ಅನಧಿಕೃತ ನಳಗಳಿಗೆ ಬೇಕಿದೆ ಕಡಿವಾಣ

water tap
Published on

ನರೇಗಲ್ಲ: ಪಟ್ಟಣ ಸೇರಿ ಮಜರೆ ಗ್ರಾಮಗಳಲ್ಲಿ ಅನಧಿಕೃತ ನಳಗಳ (ನಲ್ಲಿ) ಸಂಖ್ಯೆ ಅಧಿಕವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಅಕ್ರಮಕ್ಕೆ ಕಡಿವಾಣ ಹಾಕದ ಕಾರಣ ಪಟ್ಟಣ ಪಂಚಾಯಿತಿ ಆದಾಯಕ್ಕೆ ಕತ್ತರಿ ಬೀಳುತ್ತಿದೆ.

ಜಿಲ್ಲಾಡಳಿತ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಪಟ್ಟಣದ 17 ವಾರ್ಡ್​ಗಳಿಗೆ ಪ್ರತಿದಿನ ನಾಲ್ಕೈದು ತಾಸು ನೀರು ಪೂರೈಸುತ್ತಿದೆ. ಪಪಂ ವ್ಯಾಪ್ತಿಯ 17 ಕೊಳವೆಬಾವಿಗಳ ನೀರನ್ನು ಕೋಡಿಕೊಪ್ಪ, ಮಲ್ಲಾಪುರ, ದ್ಯಾಂಪುರ, ಕೋಚಲಾಪುರ, ತೋಟಗಂಟಿ ಗ್ರಾಮಗಳಿಗೆ ನಿತ್ಯ ಸರಬರಾಜು ಮಾಡಲಾಗುತ್ತಿದೆ. ಇನ್ನುಳಿದ 12 ವಾರ್ಡ್​ಗಳಿಗೆ ವಾರದಲ್ಲಿ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಪಪಂ ವ್ಯಾಪ್ತಿಯಲ್ಲಿ 1349 ಅಧಿಕೃತ ನಳಗಳನ್ನು ಅಳವಡಿಸಲಾಗಿದೆ. ಆದರೆ, 500ಕ್ಕೂ ಅಧಿಕ ಅನಧಿಕೃತ ನಳಗಳು ಇವೆ.

ಅಧಿಕೃತ ನಳ ಪಡೆದವರು ವರ್ಷಕ್ಕೆ 920 ರೂಪಾಯಿಗಳನ್ನು ಪಪಂಗೆ ಪಾವತಿಸಬೇಕು. ಆದರೆ, ಕುಡಿಯುವ ನೀರು ಸರಿಯಾಗಿ ಸಿಗದೆ ಪರಿತಪಿಸುವ ಪರಿಸ್ಥಿತಿ ನಿರ್ವಣವಾಗಿದೆ. ಇನ್ನು ಹಲವಾರು ಮನೆಗಳಲ್ಲಿ ವಿದ್ಯುತ್ ಪಂಪ್ ಅಳವಡಿಸಿಕೊಂಡಿರುವುದರಿಂದ, ಅಕ್ಕಪಕ್ಕದ ಮನೆಗಳಿಗೆ ನೀರು ಸಮರ್ಪಕವಾಗಿ ಪೂರೈಕೆಯಗುತ್ತಿಲ್ಲ. ಇದು ಅಧಿಕಾರಿಗಳಿಗೆ ತಲೆನೋವಾಗಿದೆ.

ಅನಧಿಕೃತ ನಳಗಳಿಂದಾಗಿ ನಿಯಮಿತವಾಗಿ ಕರ ಪಾವತಿಸುವ ನಮಗೆ ನೀರು ಸರಿಯಾಗಿ ಬರುವುದಿಲ್ಲ. ನೀರು ಬಿಡುವ ಅವಧಿಯಲ್ಲೂ ಕಾಯುತ್ತ ಕುಳಿತುಕೊಳ್ಳಬೇಕು. ಅನಧಿಕೃತ ನಳಗಳಿಂದ ಲಕ್ಷಾಂತರ ಲೀಟರ್ ನೀರು ನಷ್ಟವಾಗುತ್ತದೆ. ಕೂಡಲೇ ಪಪಂ ಅಧಿಕಾರಿಗಳು ಅನಧಿಕೃತ, ವಿದ್ಯುತ್ ಮೋಟರ್ ಬಳಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.| ಅಶೋಕ ಬೇವಿನಕಟ್ಟಿ, ನರೇಗಲ್ಲ ನಿವಾಸಿನರೇಗಲ್ಲ ಪಟ್ಟಣ ಸೇರಿ ಮಜರೆ ಗ್ರಾಮಗಳಲ್ಲಿ ಅನಧಿಕೃತ ನಳ ಸಂಪರ್ಕ ಹೊಂದಿರುವವರಿಗೆ ಪಪಂದಿಂದ ನೋಟಿಸ್ ನೀಡಲಾಗುತ್ತಿದೆ. ಅವರಲ್ಲಿ ಕೆಲವರು ಹಣ ಪಾವತಿಸಿ ಸಕ್ರಮಗೊಳಿಸಿಕೊಂಡಿದ್ದಾರೆ. ಇನ್ನುಳಿದವರು ಒಂದು ವಾರದೊಳಗೆ ಅನಧಿಕೃತ ನಳಗಳನ್ನು ಸಕ್ರಮ ಪಡಿಸಿಕೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.| ಎಂ.ಎ. ನೂರುಲ್ಲಾಖಾನ್, ನರೇಗಲ್ಲ ಪಪಂ ಪ್ರಭಾರಿ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net