

ಆರ್.ಕೃಷ್ಣ ಮೈಸೂರು
ಕೆಎಎಸ್ ದರ್ಜೆಯ ಅಧಿಕಾರಿಗಳಿಗೆ ಮೀಸಲಾಗಿರುವ ಮೈಸೂರು ನಗರಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ಹುದ್ದೆಯನ್ನು ವಿದ್ಯಾರ್ಹತೆ ವಿವಾದದಲ್ಲಿರುವ ವ್ಯಕ್ತಿ ಅಲಂಕರಿಸುವ ಮೂಲಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ಹುದ್ದೆಗೆ ತಕ್ಕ ವಿದ್ಯಾರ್ಹತೆ ಇಲ್ಲದಿದ್ದರೂ ತನ್ನ ಪ್ರಭಾವ ಬಳಸಿ ಮಹೇಶ್ ಈಗ ಪಾಲಿಕೆಯ ಉಪ ಆಯುಕ್ತ ಹುದ್ದೆ ಅಲಂಕರಿಸಿದ್ದಾರೆ. ನಿಯಮ ಮೀರಿ ಹುದ್ದೆ ನೀಡಿರುವ ಕುರಿತು ಸರ್ಕಾರಕ್ಕೆ ಸಾಕಷ್ಟು ದೂರುಗಳು ಹೋಗಿದ್ದರೂ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸರ್ಕಾರ ಬಡ್ತಿ ಮೇಲೆ ಬಡ್ತಿ ನೀಡುತ್ತಲೇ ಬರುತ್ತಿದೆ. ಇದಕ್ಕೆ ಪ್ರಭಾವಿ ‘ಕುಟುಂಬ ರಾಜಕಾರಣ’ದ ಶ್ರೀರಕ್ಷೆ ಇರುವುದೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ.
ನಗರದ ಅಭಿವೃದ್ಧಿಯ ಜವಾಬ್ದಾರಿಯುತ ಕೇಂದ್ರವಾಗಿರುವ ನಗರಪಾಲಿಕೆಯಲ್ಲಿ ಕಾರ್ಯನಿರ್ವಹಿಸಲು ಸೂಕ್ತ ವಿದ್ಯಾರ್ಹತೆ ಇರುವ ವ್ಯಕ್ತಿಯನ್ನು ನಿಯೋಜಿಸಬೇಕು ಎಂದು ಸರ್ಕಾರವೇ ರೂಪಿಸಿದ ನಿಯಮವನ್ನು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸರ್ಕಾರವೇ ಮುರಿದಿದೆ.
ನಿಯಮ ಉಲ್ಲಂಘನೆ: ಪಾಲಿಕೆಯ ಉಪ ಹಾಗೂ ಸಹಾಯಕ ಆಯುಕ್ತ ಹುದ್ದೆಗೆ ಕೆಎಎಸ್, ಎಎಂಎಂಎಸ್ ಕಮಿಷನರ್ ಗ್ರೇಡ್-2 ಅರ್ಹತೆ ಇರಬೇಕು. ಅಧೀಕ್ಷಕ ಇಂಜಿನಿಯರ್ ಹುದ್ದೆಗೆ ಯಾವುದೇ ವಿಷಯದಲ್ಲಿ ಬಿಇ ಇಂಜಿನಿಯರಿಂಗ್ ಪದವಿ ಪಡೆದಿರಬೇಕು ಎನ್ನುವ ನಿಯಮವಿದೆ.
ಆದರೆ, ವಿವಾದಿತ ವ್ಯಕ್ತಿ ಮಹೇಶ್ ಸರ್ಕಾರಕ್ಕೆ ಸಲ್ಲಿಸಿರುವ ತಮ್ಮ ವಿದ್ಯಾರ್ಹತೆ ಪ್ರಮಾಣ ಪತ್ರಗಳಲ್ಲಿ ಇದ್ಯಾವುದನ್ನೂ ಪೂರೈಸಿಲ್ಲ. 1983ರಲ್ಲಿ ಉತ್ತೀರ್ಣವಾಗಿರುವುದಾಗಿ ಎಸ್‌ಎಸ್‌ಎಲ್‌ಸಿ ಪ್ರಮಾಣ ಪತ್ರ, 1986ರಲ್ಲಿ ಡಿಪಾರ್ಟ್‌ಮೆಂಟ್ ಆಫ್ ಎಂಪ್ಲಾಯಿಮೆಂಟ್ ಆ್ಯಂಡ್ ಟ್ರೈನಿಂಗ್, ಎಲೆಕ್ಟ್ರಿಷಿಯನ್ ವಿಭಾಗದಲ್ಲಿ ಎರಡು ವರ್ಷ ಶಿಕ್ಷಣ ಪಡೆದಿದ್ದೇನೆ ಎಂದು ಪ್ರಾವಿಷನಲ್ ಟ್ರೇಡ್ ಸರ್ಟಿಫಿಕೇಟ್, ಮೇಲುಕೋಟೆಯ ಉದ್ಯಮ ತರಬೇತಿ ಸಂಸ್ಥೆ ನೀಡಿರುವ ಪ್ರಮಾಣಪತ್ರ ಸಲ್ಲಿಸಿದ್ದಾರೆ.
2005ರಲ್ಲಿ ಮುಂಬಯಿನ ಇನ್ಸಿಟಿಟ್ಯೂಷನ್ ಆಫ್ ಮೆಕಾನಿಕಲ್ ಇಂಜಿನಿಯರ್ಸ್ (ಭಾಗ-1)ನಿಂದ ಪಡೆದಿರುವ ಸರ್ಟಿಫಿಕೇಟ್ ನೀಡಿದ್ದಾರೆ. ಬಹುಪಾಲು ಪ್ರಮಾಣ ಪತ್ರಗಳು ಸರ್ಟಿಫಿಕೇಟ್ ಆಗಿವೆಯೇ ವಿನಃ ಪದವಿ ಅಥವಾ ಪದವಿಗೆ ಸರಿಸಮಾನ ಪ್ರಮಾಣಪತ್ರಗಳಲ್ಲ ಎನ್ನುವ ವಾದವಿದೆ.
ಚಿತಾಗಾರದಿಂದ ಉಪ ಆಯುಕ್ತರವರೆಗೆ:
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಶವಗಳನ್ನು ಸುಡುವ ನೌಕರನಾಗಿ ನಗರಪಾಲಿಕೆಯಲ್ಲಿ ಹುದ್ದೆ ಗಿಟ್ಟಿಸಿಕೊಂಡ ಮಹೇಶ್, ತನ್ನ ರಾಜಕೀಯ ಪ್ರಭಾವ ಬಳಸಿ ಇಂಜಿನಿಯರ್ ಹುದ್ದೆಗೆ ಬಡ್ತಿ ಹೊಂದಿದರು.
ಕನಿಷ್ಠ 3 ವರ್ಷದ ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್ ಹಾಗೂ ನಿಗದಿತ ಇಲಾಖೆಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಆದರೆ, ಯಾವುದೋ ಖಾಸಗಿ ಸಂಸ್ಥೆ ನೀಡಿದ ಸರ್ಟಿಫಿಕೇಟ್ ನೀಡಿ ಇಂಜಿನಿಯರ್ ಹುದ್ದೆ ಅಲಂಕರಿಸಿದ್ದಾರೆ. ಇದಾದ ಬಳಿಕ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕಾರ್ಯಪಾಲಕ ಇಂಜಿನಿಯರ್, ಅಧೀಕ್ಷಕ ಇಂಜಿನಿಯರ್ ಹುದ್ದೆಗಳನ್ನು ನಿಯಮಬಾಹಿರವಾಗಿಯೇ ಅಲಂಕರಿಸಿದ್ದ ಇವರು, ಕೆಎಎಸ್, ಎಎಂಎಂಎಸ್ ಕಮಿಷನರ್ ಗ್ರೇಡ್-2 ಅರ್ಹತೆ ಇರಬೇಕಾದ ನಗರಪಾಲಿಕೆ ಸಹಾಯಕ ಆಯುಕ್ತ ಹುದ್ದೆ ಅಲಂಕರಿಸಿದ್ದು, ಈಗ ಆಯುಕ್ತರ ನಂತರ ಸ್ಥಾನ ಉಪಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವೇಳೆ ಸಾಕಷ್ಟು ದೂರುಗಳು ಕೇಳಿ ಬಂದರೂ ಅದ್ಯಾವುದನ್ನು ಲೆಕ್ಕಿಸದೆ ಸರ್ಕಾರ ಈಗ ಜವಾಬ್ದಾರಿ ಇರುವ ಉಪ ಆಯುಕ್ತ (ಅಭಿವೃದ್ಧಿ) ಹುದ್ದೆಯನ್ನೇ ನೀಡಿದೆ. ಮೈಸೂರಿನಲ್ಲಿಯೇ ಕಾರ್ಯನಿರ್ವಹಣೆ: ನಗರಪಾಲಿಕೆಯಲ್ಲಿ ಸ್ಮಶಾನದ ನೌಕರರಾಗಿ ಕಾರ್ಯ ಆರಂಭಿಸಿದ ಮಹೇಶ್ ಮೈಸೂರು ನಗರಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಯೇ ಇಷ್ಟು ವರ್ಷ ಸವೆಸಿದ್ದಾರೆ.
