

ಬೆಂಗಳೂರು: ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆ ರಚಿಸುವುದನ್ನು ತಡೆಯಲು ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಕಾರ್ಯಪಡೆಯ ಬಿಡಿಎ ಹಾಗೂ ಬಿಎಂಐಸಿಎಪಿಎ ಹೊರತುಪಡಿಸಿ ಕಾರ್ಯಾಚರಣೆ ನಡೆಸಲಿದೆ. ಜತೆಗೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ರಾಮನಗರ ಜಿಲ್ಲೆಯಲ್ಲಿರುವ ಎಲ್ಲ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.
ಹೊಸ ಕಾರ್ಯಪಡೆಯನ್ನು ಬಿಎಂಆರ್‌ಡಿಎ ತನ್ನ ಸಂಪನ್ಮೂಲದಿಂದಲೇ ನಿರ್ವಹಿಸಲು ಸೂಚಿಸಲಾಗಿದೆ. ಜತೆಗೆ 10 ಮಂದಿಯ ಅಧಿಕಾರಿ, ಸಿಬ್ಬಂದಿಯನ್ನು ಒಂದು ವರ್ಷದ ಮಟ್ಟಿಗೆ ನಿಯೋಜಿಸಲಾಗುತ್ತದೆ. ಡಿವೈಎಸ್‌ಪಿ ನೇತೃತ್ವ ಹೊಂದಿರುವ ಈ ಕಾರ್ಯಪಡೆಯಲ್ಲಿ ತಲಾ ಒಬ್ಬ ಪೊಲೀಸ್ ಇನ್‌ಸ್ಪೆಕ್ಟರ್, ತಹಸೀಲ್ದಾರ್, ಕಂದಾಯ ಅಧಿಕಾರಿ, ಯೋಜನಾ ವಿಭಾಗದ ಸಹಾಯಕ ನಿರ್ದೇಶಕ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಇರುತ್ತಾರೆ. ಇವರಲ್ಲದೆ ಇಬ್ಬರು ಪೇದೆಗಳು, ತಲಾ ಒಬ್ಬ ಪ್ರಥಮದರ್ಜೆ ಸಹಾಯಕ ಮತ್ತು ಡಾಟಾ ಎಂಟ್ರಿ ಆಪರೇಟರ್ ಕಾರ್ಯನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ.
ಕಾರ್ಯಪಡೆಯ ಕಾರ್ಯ ಏನು?:
* ಕಾರ್ಯಪಡೆಯು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಯಲ್ಲಿ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಮುಖ್ಯವಾಗಿ ಕಾನೂನುಬಾಹಿರ ಭೂ ಉಪಯೋಗದಲ್ಲಿ ಬದಲಾವಣೆ ಹಾಗೂ ಕಟ್ಟಡಗಳನ್ನು ಗುರುತಿಸಲಾಗುತ್ತದೆ.
* ಅನಧಿಕೃತ ಬಡಾವಣೆಗಳು ರಚನೆಯಾಗದಂತೆ ನಿಗಾ ವಹಿಸುವಂತೆ ಸೂಚಿಸಲಾಗಿದೆ.
* ಜಮೀನು ಮತ್ತು ಸ್ವತ್ತಿನಲ್ಲಿ ಅತಿಕ್ರಮ ಆಕ್ರಮಿಸುವಿಕೆ ಪ್ರಕರಣಗಳನ್ನು ಗುರುತಿಸುವುದು.
* ಅನಧಿಕೃತ ಕಾರ್ಯ ನಿಲ್ಲಿಸಲು ನೋಟಿಸ್ ಜಾರಿ ಹಾಗೂ ಆಯಾ ಪ್ರದೇಶದ ಮೊದಲಿನ ಸ್ಥಿತಿಗೆ ತರುವುದು.
* ಅನಧಿಕೃತ ಬೆಳವಣಿಗೆ ತಡೆಯುವ ಸಂಬಂಧ ಕೋರ್ಟ್ ಪ್ರಕರಣಗಳಿಗೆ ಹಾಜರಾಗುವುದು.
* ಬಿಎಂಆರ್‌ಡಿಎ ಆಯುಕ್ತರು ಪ್ರಾಧಿಕಾರದ ಮೂಲ ಆಶಯಗಳಿಗೆ ಪೂರಕವಾಗಿ ಸೂಚಿಸುವ ಇತರ ಕ್ರಮವನ್ನು ಕೈಗೊಳ್ಳುವುದು.