

ಬೇಲೂರು: ಅನಾರೋಗ್ಯ ಕಾರಣದಿಂದ ಮನನೊಂದ ಬಿಕ್ಕೊಡಿ ಯುವಕ ಡೆತ್ ನೋಟ್ ಬರೆದಿಟ್ಟು ವಾಟೇಹೊಳೆ ಜಲಾಶಯದ ಹೊನ್ನೇಮನೆ ಹಿನ್ನೀರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬಿಕ್ಕೋಡು ಸಮೀಪದ ಹೊನ್ನೆಮನೆ ಗ್ರಾಮದಲ್ಲಿ ನಡೆದಿದೆ.
ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಕ್ಕೋಡು ಗ್ರಾಮದ 26 ವರ್ಷದ ಸಂದೀಪ ಎಂಬ ಯುವಕನೇ ವಾಟೇಹೊಳೆ ಜಲಾಶಯದ ಹಿನ್ನೀರಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಯಾಗಿದ್ದು, ಮೃತ ಸಂದೀಪ ನ್ಯೂರೋ ಫಿಬ್ರೋಮಾ ಲಿಪೋಮಾ ಎಂಬ ಖಾಯಿಲೆಗೆ ತುತ್ತಾಗಿ ನೋವು ಅನುಭವಿಸುತಿದ್ದನು. ಈ ಖಾಯಿಲೆಗಾಗಿ ಕೆಲ ವೈದ್ಯರನ್ನು ಬೇಟಿಮಾಡಿ ಚಿಕಿತ್ಸೆ ಸಹ ಪಡೆದಿದ್ದನು. ಆದರೆ ಅದು ವಾಸಿಯಾಗದ ಕಾರಣ ಮನ ನೊಂದು ನ. 30 ರಂದು ಬುಧವಾರ ಸಂಜೆ ಮನೆಯಿಂದ ತನ್ನ ಸ್ನೇಹಿತನ ಬೈಕ್‌ನಲ್ಲಿ ಹೊನ್ನೆಮನೆ ಜಲಾಶಯದ ಹಿನ್ನೀರಿನ ಹತ್ತಿರ ಡ್ರಾಪ್ ತೆಗೆದು ಕೊಂಡು ನಿನಗೆ ಪುನ: ರಾತ್ರಿ 8-30ಕ್ಕೆ ಫೋನ್ ಮಾಡುತ್ತೇನೆ ಬಾ ಎಂದು ಹೇಳಿ ಕಳುಹಿಸಿದ್ದಾನೆ. ನಂತರ ತನ್ನ ಸಹೋದರಿಗೆ ನನಗೆ ವಾಸಿಯಾಗದ ಖಾಯಿಲೆ ಇದ್ದು, ನೋವು ಅನುಭವಿಸುತಿದ್ದೇನೆ ಎಂದು ವಾಟ್ಸಾಪ್ ಮೂಲಕ ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವ ಬಗ್ಗೆ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದೇನೆ ನನ್ನನ್ನು ತಂದೆ, ತಾಯಿ ನೀನು ಕ್ಷಮಿಸಿ ಎಂದು ಸಂದೇಶ ಕಳುಹಿಸಿ ಜಲಾಶಯದ ಹಿನ್ನೀರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆದರೆ ಆ ತಕ್ಷಣವೇ ವಾಟ್ಸಾಪ್ ಸಂದೇಶ ನೋಡಿದ ಸಹೋದರಿ ತನ್ನ ತಂದೆ, ತಾಯಿ ಹಾಗೂ ಸಂಬಂಧಿಕರಿಗೆ ವಿಷಯ ತಿಳಿಸಿ ಹುಡುಕಲಾರಂಬಿಸಿದರೂ ಸಂದೀಪನ ಸುಳಿವಿಲ್ಲ. ಬೈಕ್‌ನಲ್ಲಿ ಡ್ರಾಪ್ ನೀಡಿದ್ದ ಸ್ನೇಹಿತ ಸಂಬಂಧಿಕರಿಗೆ ಹೆಳಿದ್ದರಿಂದ ಅವರು ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಎರಡು ದಿನ ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಶನಿವಾರ ಬೆಳಗ್ಗೆ ಹಿನ್ನೀರಿನಲ್ಲಿ ಸಂದೀಪನ ಮೃತದೇಹ ತೇಲುವುದನ್ನು ನೋಡಿದ ಗ್ರಾಮಸ್ಥರು ಮನೆಯವರಿಗೆ ವಿಷಯ ತಿಳಿಸಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಅರೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ, ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಕೊಡೋಯ್ದಿದ್ದಾರೆ. ಮೃತ ಸಂದೀಪನಿಗೆ ತಂದೆ, ತಾಯಿ, ಸಹೋದರಿ ಇದ್ದು, ಅಂತ್ಯಕ್ರಿಯೆಯನ್ನು ಬಿಕ್ಕೋಡಿನಲ್ಲಿ ನೆರವೇರಿಸಲಾಯಿತು.