

ವಿಜಯಪುರ: ಅನಾಥ ಯುವತಿಯ ಮದುವೆಗೆ ಬೇಕಾದ ಸಾಮಗ್ರಿ ಸೇರಿದಂತೆ ಆರ್ಥಿಕ ನೆರವು ನೀಡುವ ಮೂಲಕ ನಾಗಠಾಣ ಶಾಸಕ ಡಾ.ದೇವಾನಂದ ಚವಾಣ್ ಕಳಕಳಿ ಮೆರೆದಿದ್ದಾರೆ.
ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಸನಾಬೀಬಿ ಬಿರಾದಾರ ಇವರ ಮದುವೆಗೆ ಶಾಸಕ ದೇವಾನಂದ ಸಹಾಯ ಹಸ್ತ ಚಾಚಿದ್ದಾರೆ. ತಮ್ಮ ಆಪ್ತ ಸಹಾಯಕನನ್ನು ಕಳುಹಿಸಿ ಮದುವೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಖರೀದಿಸಿ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಶಾಸಕರ ಈ ಕಾರ್ಯ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಸನಾಬೀಬಿ ತಂದೆ ಮತ್ತು ತಾಯಿ ಕೆಲ ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತರಾಗಿದ್ದಾರೆ. ಸದ್ಯ ಸೋದರಮಾವನ ಮನೆಯಲ್ಲಿ ವಾಸವಾಗಿದ್ದಾಳೆ. ಮಾವನೇ ನಿಂತು ತನ್ನ ಕೈಲಾದಷ್ಟು ಹಣ ಹೊಂದಿಸಿ ಮದುವೆ ಮಾಡುತ್ತಿದ್ದನು. ಈ ವಿಷಯ ತಿಳಿದ ಶಾಸಕ ಡಾ. ದೇವಾನಂದ ಚವಾಣ್ ಆ ಯುವತಿಯ ಮದುವೆಗೆ ಅಗತ್ಯವಿರುವ ಪಾತ್ರೆ, ಪರಿಕರ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಂಡು ಕೊಟ್ಟಿದ್ದಾರೆ.
ಶಾಸಕರ ಆಪ್ತ ಸಹಾಯಕರಾದ ದಾಮೋಧರ ಪವಾರ ಹಾಗೂ ನಾಗೇಶ ಕೋಟಿ ಯುವತಿ ಮನೆಗೆ ಸಾಮಗ್ರಿ ತಲುಪಿಸಿದ್ದು ಯುವತಿ ಮತ್ತು ಅವರ ಸಂಬಂಧಿಗಳು ಆನಂದ ಭಾಷ್ಪ ಸುರಿಸಿದ್ದಾರೆ. ಇಂತಹ ಶಾಸಕರು ಸಿಕ್ಕಿದ್ದು ನಮ್ಮ ಪುಣ್ಯ ಎಂಬ ಧನ್ಯತಾ ಭಾವ ಮೆರೆದಿದ್ದಾರೆ.