ಅನಾಥ ಮಕ್ಕಳಿಗೆ ಆಸರೆಯಾದ ಇಮ್ಮಡಿ ಶ್ರೀ

oplus_2
oplus_2
Published on

ಚಿತ್ರದುರ್ಗ: ನಗರದ ದಾವಣಗೆರೆ ರಸ್ತೆಯ ಭೋವಿ ಕಾಲನಿಯಲ್ಲಿ ಈಚೆಗೆ ದುರ್ಘಟನೆಯೊಂದರಲ್ಲಿ ಮೃತಪಟ್ಟವರ ಮನೆಗೆ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಭೇಟಿ ನೀಡಿ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.

ನಂತರ ಮಾತನಾಡಿ, ದುರ್ಘಟನೆಯಿಂದ ತಾಯಿಯನ್ನು ಕಳೆದುಕೊಂಡ ಮಕ್ಕಳು ಆನಾಥರಾಗಿದ್ದಾರೆ. ಮನೆಯಲ್ಲಿ ಸೂತಕದ ವಾತಾವರಣ ಇದ್ದು, ಬದುಕು ಕಷ್ಟಕರವಾಗಿದೆ ಎಂದರು.

ಇಡೀ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಆಕೆ ಇಲ್ಲದ ಕಾರಣ ಮಕ್ಕಳ ಶಿಕ್ಷಣಕ್ಕೂ ತೊಂದರೆ ಉಂಟಾಗಲಿದೆ. ವಿದ್ಯಾಭ್ಯಾಸ ಕುಂಠಿತವಾದರೆ, ಭವಿಷ್ಯ ಹಾಳಾಗಲಿದೆ. ಒಬ್ಬ ಮಗ ಶಾಲೆಯಲ್ಲಿ ಓದುತ್ತಿದ್ದು, ಮತ್ತೊಂದು ಚಿಕ್ಕ ಮಗುವಿದೆ. ಹೀಗಾಗಿ ಪೂರ್ಣ ಪ್ರಮಾಣದ ಜವಾಬ್ದಾರಿ ತೆಗೆದುಕೊಂಡು ಶ್ರೀಮಠದಿಂದ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಪ್ರಸ್ತುತ ದಿನಗಳಲ್ಲಿ ವಿದ್ಯಾವಂತರಾದರೆ, ಮಾತ್ರ ಸಮಾಜದಲ್ಲಿ ಗೌರವ ಸಿಗಲು ಸಾಧ್ಯ. ಆರ್ಥಿಕ ತೊಂದರೆ ಸೇರಿ ಯಾವುದೇ ಕಾರಣಕ್ಕೂ ಶಿಕ್ಷಣ ಮೊಟಕುಗೊಳಿಸಬಾರದು. ಈ ರೀತಿಯ ಬಡ ವಿದ್ಯಾರ್ಥಿಗಳಿಗೂ ಶ್ರೀಮಠದಿಂದ ಸಹಕಾರ ನೀಡಲಾಗುತ್ತಿದೆ ಎಂದರು.

ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ನೋವು ಅರ್ಥವಾಗುತ್ತಿದೆ. ಆದರೆ, ಹೋದ ಪ್ರಾಣ ಹಿಂದಿರುಗಿಸಲು ಸಾಧ್ಯವಿಲ್ಲ. ಧೈರ್ಯದಿಂದಲೇ ಬದುಕು ಮುನ್ನಡೆಸಬೇಕು ಎಂದು ಹೇಳಿದರು.

ಮದ್ಯ ಸೇವನೆಯಿಂದ ಹಣ, ಆರೋಗ್ಯ ಮಾತ್ರವಲ್ಲ. ಬದುಕು ಹಾಳಾಗಲಿದೆ. ಇದರಿಂದ ಕುಟುಂಬಕ್ಕಷ್ಟೇ ಅಲ್ಲ, ಇಡೀ ದೇಶಕ್ಕೂ ನಷ್ಟ. ಆದ್ದರಿಂದ ದುಶ್ಚಟಕ್ಕೆ ದಾಸರಾಗಿ ದುಷ್ಪರಿಣಾಮ ಎದುರಿಸುವ ಮುನ್ನ ಎಚ್ಚೆತ್ತುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶ್ರಾವಣದಲ್ಲಿ ಮದ್ಯ ಸೇವನೆಯ ದುಷ್ಪರಿಣಾಮ ಸಂಬಂಧ ಭೋವಿ ಕಾಲನಿಗಳಲ್ಲಿ ಜನಜಾಗೃತಿ ಅಭಿಯಾನ ಹಮ್ಮಿಕೊಂಡು ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಭೋವಿ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ನಗರಸಭೆ ಮಾಜಿ ಸದಸ್ಯರಾದ ವೆಂಕಟೇಶ್, ಮಂಜುನಾಥ್, ತಿಮ್ಮಣ್ಣ, ಭೋವಿ ಗುರುಪೀಠದ ಸಿಇಒ ಗೋವಿಂದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net