ಅನಧಿಕೃತ ಶಾಲೆ ಪತ್ತೆಗೆ ಟೀಮ್

sureshkumar visit
Published on

ವಿಜಯವಾಣಿ ಸುದ್ದಿಜಾಲ ಬೀದರ್

ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿರುವ ಅನಧಿಕೃತ ಶಾಲೆಗಳನ್ನು ಪತ್ತೆ ಹಚ್ಚಿ, ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶಕುಮಾರ ಹೇಳಿದರು.

ಜಿಲ್ಲೆಯ ವಿವಿಧ ಶಾಲೆಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸುದೀರ್ಘ ಅವಧಿಯಿಂದ ಇಲ್ಲಿ ಅನಧಿಕೃತ ಶಾಲೆಗಳು ನಡೆಯುತ್ತಿರುವುದು ಗೊತ್ತಾಗಿದೆ. ಇಂತಹ ಶಾಲೆಗಳು ಎಷ್ಟಿವೆ ಎಂಬುದು ನಿಖರವಾಗಿ ಪತ್ತೆಗೆ ಕಲಬುರಗಿ ಅಪರ ಶಿಕ್ಷಣ ಆಯುಕ್ತರ ನೇತೃತ್ವದಲ್ಲಿ ತಂಡ ರಚಿಸಲಾಗುವುದು. ಒಂದು ತಿಂಗಳೊಳಗೆ ಈ ಶಾಲೆಗಳ ಪಟ್ಟಿ ಸಮೇತ ಸಮಗ್ರ ವರದಿ ಸಲ್ಲಿಸಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಸರ್ಕಾರ ಮುಂದಿನ ಕ್ರಮ ಜರುಗಿಸಲಿದೆ ಎಂದರು.

ಬೀದರ್ ಜಿಲ್ಲೆಯಲ್ಲಿ ಬಗ್ಗೆ ಸಾಕಷ್ಟು ಪ್ರಮಾಣದಲ್ಲಿ ಅನಧಿಕೃತ ಶಾಲೆಗಳು ನಡೆಯುತ್ತಿವೆ ಎಂದು ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅವರು ಸರ್ಕಾರದ ಗಮನ ಸೆಳೆದು ಕ್ರಮಕ್ಕೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿರುವೆ. ಅಗತ್ಯ ಮೂಲಸೌಲಭ್ಯ ಇಲ್ಲದಿರುವುದು ಸೇರಿದಂತೆ ಮಕ್ಕಳ ಹಿತದ ವಿರುದ್ಧವಾಗಿ ಟಿನ್ ಶೆಡ್ ನಲ್ಲಿ ಶಾಲೆ ನಡೆಸುತ್ತಿರುವುದು ಖುದ್ದು ಕಂಡಿರುವೆ. ಇಂಥ ಶಾಲೆಗಳು ಇನ್ನೆಷ್ಟು ಇವೆ ಎಂಬಿತ್ಯಾದಿ ಕುರಿತು ತಾಲೂಕುವಾರು ಸಮಗ್ರ ಮಾಹಿತಿಯುಳ್ಳ ವರದಿ ನೀಡಲು ಆದೇಶಿಸಿದ್ದು,ನಿಯಮಬಾಹಿರ ನಡೆಯುತ್ತಿರುವ ಶಾಲೆಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವೆ ಎಂದು ಸ್ಪಷ್ಟಪಡಿಸಿದರು.

