

ನವಲಗುಂದ: ಪಟ್ಟಣಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ದೀಪಾ ಜೋಳನ್ ಮಿನಿವಿಧಾನಸೌಧದಲ್ಲಿ ಆಹಾರ, ಕಂದಾಯ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸಿದರು.
ತಾಲೂಕಿನ ಆರೇಕುರಹಟ್ಟಿ, ಯಮನೂರು ಗ್ರಾಮದಲ್ಲಿ ಅಂಗನವಾಡಿ ಕೇಂದ್ರ, ಸರ್ಕಾರಿ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಲ್ಲಿ ಮಕ್ಕಳ ವಿದ್ಯಾಭ್ಯಾಸ, ಪೋಷಣೆ, ಕಟ್ಟಡ ಪರಿಶೀಲಿಸಿದರು.
ನವಲಗುಂದದಲ್ಲಿ ಆಹಾರ ಇಲಾಖೆ ಅಧಿಕಾರಿ ರಾಜು ದೊಡ್ಡಮನಿ, ಸಿಬ್ಬಂದಿಯಿಂದ ಬಿಪಿಎಲ್, ಎಪಿಎಲ್ ಕಾರ್ಡ್ಗಾಗಿ ಅರ್ಜಿ, ದಾಖಲೆಗಳನ್ನು ಸ್ವೀಕರಿಸುವ ವ್ಯವಸ್ಥೆ ಕುರಿತು ಮಾಹಿತಿ ಪಡೆದರು. ಪಡಿತರ ವಿತರಣೆಯಲ್ಲಿ ಲೋಪ ಕಂಡುಬರದಂತೆ ನೋಡಿಕೊಳ್ಳಬೇಕು. ಅನರ್ಹರ ಪಡಿತರ ಚೀಟಿ ಗುರುತಿಸಿ ರದ್ದುಗೊಳಿಸಿ ಸರ್ಕಾರ ಸುತ್ತೋಲೆ ಪ್ರಕಾರ ಹೊಸದಾಗಿ ಪಡಿತರ ಚೀಟಿಗಳನ್ನು ನೀಡಬೇಕು ಎಂದು ಸೂಚಿಸಿದರು.
ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ಅಂಕಿಸಂಖ್ಯೆ ವಿಭಾಗದಲ್ಲಿಡಬೇಡಿ. ರೆಕಾರ್ಡ್ ಕಚೇರಿಗೆ ವರ್ಗಾಯಿಸಿ ಎಂದು ತಹಸೀಲ್ದಾರ್ ನವೀನ ಹುಲ್ಲೂರಗೆ ಸೂಚಿಸಿದರು. ಬಳಿಕ ಭೂಮಿ ಕೇಂದ್ರ ವಿಭಾಗಕ್ಕೆ ತೆರಳಿದ ಜಿಲ್ಲಾಧಿಕಾರಿ ಖಾತೆ ಬದಲಾವಣೆ, ವಾರಸಾ, ಪೋಡಿ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ಸರ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರಿ ಯೋಜನೆ ಕಾರ್ಯಗತಗೊಳಿಸುವಲ್ಲಿ ವಿಳಂಬ ಧೋರಣೆ, ನಿರ್ಲಕ್ಷ್ಯತನ ತೋರಬೇಡಿ ರಾಜ್ಯದ 30 ಜಿಲ್ಲೆಗಳಲ್ಲಿ ಧಾರಾವಾಡ ಹಿಂದೆ ಉಳಿಯದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಶಿರಸ್ತೇದಾರ್ ಮಂಜುನಾಥ್ ಅಮವಾಸೆ, ಗ್ರೇಡ್-2 ತಹಸೀಲ್ದಾರ್, ಖಜಾನೆ, ಸಬ್ರಜಿಸ್ಟರ್, ಬಿಇಒ, ಪಿಡಬ್ಲ್ಯುಡಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮಿನಿ ವಿಧಾನಸೌಧದಲ್ಲಿನ ತಹಸೀಲ್ದಾರ್ ವಸತಿಗೃಹ ಸುತ್ತ ಕಸ ಬೆಳೆದಿದ್ದನ್ನು ಕಂಡು ಜಿಲ್ಲಾಧಿಕಾರಿ ಆಕ್ರೋಶಗೊಂಡರು. ಆವರಣದಲ್ಲಿ ಎಲ್ಲ ಸಿಬ್ಬಂದಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.
ತಾಲೂಕಿನ ಹನಸಿ ಗ್ರಾಮದ ಬಸಯ್ಯ ಬೆಟಸೂರ, ಅಮರಗೋಳ ನೀಲಪ್ಪ ಮಾದರ ಸೇರಿ ಹಲವರು ನೆರೆಹಾವಳಿ, ಅತಿವೃಷ್ಟಿಯಿಂದ ಮನೆ ಕುಸಿದಿದ್ದರೂ ಸರ್ಕಾರದಿಂದ ಪರಿಹಾರ ಬಂದಿಲ್ಲ. ಅಧಿಕಾರಿಗಳು ನಿಜವಾದ ಫಲಾನುಭವಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳಲ್ಲಿ ದೂರಿದರು. ಮತೊಮ್ಮೆ ಪರಿಶೀಲಿಸಿ ಲೋಪದೋಷ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನವಲಗುಂದದಲ್ಲಿ ಭೂಮಿ ಕೇಂದ್ರ ಸಂಖ್ಯೆ 3 ಅನ್ನು ಮರುಆರಂಭಿಸಬೇಕೆಂದು ಸ್ಥಳೀಯ ರೈತ ಶಂಕ್ರು ತೋಟದ, ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸಂಚಾಲಕ ನಿಂಗಪ್ಪ ಕೆಳಗೇರಿ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮನೆ ಉತಾರಕ್ಕಾಗಿ ಪುರಸಭೆಗೆ ಅಲೆದಾಡುವ ಪರಿಸ್ಥಿತಿ ಇದೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿ ತಿರಕಮ್ಮನವರ ಅವರನ್ನು ವರ್ಗಾವಣೆಗೊಳಿಸಬೇಕು ಎಂದು ಪುರಸಭೆ ಸದಸ್ಯ ಜೀವನ ಪವಾರ ದೂರಿದರು. ಅದಕ್ಕೆ ಜಿಲ್ಲಾಧಿಕಾರಿಗಳು ಸ್ಪಂದಿಸುವುದಾಗಿ ಹೇಳಿ ಧಾರವಾಡಕ್ಕೆ ತೆರಳಿದರು.