ಅನರ್ಹ ಕಾರ್ಮಿಕರ ಪತ್ತೆಗೆ ಆಧಾರ್‌ಅಸ್ತ್ರ!

aadharcardfile16590031303691663755772893_1676631411480_1676631431716_1676631431716
Published on

ಮಂಜುನಾಥ ಕೋಳಿಗುಡ್ಡ ಬೆಳಗಾವಿ

ಕಾರ್ಮಿಕರ ಕಲ್ಯಾಣ ಯೋಜನೆಗಳ ದುರ್ಬಳಕೆ, ಅನರ್ಹ ಕಾರ್ಮಿಕರ ನೋಂದಣಿ ತಡೆಗಟ್ಟಲು ನಾನಾ ರೀತಿಯ ಕಸರತ್ತು ನಡೆಸುತ್ತಿರುವ ಕಾರ್ಮಿಕರ ಇಲಾಖೆ ಇದೀಗ ‘ಕಾರ್ಮಿಕರ ಗುರುತಿನ ಚೀಟಿ ಸಂಖ್ಯೆ’ಗೆ ಆಧಾರ್ ಜೋಡಣೆ ಮಾಡಲು ಮುಂದಾಗಿದೆ.

ರಾಜ್ಯದಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನೋಂದಾಯಿತ ಕಾರ್ಮಿಕರಿಗೆ ಅಂದಾಜು 53 ಲಕ್ಷ ಕಾರ್ಮಿಕ ಕಾರ್ಡ್ ವಿತರಿಸಿದೆ. ಆದರೆ, ಸಾಮಾಜಿಕ ಲೆಕ್ಕ ಪರಿಶೋಧನೆ ವೇಳೆ ಶೇ.35 ಕಾರ್ಮಿಕ ಕಾರ್ಡ್‌ಗಳು ಅನರ್ಹರ ಬಳಿ ಪತ್ತೆಯಾಗಿವೆ. ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯ ಎಲ್ಲ ಸೌಲಭ್ಯಗಳು ಅನರ್ಹರ ಪಾಲಾಗಿರುವುದು ಬೆಳಕಿಗೆ ಬಂದಿದ್ದರಿಂದ ಅನರ್ಹರ ಪತ್ತೆಗೆ ನಿರ್ಧರಿಸಿದೆ.

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಆದರೆ, ಇದರಲ್ಲಿ ಅರ್ಹ ಮತ್ತು ಅನರ್ಹ ಕಾರ್ಮಿಕರು ಯಾರೆಂಬುದು ಗೊತ್ತಾಗುತ್ತಿಲ್ಲ. ಕೈಗಾರಿಕೆ, ವಾಣಿಜ್ಯ ಸಂಸ್ಥೆಗಳಲ್ಲಿ ಕಾರ್ಮಿಕರ ವೇತನ ಮಾತ್ರ ಬ್ಯಾಂಕ್ ಖಾತೆಗಳಿಗೆ ಜಮೆ ಆಗುತ್ತಿದೆ. ಆದರೆ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕೂಲಿ ಹಣ ಬ್ಯಾಂಕ್ ಖಾತೆಗೆ ಜಮೆ ಆಗದಿರುವುದನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ. ಕಾರ್ಮಿಕರನ್ನು ಪತ್ತೆ ಹಚ್ಚಲು ಕಾರ್ಮಿಕ ಗುರುತಿನ ಚೀಟಿಗಳ ಸಂಖ್ಯೆಗೆ ಆಧಾರ್ ಜೋಡಣೆ ಮಾಡಿದರೆ ಕಾರ್ಮಿಕ ಸಂಖ್ಯೆ ಗೊತ್ತಾಗುತ್ತದೆ. ಆಗ ಪ್ರತಿ ವರ್ಷ ಕಾರ್ಡ್ ನವೀಕರಣ ಮಾಡಿಕೊಳ್ಳಲು ಅನುಕೂಲವಾಗಲಿದೆ.

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ 58 ಲಕ್ಷ ಕಾರ್ಮಿಕರಿದ್ದು, ಕಟ್ಟಡ, ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆ, ಹೋಟೆಲ್ ಸೇರಿ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಆರೋಗ್ಯ, ಮಕ್ಕಳಿಗೆ ಶಿಕ್ಷಣ, ವಸತಿ ಸೌಲಭ್ಯ ಸೇರಿ ವಿವಿಧ ಕಲ್ಯಾಣ ಕಾರ್ಯಕ್ರಮಕ್ಕಾಗಿ ಸರ್ಕಾರಗಳು ಪ್ರತಿ ವರ್ಷ ನೂರಾರು ಕೋಟಿ ರೂ. ಅನುದಾನ ಮೀಸಲಿಡುತ್ತವೆ. ಆದರೆ, ಬಹಳಷ್ಟು ಅರ್ಹ ಕಾರ್ಮಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಕೆಲವೆಡೆ ಮಂಡಳಿಯಲ್ಲಿ ನೋಂದಣಿ ಕೂಡ ಮಾಡಿಕೊಳ್ಳದಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಕೆಲವರು ಸರ್ಕಾರಿ ಸೌಲಭ್ಯ ಪಡೆದ ಬಳಿಕ ಕಾರ್ಡ್ ನವೀಕರಣ ಮಾಡಿಲ್ಲ. ಬಹುತೇಕರು ಪದೇ ಪದೆ ಮೊಬೈಲ್ ನಂಬರ್ ಬದಲಾಯಿಸುತ್ತಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net