ನಾನು ಶಿಕ್ಷಣ ಸಚಿವನ ಜತೆಗೆ ರಾಜ್ಯದ ಒಂದು ಕೋಟಿ ಮಕ್ಕಳ ಪೋಷಕನೂ ಹೌದು. ಶಾಲೆ ಆರಂಭಿಸುವುದು ಪ್ರತಿಷ್ಠೆ ವಿಷಯವಲ್ಲ. ಕರೊನಾ ಹಿನ್ನೆಲೆಯಲ್ಲಿ ಶಾಲೆ ಪ್ರಾರಂಭಿಸುವುದಕ್ಕಿಂತ ಮಕ್ಕಳ ಹಿತವೇ ನಮ್ಮ ಮೊದಲ ಆದ್ಯತೆಯಾಗಿದೆ. ಸೆ. 21ರಿಂದ 9, 10ನೇ ಹಾಗೂ ಪಿಯುಸಿ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗಿ ಶಿಕ್ಷಕರಿಗೆ ಭೇಟಿಯಾಗಿ ವಿವಿಧ ವಿಷಯ ಬಗ್ಗೆ ತಮಗಿರುವ ಗೊಂದಲ ನಿವಾರಣೆ ಮಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿತ್ತು. ಆದರೆ ಮಕ್ಕಳ ಸುರಕ್ಷತೆ, ಆರೋಗ್ಯ ದೃಷ್ಟಿಯಿಂದ ನಾವು ಇದನ್ನೂ ಮುಂದೂಡಿದ್ದೇವೆ ಎಂದು ಸಚಿವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಶಿಕ್ಷಣ ಇಲಾಖೆ ಕಲಬುರಗಿ ವಿಭಾಗ ಅಪರ ಶಿಕ್ಷಣ ಆಯುಕ್ತ ನಳಿನ್ ಅತುಲ್, ಡಿಡಿಪಿಐ ಗಂಗಣ್ಣ ಸ್ವಾಮಿ, ಪ್ರಮುಖರಾದ ಡಾ. ಶೈಲೇಂದ್ರ ಬೆಲ್ದಾಳೆ, ರೇವಣಸಿದ್ದಪ್ಪ ಜಲಾದೆ, ಜಗನ್ನಾಥ ಪಾಟೀಲ್ ಸಿರಕಟನಳ್ಳಿ, ಗುರುನಾಥ ರಾಜಗೀರಾ ಇತರರಿದ್ದರು.

ಅಸೆಂಬ್ಲಿ ಟು ಬೀದರ್ ಟೂರ್
ಬೀದರ್ ಜಿಲ್ಲೆಯಲ್ಲಿ ಅಕ್ರಮವಾಗಿ ಅನೇಕ ಶಾಲೆಗಳು ನಡೆಯುತ್ತಿವೆ ಎನ್ನುವ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿ ಎಂಎಲ್ಸಿ ಅರವಿಂದಕುಮಾರ ಅರಳಿ ಪ್ರಶ್ನೆ ಎತ್ತಿದ್ದರು. ಇದಕ್ಕೆ ಉತ್ತರಿಸಿದ ವೇಳೆ ಸಚಿವ ಸುರೇಶಕುಮಾರ ಅವರು, ಅಧಿವೇಶನ ಮುಗಿಯುತ್ತಲೇ ಸ್ವತಃ ಜಿಲ್ಲೆಗೆ ಭೇಟಿ ನೀಡಿ ಸ್ಥಿತಿಗತಿ ಅವಲೋಕಿಸುವೆ ಎಂದು ಭರವಸೆ ನೀಡಿದ್ದರು. ಇದರಂತೆ ಸಚಿವರು ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲಾಖೆಯಲ್ಲಿನ ಅನೇಕ ಲೋಪದೋಷ, ಸುದೀರ್ಘ ಅವಧಿಯಿಂದ ಸಮಸ್ಯೆ ಮುಂದುವರಿದರೂ ಸಂಬಂಧಿತರು ಕ್ರಮ ಕೈಗೊಳ್ಳದೆ ಮಕ್ಕಳ ಹಿತದ ವಿರುದ್ಧ ನಡೆದುಕೊಳ್ಳುತ್ತಿರುವುದು ತಿಳಿದುಕೊಂಡರು. ಅನಧಿಕೃತ ಶಾಲೆಯವರೊಂದಿಗೆ ಅಧಿಕಾರಿಗಳು ಹೇಗೆ ಶಾಮೀಲಾಗಿದ್ದಾರೆ ಎಂಬ ಅಂಶವೂ ಖಚಿತಪಡಿಸಿಕೊಂಡರು.

