

ಹೊಳೆನರಸೀಪುರ : ತಾಲೂಕಿನ ಶ್ರವಣೂರು ಗ್ರಾಮದಲ್ಲಿ ಸಂಗೋಳಿ ರಾಯಣ್ಣ ವೃತ್ತದ ತೆರವು ಕಾರ್ಯಾಚರಣೆ ನಡೆಸಿದ್ದರಿಂದ ಅಕ್ರೋಶಗೊಂಡಿರುವ ಯುವಕರು, ಅಲ್ಲಿನ ಬಿಗುವಿನ ವಾತಾವರಣದಿಂದಾಗಿ ಹೆಚ್ಚಿನ ಪೊಲೀಸ್ ಪಹರೆ ಹಾಕಲಾಗಿದೆ.
ಶ್ರವಣೂರು ಗ್ರಾಮದ ಸಂಗೋಳಿ ರಾಯಣ್ಣ ವೃತ್ತ ತೆರವು ವಿಚಾರವು ರಾಜಕೀಯ ತಿರುವು ಪಡೆದಿದ್ದ ಕಾರಣ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಉಪಸ್ಥಿತಿಯಲ್ಲಿ ೪೦೦ ಪೊಲೀಸ್ ಡಿಎಆರ್ ನಾಲ್ಕು ತುಕಡಿ, ಇಬ್ಬರು ಡಿವೈಎಸ್‌ಪಿ, ೧೦ ವೃತ್ತ ನಿರೀಕ್ಷಕರು, ೨೦ ಪಿಎಸ್ಸೆöÊ ನೇತೃತ್ವದ ಪೊಲೀಸ್ ಸರ್ಪ ಗಾವಲಿನಲ್ಲಿ ಪ್ರತಿಮೆ ತೆರವು ಗೊಳಿಸಲಾಗಿದೆ. ಪೊಲೀಸರ ಸರ್ಪಗಾವಲಿನ ಕಾರಣ ಶ್ರವಣೂರಿಗೆ ಪ್ರವೇಶಿಸಲಾಗದೇ ಆಕ್ರೋಶದಿಂದ ಭಾನುವಾರ ಬೆಳಗ್ಗೆಯಿಂದ ಗ್ರಾಮದ ಪ್ರವೇಶದ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಶ್ರವಣೂರು ಗ್ರಾಮದಲ್ಲಿ ಕೆಲವು ಯುವಕರು ಕಾನೂನಿನ ಅರಿವು ಮತ್ತು ಮುಂದಿನ ಪರಿಣಾಮಗಳ ಪರಿವೇ ಇಲ್ಲದೇ ಡಿಸೆಂಬರ್ ೪ ರ ಭಾನುವಾರ ಮಧ್ಯರಾತ್ರಿ ಅನಧಿಕೃತವಾಗಿ ದಿಡೀರನೆ ಸಂಗೋಳಿ ರಾಯಣ್ಣ ವೃತ್ತವನ್ನು ನಿರ್ಮಿಸಿದ್ದಾರೆ. ನಂತರದ ಬೆಳವಣಿಗೆಯಲ್ಲಿ ಕುರುಬ ಜನಾಂಗದ ಕೆಲವು ಜೆಡಿಎಸ್ ಮುಖಂಡರು ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ, ಕಿಡಿಗೇಡಿಗಳು ಎಂಬ ಪದ ಬಳಕೆಯಿಂದ ಆಕ್ರೋಶಗೊಂಡಿರುವ ಯುವಕರ ಮನದಲ್ಲಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿ ಯಾವುದೇ ಕಾರಣಕ್ಕೂ ವೃತ್ತ ತೆರವಿಗೆ ಬಿಡೊಲ್ಲವೆಂದು ಸಂಗೋಳಿ ರಾಯಣ್ಣ ವೃತ್ತದ ರಕ್ಷಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಕುರುಬ ಜನಾಂಗದ ಯುವಕರು ಇದ್ಯಾವುಕ್ಕೂ ಸೊಪ್ಪು ಹಾಕದೇ ಗ್ರಾಮದಲ್ಲಿ ಹಗಲು ರಾತ್ರಿ ಎನ್ನದೇ ಟೊಂಕಕಟ್ಟಿ ನಿಂತಿದ್ದರು. ಆದರೆ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ನಿರ್ಮಿಸಿ ಕಾನೂನು ಉಲಂಘಿಸಲಾಗಿದೆ ಮತ್ತು ವೃತ್ತ ತೆರವುಗೊಳಿಸಲು ಜನಾಂಗದ ಹಿರಿಯರು ಒಪ್ಪಿದ್ದಾರೆ ಎಂದು ಭಾನುವಾರ ಮುಂಜಾನೆ ಖಾಕಿ ಸರ್ಪಗಾವಲಿನಲ್ಲಿ ಕಾಗಿನೆಲೆ ಕನಕಗುರು ಪೀಠದ ಶ್ರೀಗಳು ಪೂಜೆ ಸಲ್ಲಿಸಿದ ನಂತರ ಸಂಗೋಳಿ ರಾಯಣ್ಣ ವೃತ್ತ ತೆರವು ಗೊಳಿಸಲಾಗಿದೆ. ಇದರಿಂದಾಗಿ ಹಿರಿಯರ ನಡೆಯಿಂದ ಆಕ್ರೋಶಗೊಂಡಿರುವ ಯುವಕರಲ್ಲಿ ಸ್ವಾಭಿಮಾನಕ್ಕೆ ಪೆಟ್ಟುಬಿದ್ದಿದೆ ಎಂದು ಅಸಹನೆ ವ್ಯಕ್ತವಾಗಿದೆ. ಕೆಪಿಸಿಸಿ ಸದಸ್ಯ ಹಾಗೂ ಅಹಿಂದ ಮುಖಂಡ ಶೇಷೇಗೌಡ ಮಾತನಾಡಿ ಒಂದು ಪಕ್ಷದ ರಾಜಕೀಯ ಮುಖಂಡನ ಹೇಳಿಕೆಯಿಂದ ನೀವುಗಳು ಈ ರೀತಿ ನಡೆದುಕೊಂಡಿದ್ದೀರಿ, ಆದರೆ ಸಂಗೋಳಿ ರಾಯಣ್ಣ ಘರ್ಜನೆ ರಾಜ್ಯಾಧ್ಯಕ್ಷ ರಾಜಶೇಖರ್ ದೊಡ್ಡಯ್ಯ ಕರೆ ನೀಡಿರುವಂತೆ ರಾಜ್ಯಾದ್ಯಾಂತ ಜೆಡಿಎಸ್ ಬಹಿಷ್ಕರಿಸುವ ಜತೆಗೆ ಹೋರಾಟವನ್ನು ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ. ರಾಜ್ಯದಲ್ಲಿ ಇದೇ ರೀತಿ ಅನಧಿಕೃತವಾಗಿ ನಿರ್ಮಿಸಲಾದ ವೃತ್ತಗಳನ್ನು ತೆರವುಗೊಳಿಸಿದ್ದಾರಾ ಎಂದು ಪ್ರಶ್ನಿಸಿ, ಹುತಾತ್ಮ ದೇಶ ಪ್ರೇಮಿ ಸಂಗೋಳಿ ರಾಯಣ್ಣ ವೃತ್ತದ ವಿಚಾರದಲ್ಲಿ ನಿಮ್ಮಗಳ ನಡೆ ಸರಿಯಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಶ್ರಾವಣೂರು ಗ್ರಾಮದಲ್ಲಿ ಅನಧಿಕೃತ ಸಂಗೋಳಿ ರಾಯಣ್ಣ ವೃತ್ತದ ತೆರವು ವಿಚಾರದಲ್ಲಿ ಭಾನುವಾರ ಬೆಳಗ್ಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ ಶ್ರಾವಣೂರು ಗ್ರಾಮದಲ್ಲಿ ಕಾಗಿನೆಲೆ ಗುರುಪೀಠದ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಗ್ರಾಮದ ಸಾಮರಸ್ಯದ ಜೀವನಕ್ಕೆ ದಕ್ಕೆಯಾಗದಂತೆ ಜತೆಗೆ ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ಗೊಂದಲದ ವಾತಾವರಣ ನಿರ್ಮೂಲನೆಗಾಗಿ ಸಮಾಜದ ಹಿರಿಯರ ಒಪ್ಪಗೆ ಪಡೆದು ಅನಧಿಕೃತವಾಗಿ ನಿರ್ಮಿಸಿದ್ದ ಸಂಗೋಳಿ ರಾಯಣ್ಣ ವೃತ್ತ ತೆರವುಗೊಳಿಸಲಾಗಿದೆ ಎಂದರು. ಮುಂದಿನ ದಿನಳಲ್ಲಿ ನಿಯಮಾವಳಿ ಅನುಸಾರ ಗ್ರಾ.ಪಂ. ವತಿಯಂದ ಸಂಗೋಳಿ ರಾಯಣ್ಣ ವೃತ್ತ ಎಂದು ನಾಮಕರಣ ಮಾಡಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೆ.ಆರ್.ನಗರ ಕನಕ ಗುರುಪೀಠ ಶಾಖಾ ಮಠದ ಶ್ರೀ ಶಿವಾನಂದಪೂರಿ ಸ್ವಾಮೀಜಿಗಳು ಮಾತನಾಡಿ ಸಂಗೋಳಿರಾಯಣ್ಣ ವೃತ್ತವನ್ನು ಯುವಕರು ನಿರ್ಮಿಸಿ ತಪ್ಪು ಮಾಡಿದ್ದು, ಇದನ್ನ ಸರಿ ಪಡಿಸುವ ಅವಕಾಶವಿದೆ. ಸಾಮಾನ್ಯ ಜನರಿಗೆ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಅರಿವು ಇಲ್ಲದ ಕಾರಣದಿಂದ ಭಕ್ತರು, ಸಂಗೋಳಿ ರಾಯಣ್ಣ ಅಭಿಮಾನಿಗಳು ಮತ್ತು ಸಂಘದ ಸದಸ್ಯರಿಗೆ ಚೆನ್ನಾಗಿ ಮನವರಿಕೆ ಮಾಡಲಾಗಿದೆ. ತಿಳಿಗೇಡಿಗಳು ತಂಟೆ ಮಾಡಬಾರದು ಎಂಬ ಉದ್ದೇಶದಿಂದ ಪೊಲೀಸ್ ಪಹರೆ ಹಾಕಲಾಗಿದೆ. ಈ ವೃತ್ತಕ್ಕೆ ಸಂಗೋಳಿ ರಾಯಣ್ಣ ವೃತ್ತವೆಂದು ನಾಮಕರಣ ಮಾಡಲಾಗುತ್ತದೆ, ಮುಂದಿನ ದಿನಗಳಲ್ಲಿ ಅನುಕೂಲ ಅನಾನೂಕೂಲ ಪರಿಶೀಲಿಸಿ ಸಂಗೋಳಿರಾಯಣ್ಣ ಪ್ರತಿಮೆ ಸ್ಥಾಪನೆಯೂ ಮಾಡಬಹುದು ಎಂದು ತಿಳಿಸಿ, ಸದ್ಯದ ಪರಿಸ್ಥಿತಿಯಲ್ಲಿ ಬಿಕ್ಕಟ್ಟನ್ನು ಪರಿಹರಿಸಿ ಎಂದು ತಿಳಿಸಿದ ಹಿನ್ನಲೆಯಲ್ಲಿ ವೃತ್ತ ತೆರವಿಗೆ ಒಪ್ಪಿಗೆ ಸೂಚಿಸಿದ್ದೇವೆ ಎಂದರು.