ಅನಧಿಕೃತವಾಗಿ ಮಕ್ಕಳ ದತ್ತು ಪಡೆಯುವುದು ಶಿಕ್ಷಾರ್ಹ ಅಪರಾಧ

ಅನಧಿಕೃತವಾಗಿ ಮಕ್ಕಳ ದತ್ತು ಪಡೆಯುವುದು ಶಿಕ್ಷಾರ್ಹ ಅಪರಾಧ
Published on

ಹಾಸನ: ಅನಧಿಕೃತವಾಗಿ ಮಕ್ಕಳ ದತ್ತು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಒಳ್ಳೆಯ ಉದ್ದೇಶಕ್ಕೆ ಮಕ್ಕಳನ್ನು ಪಡೆದಿದ್ದರೂ ಸಹ ಮಕ್ಕಳ ಮಾರಾಟ ಎಂದು ಪರಿಗಣಿಸಿ ತಪ್ಪಿತಸ್ಥರಿಗೆ 5 ವರ್ಷ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕಾಂತರಾಜು ಹೇಳಿದರು.

ನಗರದ ಹೊರವಲಯದ ಕಾಮಧೇನು ವೃದ್ಧಾಶ್ರಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, 50 ವರ್ಷದೊಳಗಿನ ದಂಪತಿಗೆ 2 ವರ್ಷ ವಯೋಮಿತಿ ಮೀರಿದ ಮಕ್ಕಳನ್ನು ಕಾನೂನು ಪ್ರಕಾರ ದತ್ತು ನೀಡಲಾಗುತ್ತದೆ. ಪುರುಷ ಪೋಷಕರಿಗೆ ಹೆಣ್ಣು ಮಕ್ಕಳನ್ನು ದತ್ತು ಕೊಡಲು ಅವಕಾಶವಿಲ್ಲ. ಅಂತವರು ಗಂಡು ಮಕ್ಕಳನ್ನು ಮಾತ್ರ ದತ್ತು ಪಡೆಯಬಹುದು. ದತ್ತು ಪ್ರಕ್ರಿಯೆ ಹಂತದಲ್ಲಿ ಸಾಕಷ್ಟು ನಿಯಮಗಳನ್ನು ಪಾಲಿಸಬೇಕಿದ್ದು ಪ್ರಕ್ರಿಯೆ ಮುಗಿದ ಬಳಿಕ ತನಿಖೆಗಾಗಿ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ. ಮಗುವನ್ನು ದತ್ತು ಕೊಡಬಹುದು ಎಂದು ನಮ್ಮ ನೌಕರರು ದೃಢಪಡಿಸಿದ ಮೇಲಷ್ಟೆ ಮುಂದಿನ ಪ್ರಕ್ರಿಯೆ ನಡೆಯುತ್ತವೆ ಎಂದು ವಿವರಿಸಿದರು.

ಕಾಮಧೇನು ಮತ್ತು ತವರು ಚಾರಿಟೇಬಲ್ ಟ್ರಸ್ಟ್‌ನಿಂದ 21 ಮಕ್ಕಳನ್ನು ದತ್ತು ಪಡೆದಿರುವುದು ಸಂತೋಷದ ವಿಷಯ. ಮಕ್ಕಳನ್ನು ಬೆಳೆಸಲು ಇಚ್ಛಿಸುವವರು ಅಡ್ಡದಾರಿ ಹಿಡಿಯದೆ ಕಾನೂನು ಪ್ರಕಾರ ದತ್ತು ಪಡೆದರೆ ಎಲ್ಲರಿಗೂ ಅನುಕೂಲ. ಅನ್ಯ ಮಾರ್ಗದಲ್ಲಿ ಏನಾದರೂ ಆಸ್ಪತ್ರೆ ಸಿಬ್ಬಂದಿ ಭಾಗಿಯಾದರೆ ಅವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದರು.

ಕಾಮಧೇನು ವೃದ್ಧಾಶ್ರಮ ಅಧ್ಯಕ್ಷ ಎಂ.ಮಾಧವ ಶಣ್ಯೆ, ಸಂಪನ್ಮೂಲ ವ್ಯಕ್ತಿ ಅನುಪಮ, ಗೌರವಾಧ್ಯಕ್ಷ ಮುತ್ತತ್ತಿ ರಾಜಣ್ಣ, ನಿರ್ದೇಶಕರಾದ ಎನ್.ಎಸ್.ಕೃಷ್ಣ ಅಯ್ಯಂಗಾರ್, ಶಬ್ಬೀರ್ ಅಹಮದ್, ಆನಂದ ಬಾಗಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net