ಟಿನ್ ಶೆಡ್ ನಲ್ಲಿ ಶಾಲೆ ಕಂಡು
ದಂಗಾದ ಶಿಕ್ಷಣ ಸಚಿವರು

ಒಂದಲ್ಲ, ಎರಡಲ್ಲ ಬರೋಬ್ಬರಿ ಒಂಭತ್ತು ವರ್ಷಗಳಿಂದ ಟಿನ್ ಶೆಡ್ ನಲ್ಲಿ ಪ್ರಾಥಮಿಕ ಶಾಲೆ ನಡೆಯುತ್ತಿರುವುದನ್ನು ಕಂಡು ಶಿಕ್ಷಣ ಸಚಿವ ಸುರೇಶಕುಮಾರ ದಂಗಾದ ಪ್ರಸಂಗ ಮಂಗಳವಾರ ಇಲ್ಲಿ ಜರುಗಿತು. ತಾಲೂಕಿನ ಯಾಕತಪುರ ಗ್ರಾಮದಲ್ಲಿನ ಇನ್ಫೆಂಟ್ ಜೀಸಸ್ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಕೊಟ್ಟಾಗ ಅಲ್ಲಿನ ಹಾಲತ್ ಕಂಡು ಸಿಡಿಮಿಡಿಗೊಂಡರು. ಇಡೀ ಶಾಲೆ ಟಿನ್ ಶೆಡ್ ನಲ್ಲಿ (ತಗಡನಲ್ಲಿ) ಮಾಡಲಾಗಿದೆ. 2011ರಿಂದ ಶಾಲೆಗೆ ಅನುಮತಿ ಸಿಕ್ಕಿದೆ ಎಂದು ಸಂಸ್ಥೆ ಅಧ್ಯಕ್ಷರು ತಿಳಿಸಿದರು. 9 ವರ್ಷದಿಂದ ಹೀಗೆಯೇ ಮಕ್ಕಳ ಹಿತದ ವಿರುದ್ಧ ನಡೆಸುತ್ತಿರುವುದಕ್ಕೆ ನಾಚಿಕೆಯಾಗುತ್ತಿಲ್ಲವೆ? ಇಂಥದರಲ್ಲಿ ಅದ್ಹೇಗೆ ಪಾಠ ಕಲಿಸುತ್ತಿರಿ? ಈ ವಾತಾವರಣದಲ್ಲಿ ಮಕ್ಕಳು ಓದಲು ಸಾಧ್ಯವೆ? ನಿಮ್ಮ ಮಕ್ಕಳಿಗೂ ಇಂಥ ಶಾಲೆಯಲ್ಲಿ ದಾಖಲಿಸುವಿರಾ? ಎಂದು ತರಾಟೆಗೆ ತೆಗೆದುಕೊಂಡರು. ಸುದೀರ್ಘ ಅವಧಿಯಿಂದ ಈ ಸ್ಥಿತಿಯಲ್ಲಿ ಶಾಲೆ ನಡೆಯುತ್ತಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ತೆಪ್ಪಗೆ ಕುಳಿತಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿದರು. ಮನ್ನಾಎಖೇಳ್ಳಿಯ ಪ್ರಿಯಾ, ನರೇಂದ್ರ ಶಾಲೆ, ಭಂಗೂರಿನ ನೈಟಿಂಗೇಲ್ ಶಾಲೆಗೆ ಭೇಟಿ ನೀಡಿದಾಗಲೂ ಟಿನ್ ಶೆಡ್ ನಲ್ಲಿ ಶಾಲೆ ನಡೆಸುತ್ತಿರುವುದು ನೋಡಿ ಸಚಿವರು ಕಕ್ಕಾಬಿಕ್ಕಿಯಾದರು. ಈ ನಾಲ್ಕೂ ಶಾಲೆಗಳಿಗೆ ಕೂಡಲೇ ನೋಟಿಸ್ ಕೊಟ್ಟಿ ಮುಂದಿನ ಕ್ರಮ ಆರಂಭಿಸಿ ಎಂದು ಜತೆಗಿದ್ದ ಶಿಕ್ಷಣ ಇಲಾಖೆ ಕಲಬುರಗಿ ಅಪರ ಆಯುಕ್ತ ನಳಿನ್ ಅತುಲ್ ಅವರಿಗೆ ಸೂಚಿಸಿದರು. ಕನಿಷ್ಠ ಸೌಲಭ್ಯಗಳಿಲ್ಲದ್ದಿದ್ದರೂ ಶಾಲೆಗಳಿಗೆ ಅನುಮತಿ ಕೊಟ್ಟ ಅಧಿಕಾರಿಗಳು ಎಲ್ಲೇ ಇದ್ದರೂ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ನಂತರ ಸಚಿವರು ಬೀದರ್ ನಗರದ ಜನಸೇವಾ ಹಿರಿಯ ಪ್ರಾಥಮಿಕ ಶಾಲೆ, ರಹೇಮಾ ಕಿರಿಯ ಪ್ರಾಥಮಿಕ ಶಾಲೆಗೂ ಭೇಟಿ ನೀಡಿ ವಿವಿಧ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

