

ತುಮಕೂರು: ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ನಾಯಿಕೊಡೆಗಳಂತೆ ತಲೆಎತ್ತುತ್ತಿರುವ ರೆಸಾರ್ಟ್ಗಳು, ಹೋಂ ಸ್ಟೇ, ಲಾಡ್ಜ್ಗಳು ಹಾಗೂ ವಿವಿಧ ಮನರಂಜನಾ ತಾಣಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಿದೆ.
ಅರೆಗುಜ್ಜನಹಳ್ಳಿ ಗ್ರಾಪಂ ವ್ಯಾಪ್ತಿಯ ದುರ್ಗದಹಳ್ಳಿ ಸುತ್ತಮುತ್ತಲಿನ ರೆಸಾರ್ಟ್ಗಳು, ಹೋಂ ಸ್ಟೇಗಳು, ಲಾಡ್ಜ್ ಗಳು, ವಿವಿಧ ಕ್ರೀಡಾ- ಮನೋರಂಜನಾ ತಾಣಗಳ ಅಧಿಕೃತತೆ ಹಾಗೂ ಅಲ್ಲಿ ಗ್ರಾಹಕರ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಾಮಾಜಿಕ ಕಾರ್ಯಕರ್ತ ಆರ್.ವಿಶ್ವನಾಥನ್ ಸಿಎಂ ಕಚೇರಿಗೆ ದೂರಿದ್ದರು.ಈ ಹಿನ್ನೆಲೆಯಲ್ಲಿ ಅನಧಿಕೃತ ರೆಸಾರ್ಟ್, ಹೋಸ್ಟೇಗಳು, ಲಾಡ್ಜ್ಗಳ ಅಧಿಕೃತತೆ ಬಗ್ಗೆ "ನಿಯಮಾನುಸಾರ ಸೂಕ್ತ ಕ್ರಮ' ಕೈಗೊಳ್ಳುವಂತೆ ಮುಖ್ಯಮಂತ್ರಿ ಕಚೇರಿ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ತಾಲೂಕು ಪಂಚಾಯಿತಿ ಇಒಗೆ ಮುಂದಿನ ಕ್ರಮಕ್ಕೆ ಸೂಚಿಸಿದ್ದಾರೆ.
ತುಮಕೂರಿನ ಸಾಮಾಜಿಕ ಕಾರ್ಯಕರ್ತ ಆರ್.ವಿಶ್ವನಾಥನ್ ಮಾ.11ರಂದು ಸಲ್ಲಿಸಿದ್ದ ಅರ್ಜಿಯನ್ನು ಮಾ.18ರಂದು ಜಿಲ್ಲಾಧಿಕಾರಿಗೆ ರವಾನಿಸಿರುವ ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ (ಆಡಳಿತ) ನಿಯಮಾನುಸಾರ ಸೂಕ್ತ
ಕ್ರಮಕ್ಕೆ ಸೂಚಿಸಿದ್ದರು. ಏ.16ರಂದು ತುಮಕೂರು ತಾಪಂ ಇಒಗೆ ಜಿಲ್ಲಾಧಿಕಾರಿ ರವಾನಿಸಿದ್ದಾರೆ.
ಅರೆಗುಜ್ಜನಹಳ್ಳಿ ಗ್ರಾಪಂ ಪಿಡಿಒಗೆ ಮೇ 23ರಂದು ತಾಪಂ ಜ್ಞಾಪನ ಪತ್ರ ಬರೆದಿದ್ದು, "ಖುದ್ದು ಸದರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಂಡು ತೆಗೆದುಕೊಂಡ ಕ್ರಮದ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಿ ಹಾಗೂ ಈ ಕಚೇರಿಗೆ ವರದಿ ನೀಡಲು' ಸೂಚಿಸಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ತಪಸಣೆ ಆರಂಭವಾಗಿದೆ.
