು ಎದೆಗುಂದಬೇಕಿಲ್ಲ ಎಂದು ಧೈರ್ಯ ತುಂಬಿದರು.
‘ಹೊಟ್ಟೆಪಾಡಿಗಾಗಿ ನಾನು ಬೆಂಗಳೂರಿಗೆ ಹೋದೆ. ನನ್ನ ಸೋದರ ಮಾವ ನಿಜಲಿಂಗಪ್ಪರ ಅಳಿಯ. ನಾನು, ನನ್ನ ಅಮ್ಮ ಮಾವನ ಮನೆಗೆ ಹೋದಾಗ ಇವನನ್ನು ಯಾಕೆ ಕರೆದುಕೊಂಡು ಬಂದೆ ಎಂದು ಬೈದರು. ನಮ್ಮಮ್ಮ ನನಗೆ 25 ರೂ. ನೀಡಿ ಇವನ ಮನೆಗೆ ಇನ್ಯಾವತ್ತೂ ಹೋಗಬೇಡ. ನಿಮಪ್ಪನ ಹೆಸರು ಉಳಿಸಿ ಬೆಳೆಯಬೇಕು ಎಂದು ಛಲ ತುಂಬಿದರು. ಅಂದಿನಿಂದ ನಾನು ಬೆಳೆದು ಸಚಿವನಾದೆ. ಆಮೇಲೆ ನಮ್ಮ ಮಾವ ನನ್ನ ಮನೆಗೆ ಬಂದರು’. ಒಳ್ಳೆಯವರಿಗೆ ಯಾರೂ ಅನ್ಯಾಯ ಮಾಡಬೇಡಿ, ದೇವರು ಒಳ್ಳೆಯದು ಮಾಡುವುದಿಲ್ಲ ಎಂದು ಪರೋಕ್ಷವಾಗಿ ಹಿತಶತ್ರುಗಳಿಗೆ ಕುಟುಕಿದರು.
‘ಮಾಜಿ ಡಿಸಿಎಂ ಆರ್.ಅಶೋಕ ಅವರು ಮನೆಗೆ ಬಂದು ನನ್ನಂತೆ ಒಂದು ಕ್ಷೇತ್ರ ಕೇಂದ್ರೀಕರಿಸಿ ಎಂದರು. ನಾನು ಅಶೋಕ ಅಲ್ಲ, ಸೋಮಣ್ಣ ಎಂದು ಅವರಿಗೆ ಉತ್ತರ ನೀಡಿದೆ. ಪ್ರವಾಹದ ವಿರುದ್ಧ ಈಜಲು ಪಕ್ಷ ಹೇಳಿದೆ, ಅದಕ್ಕೆ ಎರಡು ಕ್ಷೇತ್ರಗಳಲ್ಲಿ ನಿಂತೆ ಎಂದೆ’. ಎಲ್ಲರೂ ಪಕ್ಷ ಸಂಘಟಿಸಬೇಕು. ಪಕ್ಷ ಹೇಳಿದ ಮಾತು ಕೇಳಬೇಕು. ಜಾತಿ ನೋಡದೆ ನಾಯಕರನ್ನು ಬೆಳೆಸಬೇಕು ಎಂದು ಹೇಳಿದರು.
ಕೆ.ಆರ್.ಕ್ಷೇತ್ರದ ನೂತನ ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಮುಖಂಡರಾದ ಮೈ.ವಿ.ರವಿಶಂಕರ್, ಎಸ್.ಮಹದೇವಯ್ಯ, ಕೋಟೆ ಎಂ.ಶಿವಣ್ಣ, ಕಲ್ಲಳ್ಳಿ ವಿಜಯಕುಮಾರ್ ಇತರರು ಇದ್ದರು.