

ಪಿರಿಯಾಪಟ್ಟಣ: ಅನಧಿಕೃತ ಬೆಳಗಾರರಿಗೆ ತಂಬಾಕು ಮಾರಾಟ ಮಾಡಲು ಮಂಡಳಿ ಅವಕಾಶ ಮಾಡಿಕೊಡದಿದ್ದಲ್ಲಿ ಫೆ.15ರಂದು ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್ ತಿಳಿಸಿದರು.
ರೈತ ಸಂಘದ ತಾಲೂಕು ಘಟಕ ಮರು ರಚನೆ ಸಂಬಂಧ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ತಂಬಾಕು ಮಂಡಳಿಯಿಂದ ಪರವಾನಗಿ ಹೊಂದಿರುವ ಬೆಳೆಗಾರರಿಂದ ಪ್ರಾರಂಭದಲ್ಲಿ ಉತ್ತಮ ಬೆಲೆ ನೀಡಿ ತಂಬಾಕು ಖರೀದಿಸಿದ್ದ ಕಂಪನಿಗಳು ಈಗ ಏಕಾಏಕಿ ಬೆಲೆ ಕುಸಿತ ಮಾಡಿ ರೈತರನ್ನು ಶೋಷಣೆ ಮಾಡುತ್ತಿವೆ ಎಂದು ಆರೋಪಿಸಿದರು.
ತಿಂಗಳಾಂತ್ಯಕ್ಕೆ ರಾಜ್ಯದಲ್ಲಿ ತಂಬಾಕು ಹರಾಜು ಪ್ರಕ್ರಿಯೆ ಮುಕ್ತಾಯಗೊಳಿಸುವುದಾಗಿ ಹೇಳಿಕೆ ನೀಡಿರುವ ತಂಬಾಕು ಮಂಡಳಿ ರಾಜ್ಯದಲ್ಲಿನ ಅನಧಿಕೃತ ಬೆಳೆಗಾರರಿಂದ ತಂಬಾಕು ಖರೀದಿಸಲು ವಿಳಂಬ ಮಾಡುತ್ತಿದೆ. ಮಂಡಳಿಯ ಈ ಕ್ರಮದಿಂದಾಗಿ ತಂಬಾಕು ಗುಣಮಟ್ಟ ಕಳೆದುಕೊಳ್ಳುತ್ತಿದ್ದು ರೈತರು ಮಾಡಿರುವ ಬೆಳೆ ಸಾಲ ತೀರಿಸಲು ಪರದಾಡುವಂತಾಗಿದೆ. ಹಾಗಾಗಿ ಮಂಡಳಿ ಅಧಿಕಾರಿಗಳು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ರೈತ ಸಂಘದ ತಾಲೂಕು ಘಟಕವನ್ನು ಪುನರ್ ರಚಿಸಲಾಗಿದೆ ಎಂದು ಮಾಹಿತಿ ನೀಡಿದ ಹೊಸೂರು ಕುಮಾರ್ ನೂತನ ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು.
ತಾಲ್ಲೂಕು ಅಧ್ಯಕ್ಷರಾಗಿ ಎ.ಎಸ್.ಸ್ವಾಮಿ ಗೌಡ, ಗೌರವಾಧ್ಯಕ್ಷರಾಗಿ ನವೀನ್ ರಾಜೇ ಅರಸ್, ಕಾರ್ಯಧ್ಯಕ್ಷರಾಗಿ ಎಚ್.ಎಂ.ದಶರಥ, ಪ್ರಧಾನಕಾರ್ಯದರ್ಶಿಯಾಗಿ ಗಡಿ ಗೌಡ, ಉಪಾಧ್ಯಕ್ಷರಾಗಿ ಗುರುರಾಜ್ ಮತ್ತು ಕರಿಗೌಡ, ಖಜಾಂಚಿ ವಿ.ಗಣೇಶ್, ಸಹಕಾರ್ಯದರ್ಶಿ ಧನಂಜಯ್, ಸಂಘಟನಾ ಕಾರ್ಯದರ್ಶಿ ಡೈರಿ ಮಹೇಶ್, ಹರೀಶ್ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ರೈತ ಸಂಘದ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಮುಖಂಡರಾದ ದೇವರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಸ್ವಾಮಿ ಗೌಡ ಹಾಜರಿದ್ದರು.