ನೋಟಿಸ್‌ಗಷ್ಟೇ ಸೀಮಿತ
ಅರ್ಹ ಹುದ್ದೆಗೆ ತಕ್ಕ ವಿದ್ಯಾರ್ಹತೆ ಇಲ್ಲ ಎನ್ನುವುದು ನಗರಾಭಿವೃದ್ಧಿ ಇಲಾಖೆ ಗಮನಕ್ಕೆ ಬಂದಿದ್ದರೂ ಇಲಾಖೆ ಅಧಿಕಾರಿಗಳು ನೋಟಿಸ್ ನೀಡುವುದಕ್ಕೆ ಮಾತ್ರ ಸೀಮಿತಗೊಂಡಿದ್ದಾರೆ. ಯಾರಾದರೂ ಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳು, ಆರ್‌ಟಿಐ ಕಾರ್ಯಕರ್ತರು ದೂರು ನೀಡಿದ್ದಾಗ ಇಲಾಖೆ ಉನ್ನತ ಅಧಿಕಾರಿಗಳು ನೋಟಿಸ್ ನೀಡಿ ಸುಮ್ಮನಾಗುತ್ತಾರೆ.
ಈಗ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಎಫ್‌ಐಆರ್ ದಾಖಲಿಸಿ ಅಧಿಕಾರಿಗಳಿಗೂ ದೂರು ನೀಡಿದ್ದಾರೆ. ಇದರ ಅನ್ವಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ನೀಡಿದ ನೋಟಿಸ್, ಎಫ್‌ಐಆರ್ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು ಮಹೇಶ್ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಇನ್ನೇನು ನಿವೃತ್ತಿ ಅಂಚಿಗೆ ಬಂದಿದ್ದು, ಪ್ರಭಾವ ಬಳಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸರ್ಟಿಫಿಕೇಟ್ ಕೇಂದ್ರವೇ ಅಮಾನತು
ಮತ್ತೊಂದು ವಿಪರ್ಯಾಸ ಎಂದರೆ ಡಿಪ್ಲೊಮಾಗೆ ಸರಿಸಮಾನ ಎಂದು ಮಹೇಶ್ ನೀಡಿರುವ ಮುಂಬಯಿ ಮೂಲಕದ ಇನ್ಸಿಟಿಟ್ಯೂಷನ್ ಆಫ್ ಮೆಕಾನಿಕಲ್ ಇಂಜಿನಿಯರ್ಸ್ (ಇಂಡಿಯಾ) ಸಂಸ್ಥೆಯನ್ನೇ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ 2001ರ ಮಾರ್ಚ್ 23ರಂದು ಅಮಾನತುಗೊಳಿಸಿದೆ. ಹೀಗಾಗಿ ಈ ಸಂಸ್ಥೆ ನೀಡುವ ಪ್ರಮಾಣ ಪತ್ರ ಡಿಪ್ಲೊಮಾ ಇನ್ ಇಂಜಿನಿಯರಿಂಗ್‌ಗೆ ವಿದ್ಯಾರ್ಹತೆಗೆ ಸಮಾನಾಂತರವೇ ಎನ್ನುವ ಮಾಹಿತಿ ಲಭ್ಯವಿಲ್ಲ ಎಂದು ರಾಜ್ಯ ತಾಂತ್ರಿಕ ಪರೀಕ್ಷಾ ಮಂಡಳಿ ನಗರಾಭಿವೃದ್ಧಿ ಇಲಾಖೆಗೆ ಪತ್ರದಲ್ಲಿ ಸ್ಪಷ್ಟನೆ ನೀಡಿದೆ.
ಸರ್ಕಾರಕ್ಕೆ ಬಿಟ್ಟ ನಿರ್ಧಾರ
ಹುದ್ದೆಗಳಿಗೆ ನೇಮಕ ಮಾಡುವುದು ಸರ್ಕಾರಕ್ಕೆ ಬಿಟ್ಟ ವಿಷಯ. ಹುದ್ದೆಗಳಿಗೆ ಯಾವ ಅರ್ಹತೆ ಇರಬೇಕು ಎನ್ನುವ ನಿಯಮವನ್ನು ಸರ್ಕಾರವೇ ಮಾಡಿರುವುದರಿಂದ ಅದರಂತೆ ನೇಮಕ ಮಾಡಬೇಕು. ಮಹೇಶ್ ಅವರ ವಿಷಯವನ್ನು ನಗರಾಭಿವೃದ್ಧಿ ಇಲಾಖೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದೆಯೇ ವಿನಃ ಅದು ಆಯುಕ್ತ ವ್ಯಾಪ್ತಿಗೆ ಬರುವುದಿಲ್ಲ.
ಲಕ್ಷ್ಮೀಕಾಂತ ರೆಡ್ಡಿ ಆಯುಕ್ತರು, ನಗರಪಾಲಿಕೆ