

ಮೈಸೂರು: ಅನರ್ಹರಿಗೆ ಯುಡಿಐಡಿ (ಅಂಗವೈಕಲ್ಯದ ವಿಶಿಷ್ಟ ಗುರುತಿನ ಚೀಟಿ) ನೀಡಲು ವೈದ್ಯರು ಪ್ರಮಾಣಪತ್ರ ನೀಡುವುದು ಕಂಡು ಬಂದರೆ ಅಂತಹ ವೈದ್ಯರುಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಎಚ್ಚರಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂಗವಿಕಲರ ಜಿಲ್ಲಾ ಮಟ್ಟದ ಕುಂದು ಕೊರತೆ ಸಭೆಯಲ್ಲಿ ಯುಡಿಐಡಿ ದುರುಪಯೋಗದ ಕುರಿತು ಅಂಗವಿಕಲರು ಗಮನ ಸೆಳೆದರು. ಸಾಕಷ್ಟು ಅನರ್ಹರು ಯುಡಿಐಡಿ ಪಡೆದುಕೊಂಡಿದ್ದಾ ರೆ. ನನಗೆ ಶೇ.75ರಷ್ಟು ಶ್ರವಣದೋಷವಿದೆ ಎಂದು ಹಲವರು ವೈದ್ಯರು ಪ್ರಮಾಣಪತ್ರ ಪಡೆದು ಯುಡಿಐಡಿ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ನಕಲಿ ಅಂಗವಿಕಲರ ಸಂಖ್ಯೆಯೇ ಹೆಚ್ಚಿದೆ ಎಂದು ಅಂಗವಿಕಲರು ದೂರಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಇತ್ತೀಚೆಗೆ ಅಂಗವಿಕಲತೆ ಪ್ರಮಾಣ ಪತ್ರ ಪಡೆದುಕೊಂಡವರನ್ನು ಸಾಮೂಹಿಕವಾಗಿ ತಪಾ ಸಣೆ ನಡೆಸಬೇಕು. ತಪಾಸಣೆಯ ನಂತರ ವರದಿ ಸಲ್ಲಿಸಬೇಕು. ಕೂಡಲೇ ವೈದ್ಯರ ಸಭೆ ನಡೆಸುವಂತೆ ಎಂದು ಹಿರಿಯ ನಾಗರಿಕರ ಮತ್ತು ವಿಕಲಚೇತನರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯುಡಿಐಡಿ ಪಡೆದಿರುವ ಫಲಾನುಭವಿಗಳಿಗೆ ಸೌಲಭ್ಯ ತಡೆ ಹಿಡಿಯುವ ಅಧಿಕಾರ ಅಧಿಕಾರಿಗಳಿಗೆ ಇಲ್ಲ. ಯಾವುದೇ ಅಧಿಕಾರಿಗಳು ಸೌಲಭ್ಯ ತಡೆ ಹಿಡಿಯಬಾರದು. ಅನುಮಾನ ಬಂದರೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ಶೇ 40ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಂಗವಿಕಲತೆ ಹೊಂದಿದ್ದರೆ ಮತದಾರರ ಪಟ್ಟಿಯಲ್ಲಿ ನಮೂದಿಸಬೇಕು. ಈ ರೀತಿ ನಮೂದಿ ಸಿದರೆ ಚುನಾವಣಾ ಆಯೋಗದಿಂದ ಮತದಾನ ಸಂದರ್ಭ ಅಂಗವಿಕಲರ ಮನೆಗೆ ವಾಹನ ಕಳುಹಿಸಲಾಗುವುದು. ತೃತೀಯ ಲಿಂಗಿಗಳು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ತಾಲೂಕು ಮಟ್ಟದ ಅಧಿಕಾರಿಗಳು, ಸಿಡಿಪಿಒಗಳು, ಮೇಲ್ವಿಚಾರಕರು ಅಂಗವಿಕಲರ ಕುಂದುಕೊರತೆ ಸಭೆ ನಡೆಸಿ ಪರಿಹರಿಸಬೇಕು. ತಾಲೂಕು ಹಂತದಲ್ಲಿ ಸಮಸ್ಯೆ ಬಗೆ ಹರಿದರೆ ಅಂಗವಿಕಲರು ಜಿಲ್ಲಾ ಕೇಂದ್ರಕ್ಕೆ ಅಲೆಯುವುದು ತಪ್ಪುತ್ತದೆ. ತಾಲೂಕು ಮಟ್ಟದಲ್ಲಿ ಜ.10 ರೊಳಗೆ ಸಭೆ ನಡೆಸಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಕನಿಷ್ಠ 2 ತಿಂಗಳಿಗೆ ಒಮ್ಮೆಯಾದರೂ ಕಡ್ಡಾಯವಾಗಿ ಸಭೆ ನಡೆಸಬೇಕು. ಅಂಗವಿಕಲರ ಕಲ್ಯಾಣಕ್ಕೆ ಮೀಸಲಿಟ್ಟಿರುವ ಶೇ.5 ಅನುದಾನ ಬಳಕೆ ಆಗುತ್ತಿದೆಯೇ, ಅರ್ಹರಿಗೆ ತಲುಪುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದರು.
