ಅನರ್ಹರ ಕಾರ್ಡ್ ರದ್ದು

Published on

ಚಾಮರಾಜನಗರ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿದ್ದ 967 ಅನರ್ಹರ ಕಾರ್ಡ್ ರದ್ದಾಗಿದೆ.

ಜಿಲ್ಲಾ ಕಾರ್ಮಿಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಚಾಮರಾಜನಗರ ಮತ್ತು ಯಳಂದೂರು ತಾಲೂಕುಗಳಲ್ಲಿ 26452, ಕೊಳ್ಳೇಗಾಲ ಮತ್ತು ಹನೂರು ತಾಲೂಕುಗಳಲ್ಲಿ 25463, ಗುಂಡ್ಲುಪೇಟೆ ತಾಲೂಕಿನಲ್ಲಿ 12677 ಸೇರಿ ಒಟ್ಟು 64592 ಕಾರ್ಮಿಕರು ನೋಂದಣಿ ಮಾಡಿಸಿದ್ದಾರೆ. ಕಾರ್ಡ್ ಮಾಡಿಸಲು ಅರ್ಹತೆ ಇಲ್ಲದವರನ್ನು ಕಾರ್ಮಿಕ ಇಲಾಖೆ ಪತ್ತೆ ಮಾಡಿದೆ. ಚಾಮರಾಜನಗರ ಮತ್ತು ಯಳಂದೂರು ತಾಲೂಕುಗಳಲ್ಲಿ 532, ಕೊಳ್ಳೇಗಾಲ ಮತ್ತು ಹನೂರು ತಾಲೂಕುಗಳಲ್ಲಿ 396, ಗುಂಡ್ಲುಪೇಟೆ ತಾಲೂಕಿನಲ್ಲಿ 39 ಅನರ್ಹರ ಕಾರ್ಡ್ ರದ್ದು ಮಾಡಲಾಗಿದೆ.

*ಕಾರ್ಡ್ ಪಡೆಯಲು ಇರುವ ಅರ್ಹತೆಗಳೇನು?:

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಲು ಕೆಲವು ಅರ್ಹತೆಗಳು ಮತ್ತು ಅಗತ್ಯ ದಾಖಲೆಗಳ ಅವಶ್ಯಕತೆ ಇದೆ.

ನೋಂದಣಿ ಪೂರ್ವದ 12 ತಿಂಗಳಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಣೆ ಮಾಡಿರಬೇಕು. ಅಗತ್ಯ ದಾಖಲೆಗಳಾದ ಉದ್ಯೋಗ ದೃಢೀಕರಣ ಪತ್ರ, ಅರ್ಜಿದಾರರು ಮತ್ತು ಅವಲಂಬಿತರ ಆಧಾರ್ ಕಾರ್ಡ್ ಪ್ರತಿ, ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿ, ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ನಂಬರ್ ನೀಡಬೇಕು. ಕೆಲವರು ಕಟ್ಟಡ ಕೆಲಸ ಮಾಡದೆ ಇದ್ದರೂ ಅರ್ಜಿ ಸಲ್ಲಿಸಿ ಕಾರ್ಡ್ ಪಡೆದುಕೊಳ್ಳುತ್ತಾರೆ. ಇಂತಹ ಅನರ್ಹರನ್ನು ಕಾರ್ಮಿಕ ಇಲಾಖೆ ಪತ್ತೆ ಮಾಡಿ ಕಾರ್ಡ್ ರದ್ದುಗೊಳಿಸುತ್ತಿದೆ.

ಅನರ್ಹರು ಕಾರ್ಡ್ ಮಾಡಿಸೋದೇಕೆ?:

ಕಲ್ಯಾಣ ಮಂಡಳಿಯಿಂದ ಸಿಗುವ ಸೌಲಭ್ಯಗಳನ್ನು ಪಡೆಯುವುದಕ್ಕಾಗಿಯೇ ಅನರ್ಹರೂ ಕಾರ್ಡ್ ಮಾಡಿಸುತ್ತಾರೆ. ನೋಂದಣಿ ಮಾಡಿಸುವುದರಿಂದ ಪಿಂಚಣಿ ಸೌಲಭ್ಯ, ಕುಟುಂಬ ಪಿಂಚಣಿ, ದುರ್ಬಲತೆ ಪಿಂಚಣಿ, ಟೂಲ್ ಕಿಟ್ ಸೌಲಭ್ಯ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ, ಮದುವೆ ಸಹಾಯಧನ, ತಾಯಿ ಮಗು ಸಹಾಯಹಸ್ತ ಸೌಲಭ್ಯಗಳು ದೊರೆಯುತ್ತವೆ.

ಕಾರ್ಮಿಕರ ಜಿಲ್ಲೆ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಅಧಿಕವಾಗಿದೆ. ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲದೆ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲೂ ಕಾರ್ಮಿಕರು ಇದ್ದಾರೆ. ಕೃಷಿ ಕೂಲಿ ಕಾರ್ಮಿಕರನ್ನು ಬಿಟ್ಟರೆ ಹೆಚ್ಚು ಸಂಖ್ಯೆಯಲ್ಲಿ ಇರುವುದೇ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳ ಕಾರ್ಮಿಕರು. ಮುಂಜಾನೆಯೇ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಆಗಮಿಸಿ ಕೂಲಿಗೆ ಕರೆಯುವವರೊಂದಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರು ಇದ್ದಾರೆ. ಮೇಸ್ತ್ರಿಗಳ ಬಳಿ ಕೆಲಸ ಮಾಡುವವರೇ ಹೆಚ್ಚು. ಕೆಲಸದ ಸ್ಥಳದಲ್ಲಿ ಕೆಲವೊಮ್ಮೆ ಅಪಾಯಗಳು ಎದುರಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಅಂಗವೈಕಲ್ಯಕ್ಕೆ ಒಳಗಾದರೆ ನೋಂದಣಿ ಮಾಡಿಸಿರುವ ಕಾರ್ಮಿಕರಿಗೆ ಪಿಂಚಣಿ ದೊರೆಯುತ್ತದೆ. ಕೆಲಸದ ಸ್ಥಳಕ್ಕೆ ಬರುವಾಗ ಅಪಘಾತ ಸಂಭವಿಸಿದರೂ ಈ ಸೌಲಭ್ಯ ದೊರೆಯುತ್ತದೆ. ಜಿಲ್ಲೆಯಲ್ಲಿ ನಾಲ್ಕೈದು ಜನರು ಪಿಂಚಣಿ ಪಡೆದುಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಅನರ್ಹ ಕಾರ್ಮಿಕ ಕಾರ್ಡ್‌ಗಳನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ. ಹಳೆಯ ಕಾರ್ಡ್ ಮಾಡಿಸಿದ್ದವರಲ್ಲಿ ಅನರ್ಹರನ್ನು ಪತ್ತೆ ಮಾಡಲಾಗಿದೆ. ಈಗ ಅರ್ಜಿ ಸಲ್ಲಿಕೆ ವೇಳೆ ಪರಿಶೀಲನೆ ಮಾಡಿ ಅರ್ಹರಿಗೆ ಮಾತ್ರ ಸೌಲಭ್ಯ ದೊರೆಯುವಂತೆ ಮಾಡಲಾಗಿದೆ. ಸವಿತಾ, ಜಿಲ್ಲಾ ಕಾರ್ಮಿಕ ಅಧಿಕಾರಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net