

ಕಲಬುರಗಿ: ನಗರದ ಬೇಲೂರ ರಸ್ತೆಯಲ್ಲಿರುವ ಕಾಕಡೆ ಚೌಕ್ ಬಳಿ ಇರುವ ಭಾಗ್ಯಜ್ಯೋತಿ ಚಾರಿಟೇಬಲ್ ಟ್ರಸ್ಟ್ನ ವೃದ್ಧಾಶ್ರಮದಲ್ಲಿ ಅನಾಥವಾಗಿ ಭೀಕ್ಷೆ ಬೇಡುತ್ತಿದ್ದ ಮಾನಸಿಕ ಸ್ಥಿಮಿತ ಕಳೆದುಕೊಂಡ ವೃದ್ಧೆಯನ್ನು ರಕ್ಷಿಸಿ ಆಶ್ರಯ ನೀಡಲಾಗಿದೆ ಎಂದು ವೃದ್ಧಾಶ್ರಮದ ಗಂಗಮ್ಮ ಗುರೆಗೋಳ ತಿಳಿಸಿದರು. ನಗರದ ಆಳಂದ ರಸ್ತೆಯಲ್ಲಿರುವ ಶೆಟ್ಟಿ ಕಾಂಪ್ಲೆಕ್ಸ್ ಎದುರು ಹಲವು ದಿನದಿಂದ ಯಾವುದೇ ಆಶ್ರಯ, ಆಸರೆ ಇಲ್ಲದೆ ಇದ್ದ ಅನಾಥ ವೃದ್ಧೆ ಕುರಿತು ಮಾ.೧೮ರಂದು ಶ್ರೀಕಾಂತ ಎನ್ನುವವರು ಗಮನಕ್ಕೆ ತಂದಿದ್ದು, ಅವರನ್ನು ಆಶ್ರಮಕ್ಕೆ ಕರೆದುಕೊಂಡು ಬಂದು ಸ್ನಾನ, ಸ್ವಚ್ಛಾದಿ ಕ್ರಿಯೆಗಳನ್ನು ನಡೆಸಿ, ಚಿಕಿತ್ಸೆ ಕೊಡಿಸಿದ್ದು, ಆರೋಗ್ಯವಾಗಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ೨೯ ತಿಂಗಳ ಹಿಂದೆ ವೃದ್ಧಾಶ್ರಮ ಆರಂಭಿಸಿದ್ದು, ಪತ್ನಿ, ಪುತ್ರನ ದುಡಿಮೆಯ ದುಡ್ಡಿನಲ್ಲಿ ೧೬ ವೃದ್ಧರಿಗೆ ಆಶ್ರಯ ನೀಡಲಾಗುತ್ತಿದೆ. ನಗರದಲ್ಲಿ ಎಲ್ಲಿಯೇ ವೃದ್ಧರು, ಮಾನಸಿಕ ಅಸ್ವಸ್ಥರು ಕಂಡು ಬಂದರೆ ಗಮನಕ್ಕೆ ತಂದರೆ ಅವರಿಗೆ ನೆರವು ನೀಡಲಾಗುವುದು. ಪವಿತ್ರವಾದ ಈ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಮಾಹಿತಿಗೆ ೯೬೦೬೩೫೭೨೧೪ಗೆ ಸಂಪರ್ಕಿಸಿ ಎಂದರು.