

ಬ್ಯಾಡಗಿ: ಪಟ್ಟಣದಲ್ಲಿ ಅನಧಿಕೃತ ಮಾಂಸದಂಗಡಿಗಳು ತಲೆ ಎತ್ತಿದ್ದು, ಪುರಸಭೆ ನಿಯಮಗಳನ್ನು ಪಾಲಿಸದಿದ್ದಲ್ಲಿ ನೋಟಿಸ್ ನೀಡುವ ಮೂಲಕ ಕ್ರಮ ಜರುಗಿಸಲಾಗುವುದು ಎಂದು ಮಾಂಸ ಮಾರಾಟಗಾರರಿಗೆ ತಹಸೀಲ್ದಾರ್ ಶರಣಮ್ಮ ಕಾರಿ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಶುಕ್ರವಾರ ಪಟ್ಟಣದ ಹಂಸಭಾವಿ ರಸ್ತೆ ಹಾಗೂ ಕದರಮಂಡಲಗಿ ರಸ್ತೆಗಳಲ್ಲಿರುವ ವಿವಿಧ ಅಂಗಡಿಗಳಿಗೆ ಸಾರ್ವಜನಿಕರ ದೂರಿನ ಮೇರೆಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿದರು. ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕುರಿ, ಕೋಳಿ ಹಾಗೂ ಜಾನುವಾರ ಮಾಂಸಗಳ ಮಾರಾಟಕ್ಕೆ ಅನುಮತಿ ಕಡ್ಡಾಯ. ಪಟ್ಟಣದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಅಂಗಡಿಗಳ ಮಾಲೀಕರ ಹೆಸರುಗಳನ್ನು ನೊಂದಾಯಿಸಿಕೊಂಡು, ನಿಗದಿಪಡಿಸಿದ ಶುಲ್ಕ ತುಂಬಿ ಪರವಾನಗಿ ಪತ್ರ ಪಡೆಯಬೇಕಿದೆ. ನೋಂದಾವಣೆ ವೇಳೆ ಷರತ್ತುಗಳನ್ನು ತಿಳಿಸಲಾಗಿದ್ದು, ಅವುಗಳನ್ನು ತಪ್ಪದೆ ಎಲ್ಲ ಮಾರಾಟಗಾರರು ಪಾಲಿಸಬೇಕು. ತಪ್ಪಿದಲ್ಲಿ ಪುರಸಭೆ ಕ್ರಮಕ್ಕೆ ಮುಂದಾಗಲಿದೆ. ಯಾವುದೇ ಅನಧಿಕೃತ ಅಂಗಡಿಗಳಿಗೆ ಅವಕಾಶವಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮಾಂಸ ಮಾರಾಟಗಾರರು ಹಲವು ನಿಯಮ ಪಾಲಿಸಬೇಕಿದ್ದು, ಕುರಿ ಹಾಗೂ ಜಾನುವಾರುಗಳನ್ನು ಪಶುವೈದ್ಯಾಧಿಕಾರಿಗಳು ಪರೀಕ್ಷಿಸಿ ಪ್ರಮಾಣ ಪತ್ರ ನೀಡುವವರೆಗೂ ಕತ್ತರಿಸಲು ಅವಕಾಶಗಳಿಲ್ಲ. ನಿಯಮ ಉಲ್ಲಂಘನೆ ಕುರಿತು ದೂರಿದೆ. ಈ ಕುರಿತು ಪಶುವೈದ್ಯಾಧಿಕಾರಿಗಳು ತಮ್ಮ ಗಮನಕ್ಕೆ ತಂದಿದ್ದಾರೆ. ಕುರಿ, ಜಾನುವಾರು ಕತ್ತರಿಸುವ ಮುನ್ನ, ಅವುಗಳ ಆರೋಗ್ಯ ಹಾಗೂ ವಯಸ್ಸುಗಳ ಕುರಿತು ಪಶುವೈದ್ಯಾಧಿಕಾರಿಗಳ ಅನುಮತಿ ಪಡೆಯಬೇಕು. ಮಾಂಸವನ್ನು ಅಂಗಡಿ ಎದುರು ತೂಗುಹಾಕುವುದು, ಸ್ವಚ್ಛತೆ ನಿರ್ಲಕ್ಷಿಸುವುದು ಸರಿಯಲ್ಲ, ಸಾರ್ವಜನಿಕರ ಆರೋಗ್ಯದತ್ತ ಗಮನಹರಿಸಬೇಕು. ಸೊಳ್ಳೆ, ನೊಣ, ಕ್ರಿಮಿಕೀಟಗಳು ಅವುಗಳ ಮೇಲೆ ಕುಳಿತುಕೊಳ್ಳದಂತೆ ಮಾರಾಟಗಾರರು ಜಾಗೃತಿ ವಹಿಸಬೇಕು ಎಂದು ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಮಾತನಾಡಿ, ಪಟ್ಟಣದಲ್ಲಿ ಸುಮಾರು 15ಕ್ಕೂ ಹೆಚ್ಚು ಕೋಳಿ ಅಂಗಡಿಗಳು, 8 ಮಟನ್ ಮಾರುವ ಅಂಗಡಿಗಳಿವೆ. ಇವುಗಳಲ್ಲಿ 8 ಅಂಗಡಿಗಳು ಮಾತ್ರ ಅಧಿಕೃತ ಪರವಾನಗಿ ಪಡೆದಿದ್ದು, ಇನ್ನುಳಿದ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಸಂಬಂಧಿಸಿದವರ ಸಭೆ ನಡೆಸಿ ಶೀಘ್ರದಲ್ಲೇ ಕ್ರಮ ಜರುಗಿಸಲಾಗುವುದು ಎಂದರು. ಈ ವೇಳೆ ಮಾಜಿ ಸೈನಿಕ ಮಲ್ಲೇಶಪ್ಪ ಚಿಕ್ಕಣ್ಣನವರ, ಪುರಸಭೆ ಆರೋಗ್ಯಾಧಿಕಾರಿ ಬಿ. ರವಿಕೀರ್ತಿ, ಮಾಲತೇಶ ಹಳ್ಳಿ ಇದ್ದರು.