ನಗರ ಪಾಲಿಕೆ ವಲಯ ಕಚೇರಿಗಳಲ್ಲಿ ಅಂಗವಿಕಲರ ಸಮಸ್ಯೆಗಳಿಗೆ ಸ್ಪಂದನೆ ದೊರೆಯುತ್ತಿಲ್ಲ. ಅಂಗವಿಕಲರಿಗೆ ಪೆಟ್ಟಿಗೆ ಅಂಗಡಿ ನೀಡಲಾಗುತ್ತಿದೆ. ಆದರೆ, ಇಡಲು ಜಾಗವನ್ನು ಪಾಲಿಕೆ ನೀಡುತ್ತಿಲ್ಲ ಅಂಗವಿಕಲರು ದೂರಿದರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸೂಕ್ತ ಜಾಗ ಒದಗಿಸಬೇಕಾಗಿರುವುದು ಪಾಲಿಕೆಯ ಜವಾಬ್ದಾರಿಯಾಗಿದ್ದು, ಈ ಕುರಿತು ಅಗತ್ಯ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.
ನಂಜನಗೂಡು ತಾಲೂಕಿನ ಕೆಬ್ಬೆಪುರ ಗ್ರಾಮದಲ್ಲಿ ನಮ್ಮ ಕುಟುಂಬದವರು 4 ಎಕರೆ 30 ಗುಂಟೆ ಜಮೀನು ಖರೀದಿಸಿದ್ದಾರೆ. ಜಾ ಜಾಗವನ್ನು ಸ್ಮಶಾನಕ್ಕೆ ಬಿಟ್ಟು ಕೊಡಬೇಕು ಎಂದು ಗ್ರಾಮದ ಮುಖಂಡರು ಒತ್ತಾಯಿಸುತ್ತಿದ್ದಾರೆ. ಆದರೆ, ಗ್ರಾಮದ ಮುಖಂಡರ ನಿರ್ಧಾರಕ್ಕೆ ವಿರುದ್ಧವಾಗಿ ನ್ಯಾಯಾಲಯದ ಮೊರೆ ಹೋಗಿ ಜಾಗ ಪಡೆದುಕೊಂಡೆವು. ಈ ಹಿನ್ನೆಲೆಯಲ್ಲಿ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ಅಲ್ಲದೆ ಜಾತಿಯೊಳಗೆ ಸೇರಿಸಿಕೊಳ್ಳಲು 1 ಲಕ್ಷ ರೂ. ದಂಡ ಪಾವತಿಸುವಂತೆ ತಾಕೀತು ಮಾಡುತ್ತಿದ್ದಾರೆ ಎಂದು ಅಂಗವಿಕಲ ನಂಜಪ್ಪ ದೂರಿದರು. ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಆರ್. ಪೂರ್ಣಿಮಾ, ಪಾಲಿಕೆ ಹೆಚ್ಚುವರಿ ಆಯುಕ್ತೆ ರೂಪಾ, ಹಿರಿಯ ನಾಗರಿಕರ ಮತ್ತು ವಿಕಲಚೇತನರ ಇಲಾಖೆಯ ಜಿಲ್ಲಾ ಅಧಿಕಾರಿ ಮಾಲಿನಿ ಇದ್ದರು.