ಶಿಕ್ಷಣ ಇಲಾಖೆ ಕಲಬುರಗಿ ಅಪರ ಆಯುಕ್ತರ ನೇತೃತ್ವದ ತಂಡ ಜಿಲ್ಲೆಯ ಪ್ರತಿಯೊಂದು ತಾಲೂಕು, ಗ್ರಾಪಂವಾರು ಪರಿಶೀಲನೆ ನಡೆಸಿ, ಅನಧಿಕೃತ ಶಾಲೆ ಪಟ್ಟಿ ಸಿದ್ಧಪಡಿಸಲಿದೆ. ಈ ಪಟ್ಟಿ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು. ಕನಿಷ್ಟ ಸೌಲಭ್ಯಗಳು ಇಲ್ಲದಿದ್ದರೂ ನಿಯಮ ಉಲ್ಲಂಘಿಸಿ ಅನುಮತಿ ಕೊಟ್ಟಿದಂಥ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು.ಸುರೇಶಕುಮಾರ, ಶಿಕ್ಷಣ ಸಚಿವ

ಅನಧಿಕೃತ ಶಾಲೆಯ ಆಡಳಿತ ಮಂಡಳಿಯವರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಅಪವಿತ್ರ ಮೈತ್ರಿ ಮಾಡಿಕೊಂಡು ಜಿಲ್ಲೆಯ ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ. ಸುದೀರ್ಘ ಅವಧಿಯಿಂದ ನೂರಾರು ಅನಧಿಕೃತ ಶಾಲೆಗಳು ನಡೆಯುತ್ತಿರುವ ಕುರಿತು ಮಾಹಿತಿ ಇದೆ. ಆದರೆ ಈವರೆಗೆ ಯಾರೂ ಕ್ರಮವೇಕೆ ಕೈಗೊಂಡಿಲ್ಲ? ಶಾಲೆಗಳು ಸಹ ಕಣ್ಣಿಗೆ ಕಾಣಿಸದಂತಾಯಿತಾ?ಇನ್ನಾದರೂ ಸರ್ಕಾರ ವಿಷಯ ಗಂಭೀರ ಪರಿಗಣಿಸಿ ಕ್ರಮ ಕೈಗೊಳ್ಳಬೇಕು.-ಅರವಿಂದಕುಮಾರ ಅರಳಿ, ವಿಧಾನ ಪರಿಷತ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net