ಹಲವು ಪ್ರಶ್ನೆ ಉದ್ಭವ: ಅರೆಗುಜ್ಜನಹಳ್ಳಿ ಗ್ರಾಪಂ ವ್ಯಾಪ್ತಿಯ ದುರ್ಗದಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಕ್ರಿಯವಾಗಿರುವ ರೆಸಾರ್ಟ್ಗಳು, ಲಾಡ್ಜ್ಗಳು, ಹೋಂ ಸ್ಟೇಗಳು, ವಿವಿಧ ರೀತಿಯ ಕ್ರೀಡಾ ಚಟುವಟಿಕೆಗಳ ಕೇಂದ್ರ ಮೊದಲಾದ ವಿಶ್ರಾಂತಿ, ಮನರಂಜನೆ, ಆಹಾರ-ವಿಹಾರ ತಾಣಗಳ ಬಗ್ಗೆ ನಿಖರವಾದ ಮಾಹಿತಿ ಸ್ಥಳಿಯ ಆಡಳಿತದ ಬಳಿಯಿಲ್ಲ.ಬಹುತೇಕರು ಅನಧಿಕೃತವಾಗಿ ಇಂತಹ ಕೇಂದ್ರಗಳನ್ನು ಆರಂಭಿಸಿದ್ದು, ಜನರ ಸುರಕ್ಷತೆ ಬಗ್ಗೆ ಆತಂಕವಿದೆ. ಈ ಕೇಂದ್ರಗಳ ಮಾಲೀಕರು ಯಾರು? ವಿಳಾಸವೇನು? ಯಾವ ಜಾಗದಲ್ಲಿದೆ? ಆ ಜಾಗದ ವಿಸ್ತೀರ್ಣವೆಷ್ಟು? ಅಗ್ನಿಶಾಮಕದಳ, ಪೊಲೀಸ್, ಆಹಾರ, ಅರಣ್ಯ, ಅಬಕಾರಿ, ಗ್ರಾಮ ಪಂಚಾಯಿತಿ ಇತ್ಯಾದಿ ಸಕ್ಷಮ ಪ್ರಾಧಿಕಾರಗಳಿಂದ ಅಗತ್ಯ ಪರವಾನಗಿ, ಎನ್ಒಸಿ ಪಡೆಯಲಾಗಿದೆಯೇ?, ಗ್ರಾಪಂಗೆ ಸಕಾಲಿಕವಾಗಿ ತೆರಿಗೆ ಪಾವತಿಸುತ್ತಿವೆಯೇ? ಇಲ್ಲಿರುವ ಕಟ್ಟಡಗಳು ಎಂಥವು? ಏನೆಲ್ಲ ಸೌಲಭ್ಯಗಳಿವೆ? ಗ್ರಾಹಕರ ರಕ್ಷಣೆ ಸುರಕ್ಷತೆಗೆ ಕೈಗೊಂಡಿರುವ ಕ್ರಮ ಗಳೇನು? ಆಹಾರದ ಗುಣಮಟ್ಟ ಹೇಗಿದೆ? ಇಲ್ಲಿ ಉತ್ಪತ್ತಿಯಾಗುವ ಹಸಿ ಹಾಗೂ ಒಣಕಸದ ವಿಲೇವಾರಿ ಹೇಗಾಗುತ್ತದೆ? ಇತ್ಯಾದಿಗಳೆಲ್ಲ ಪ್ರಶ್ನಾರ್ಹ ಹಾಗೂ ಚರ್ಚಾರ್ಹ ವಿಚಾರವಾಗಿದೆ.
ಕ್ರಮಕೈಗೊಳ್ಳಲು ಜಿಪಂ ಸಿಇಒಗೂ ಸೂಚನೆ
ಸಾಮಾಜಿಕ ಕಾರ್ಯಕರ್ತ ಆರ್.ವಿಶ್ವನಾಥನ್ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ರ್ಖಗೆ ಅವರಿಗೂ ಈ ಬಗ್ಗೆ ದೂರು ಸಲ್ಲಿಸಿದ್ದರು. ಪಂಚಾಯತ್ ರಾಜ್ ಆಯುಕ್ತಾಲಯ ಅರ್ಜಿ ಪರಿಶೀಲಿಸಿ ಸೂಕ್ತ ಕ್ರಮಕ್ಕಾಗಿ ಏ.2ರಂದು ತುಮಕೂರು ಜಿಪಂ ಸಿಇಒ ಪ್ರಭು ಅವರಿಗೆ ಪತ್ರ ರವಾನಿಸಿದೆ. ಮನವಿ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡುವಂತೆ ಹಾಗೂ ಆಯುಕ್ತಾಲಯಕ್ಕೆ ವರದಿ ನೀಡಲು ಆಯುಕ್ತಾಲಯದ ನಿರ್ದೇಶಕರು ಜಿಪಂ ಸೂಚಿಸಿದ್ದಾರೆ.
ದೇವರಾಯನದುರ್ಗ ಅರಣ್ಯ ಪ್ರದೇಶವನ್ನು ಉಳಿಸುವ ಹೊಣೆಗಾರಿಕೆ ಎಲ್ಲರ ಮೇಲೂ ಇದೆ, ಈ ಅಕ್ರಮ ರೆಸಾರ್ಟ್ಗಳಿಗೆ ಕಡಿವಾಣ ಹಾಕುವ ಮೂಲಕ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯ ತಪ್ಪಿಸಬಹುದು. ಹಾಗಾಗಿ, ಸಿಎಂ ಕಚೇರಿಗೆ ಮಾಡಿದ್ದ ಮನವಿಗೆ ಸ್ಪಂದಿಸಿದ್ದು ಜಿಲ್ಲಾಧಿಕಾರಿ ಸೂಕ್ತ ಕ್ರಮಕೈಗೊಳ್ಳಬೇಕು.
> ಆರ್.ವಿಶ್ವನಾಥನ್ ಸಾಮಾಜಿಕ ಕಾರ್ಯಕರ್ತ